ಕೇಂದ್ರದ ಹೊಸ ಕೃಷಿ ಕಾನೂನು ವಿರುದ್ಧ ಸಮರಕ್ಕೆ ರೈತರು ಸಜ್ಜು : ಐತಿಹಾಸಿಕ ಟ್ರ್ಯಾಕ್ಟರ್ ರ‍್ಯಾಲಿಗೆ ಕ್ಷಣಗಣನೆ

Update: 2021-01-26 03:23 GMT

ಹೊಸದಿಲ್ಲಿ : ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧದ ನಿರ್ಣಾಯಕ ಸಮರಕ್ಕೆ ರೈತರು ಸಜ್ಜಾಗಿದ್ದು, ಐತಿಹಾಸಿಕ ಟ್ರ್ಯಾಕ್ಟರ್ ರ‍್ಯಾಲಿಗೆ ಕ್ಷಣಗಣನೆ ಆರಂಭವಾಗಿದೆ.

ತ್ರಿವರ್ಣ ಧ್ವಜ ಮತ್ತು ಬ್ಯಾನರ್‌ಗಳಿಂದ ಕಂಗೊಳಿಸುತ್ತಿರುವ ಟ್ರ್ಯಾಕ್ಟರ್‌ಗಳ ಸುನಾಮಿ ರಾಷ್ಟ್ರರಾಜಧಾನಿಯತ್ತ ಹರಿದಿದೆ. ಪಂಜಾಬ್ ಮತ್ತು ಹರ್ಯಾಣದ ಪ್ರತಿ ಹಳ್ಳಿ, ಗ್ರಾಮ, ನಗರಗಳಿಂದ ಸಾಲು ಸಾಲು ಟ್ರ್ಯಾಕ್ಟರ್‌ಗಳು ದೆಹಲಿ ಗಡಿಯತ್ತ ಆಗಮಿಸುತ್ತಿದ್ದು, ಬಹುತೇಕ ಎಲ್ಲ ರಸ್ತೆಗಳು ಟ್ರ್ಯಾಕ್ಟರ್‌ಮಯವಾಗಿವೆ.

ಸ್ವಯಂಸೇವಕರು ಇನ್ನೊಂದೆಡೆ ಸಂಚಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸುತ್ತಿದ್ದರೆ, ಮತ್ತೊಂದು ಗುಂಪು ಪರೇಡ್‌ನಲ್ಲಿ ಭಾಗವಹಿಸುವ ರೈತರ ಗುಂಪುಗಳನ್ನು ನೋಂದಾಯಿಸುವ ಕಾರ್ಯದಲ್ಲಿ ತೊಡಗಿದ್ದು, ರೈತರು ರಾತ್ರಿಯಿಡೀ ಸಿದ್ಧತೆ ಮಾಡುತ್ತಿರುವುದು ಕಂಡುಬಂತು.

ಪಂಜಾಬ್‌ನ ಮಾಳವ, ಮಝಾ ಮತ್ತು ದೊವಾಬಾ ಹೀಗೇ ಮೂರೂ ಪ್ರಾಂತ್ಯಗಳಿಂದ ಸಾವಿರಾರು ಟ್ರ್ಯಾಕ್ಟರ್‌ಗಳಲ್ಲಿ ರೈತರು ಪ್ರತಿಭಟನೆಗೆ ತೆರಳಿದ್ದು, ಶಕ್ತಿಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ದೇಶದ ಅನ್ನದ ಬಟ್ಟಲು ಎಂದು ಕರೆಸಿಕೊಂಡಿರುವ ರಾಜ್ಯದಲ್ಲಿ ಹೆಮ್ಮೆ ಮತ್ತು ಸಮೃದ್ಧಿಯ ಸಂಕೇತವಾದ ಟ್ರ್ಯಾಕ್ಟರ್‌ಗಳು ಮನೆ ಮುಂದೆ ನಿಂತಿರುವುದು ಸಾಮಾನ್ಯ ದೃಶ್ಯ. ಆದರೆ ಈಗ ಬಹುತೇಕ ಎಲ್ಲ ಮನೆಗಳು ಖಾಲಿಯಾಗಿದ್ದು, ಇಡೀ ಕುಟುಂಬಗಳೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜಧಾನಿಯತ್ತ ಮುಖ ಮಾಡಿವೆ ಎಂದು ಗ್ರಾಮಸ್ಥರು ವಿವರಿಸುತ್ತಾರೆ.

ಹೆದ್ದಾರಿ ಬದಿ ಸಮುದಾಯ ಪಾಕಶಾಲೆಗಳು ತಲೆ ಎತ್ತಿದ್ದು, ಪ್ರತಿಭಟನೆಗೆ ತೆರಳುವವರ ಆಹಾರ ಅಗತ್ಯತೆಯನ್ನು ಪೂರೈಸುತ್ತಿವೆ. ಅಂಗಡಿಗಳ ಮಾಲಕರು ರೈತರನ್ನು ನೀರು, ಹಣ್ಣಿನ ರಸ ಮತ್ತು ಉಪಾಹಾರಗಳೊಂದಿಗೆ ಸ್ವಾಗತಿಸುತ್ತಿದ್ದಾರೆ.

ಹರ್ಯಾಣದ ರೋಹ್ಟಕ್, ಜಿಂದ್, ಹಿಸಾರ್, ಫದೇಹಾಬಾದ್, ಭಿವಾನಿ ಹಾಗೂ ದಾದ್ರಿ ಜಿಲ್ಲೆಗಳ ಬಹುತೇಕ ಗ್ರಾಮಗಳು ಖಾಲಿಯಾಗಿದ್ದು, ಜನ ಸಾಮೂಹಿಕವಾಗಿ ಟ್ರ್ಯಾಕ್ಟರ್, ಕಾರು, ಎಸ್‌ಯುವಿ ಮತ್ತು ಮೋಟರ್‌ಬೈಕ್‌ಗಳಲ್ಲಿ ದೆಹಲಿಗೆ ತೆರಳಿದ್ದಾರೆ. ನಮ್ಮ ಖಾಪ್‌ನಿಂದ ಕನಿಷ್ಠ 1000 ಟ್ರ್ಯಾಕ್ಟರ್‌ಗಳು ದೆಹಲಿಗೆ ತರಳಿವೆ ಎಂದು ಜಿಂದ್ ಖಂಡೇಲಾ ಖಾಪ್ ಮುಖ್ಯಸ್ಥ ಟಿಕಾರಾಂ ಖಂಡೇಹಾ ಹೇಳಿದ್ದಾರೆ.

ಹಲವು ವಾಹನಗಳಿಗೆ ಬಣ್ಣ ಹಚ್ಚಿ, ಹೂವಿನಿಂದ ಅಲಂಕರಿಸಲಾಗಿದೆ. ತ್ರಿವರ್ಣ ಧ್ವಜವನ್ನು ಒಂದೆಡೆ ಕಟ್ಟಲಾಗಿದ್ದು, ಆಹಾರಧಾನ್ಯ, ಹಾಸಿಗೆ ಮತ್ತು ಇತರ ಅಗತ್ಯ ವಸ್ತುಗಳು ಟ್ರ್ಯಾಕ್ಟರ್‌ನಲ್ಲಿ ಕಂಡುಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News