ದೇಶದಲ್ಲಿ ಲಿಂಗಾನುಪಾತ ಹೆಚ್ಚಳ

Update: 2021-01-24 05:04 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜ.24: ದೇಶದಲ್ಲಿ ಕಳೆದ ಐದು ವರ್ಷದಲ್ಲಿ ಲಿಂಗಾನುಪಾತ ಏರಿಕೆಯಾಗಿದೆ. 2014-15ರಲ್ಲಿ ಪ್ರತಿ 1000 ಪುರುಷರಿಗೆ 918 ಮಹಿಳೆಯರಿದ್ದರೆ, 2019-20ರಲ್ಲಿ ಈ ಪ್ರಮಾಣ 934ಕ್ಕೇರಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.

2015ರ ಜನವರಿಯಲ್ಲಿ ಜಾರಿಗೆ ತಂದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಕೈಗೊಂಡ ಜಾಗೃತಿ ಮತ್ತು ಸಂವೇದನಾಶೀಲತೆ ಕ್ರಮಗಳಿಂದಾಗಿ ಈ ಸಾಧನೆಯಾಗಿದೆ ಎಂದು ಸಚಿವಾಲಯ ಹೇಳಿಕೊಂಡಿದೆ. ಈ ಯೋಜನೆಯ ವ್ಯಾಪ್ತಿಯಲ್ಲಿ ಸೇರಿದ 640 ಜಿಲ್ಲೆಗಳ ಪೈಕಿ 442 ಜಿಲ್ಲೆಗಳಲ್ಲಿ ಜನನ ಹಂತದಲ್ಲೇ ಲಿಂಗಾನುಪಾತ (ಎಸ್‌ಆರ್‌ಬಿ) ಹೆಚ್ಚಳ ಕಂಡುಬಂದಿದೆ ಎಂದು ವಿವರಿಸಿದೆ.

ಜನವರಿ 24ನ್ನು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಈ ಹೇಳಿಕೆ ಬಿಡುಗಡೆ ಮಾಡಿದೆ. ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಸಮಾಜದ ನಡವಳಿಕೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ 2015ರ ಜನವರಿ 22ರಂದು ಕೇಂದ್ರ ಸರಕಾರ ಹರ್ಯಾಣದ ಪಾಣಿಪತ್‌ನಲ್ಲಿ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಗೆ ಚಾಲನೆ ನೀಡಿತ್ತು.

ಆರೋಗ್ಯ ನಿರ್ವಹಣೆ ಮಾಹಿತಿ ವ್ಯವಸ್ಥೆಯಡಿ ಸಂಗ್ರಹಿಸಿದ ಎಸ್‌ಆರ್‌ಬಿ ಅಂಕಿ ಅಂಶವನ್ನು ಸಚಿವಾಲಯ ಬಿಡುಗಡೆ ಮಾಡಿದ್ದು, 2014-15ರಲ್ಲಿ ತೀರಾ ಕಡಿಮೆ ಪ್ರಮಾಣದ ಎಸ್‌ಆರ್‌ಬಿ ಇದ್ದ 15 ಜಿಲ್ಲೆಗಳಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ ಎಂದು ಹೇಳಿದೆ. ಉದಾಹರಣೆಗೆ ಉತ್ತಮ ಪ್ರದೇಶದ ಮಾವು ಜಿಲ್ಲೆಯಲ್ಲಿ 2014-15ರಲ್ಲಿ 694 ಇದ್ದ ಲಿಂಗಾನುಪಾತ ಐದು ವರ್ಷಗಳಲ್ಲಿ 951ಕ್ಕೇರಿದೆ. ಹರ್ಯಾಣದ ಕರ್ನಾಲ್‌ನಲ್ಲಿ 758ರಿಂದ 898ಕ್ಕೆ, ಮಹೇಂದ್ರಗಢದಲ್ಲಿ 791ರಿಂದ 919ಕ್ಕೆ, ಹರ್ಯಾಣದಲ್ಲಿ 803ರಿಂದ 924ಕ್ಕೆ, ಪಂಜಾಬ್‌ನ ಪಟಿಯಾಲಾದಲ್ಲಿ 847ರಿಂದ 933ಕ್ಕೆ ಹೆಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News