ಕೆಂಪುಕೋಟೆಯಲ್ಲಿ ಪ್ರತಿಭಟನಾನಿರತ ರೈತರು ಹಾರಿಸಿದ ಕೇಸರಿ ಧ್ವಜದ ಹಿನ್ನೆಲೆಯೇನು ಗೊತ್ತೇ?

Update: 2021-01-26 14:23 GMT

ಹೊಸದಿಲ್ಲಿ,ಜ.26: ಇಂದು ರಾಜಧಾನಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನೂರಾರು  ಪ್ರತಿಭಟನಾಕಾರರು ತಮ್ಮ ನಿಗದಿತ ಪ್ರತಿಭಟನಾ ಮಾರ್ಗದ ಬದಲು ದಿಲ್ಲಿಯ ಕೆಂಪು ಕೋಟೆಯತ್ತ ತೆರಳಿ ಕೋಟೆಯನ್ನು ಏರಿ ಅಲ್ಲಿ ʼನಿಶಾನ್ ಸಾಹಿಬ್ʼ ಎಂಬ ಧಾರ್ಮಿಕ ಕೇಸರಿ ಧ್ವಜವನ್ನು ಹಾರಿಸಿರುವುದು ಭಾರೀ ಸುದ್ದಿಯಾಗಿದೆ.

ಈ ನಿಶಾನ್ ಸಾಹಿಬ್ ಧ್ವಜದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಇದೊಂದು ತ್ರಿಕೋನಾಕೃತಿಯ ಕೇಸರಿ ಬಟ್ಟೆಯಾಗಿದ್ದು ಅದರ ಮಧ್ಯ ಭಾಗದಲ್ಲಿ ಖಂಡಾ ಎಂದು ಕರೆಯಲ್ಪಡುವ ನೀಲಿ ಬಣ್ಣದ ಸಿಖ್ ಲಾಂಛನ ಇದೆ. ಈ ಲಾಂಛನದಲ್ಲಿ ಎರಡು ಅಲಗಿನ ಕತ್ತಿ ಹಾಗೂ ಒಂದು ಚಕ್ರಂ (ಚಕ್ರ) ಇದೆ. ಸಾಮಾನ್ಯವಾಗಿ ಸಿಖ್ಖರ ಪವಿತ್ರ ಸ್ಥಳ ಗುರುದ್ವಾರದ ಹೊರಗೆ ನಿಶಾನ್ ಸಾಹಿಬ್ ಹಾರಿಸಲಾಗುತ್ತದೆ. ಈ ತ್ರಿಕೋನಾಕೃತಿಯ ಧ್ವಜವನ್ನು  ಹಾರಿಸಲು ಬಳಸಲಾಗುವ ಉಕ್ಕಿನ ಸ್ಥಂಭಕ್ಕೂ ಈ ಕೇಸರಿ ಬಣ್ಣದ ಬಟ್ಟೆಯನ್ನು ಸುತ್ತಲಾಗುತ್ತದೆ.

ಈ ಧ್ವಜ ಸಿಖ್ ಸಮುದಾಯಕ್ಕೆ ಬಹಳ ಮಹತ್ವದ್ದಾಗಿದೆ. ಸತ್ಯ ಹಾಗೂ ಅಸತ್ಯ ಯಾವುದು ಎಂದು ತಿಳಿಯಲು ಖಂಡಾ ಒಂದು ಶಕ್ತಿಶಾಲಿ ಸಾಧನವೆಂದೇ ಸಿಖ್ಖರು ನಂಬಿದ್ದಾರೆ. ಸಿಖ್ ಸಮುದಾಯದ ಧಾರ್ಮಿಕ ವಿದ್ವಾಂಸ ಗುರು ಗೋಬಿಂದ್ ಸಿಂಗ್ ಅವರು ಅಮೃತ ತಯಾರಿಸಲು ಇದೇ ಖಂಡಾ ಬಳಸಿ ಅದನ್ನು ಸಿಹಿ ನೀರಿನಲ್ಲಿ ಕಲಕಿದ್ದರೆಂದು ನಂಬಲಾಗಿದೆ.

ಗುರು ಗೋಬಿಂದ್ ಸಿಂಗ್ ಅವರ ನಿಶಾನ್ ಸಾಹಿಬ್‍ನಲ್ಲಿ ʼವಾಹೆಗುರು ಜೀ ಕಿ ಫತೇಹ್' (ಗುರುವಿನ ಜಯ) ಎಂದು ಕೆತ್ತಲಾಗಿದ್ದು, ಮಹಾರಾಜಾ ರಂಜಿತ್ ಸಿಂಗ್ ಅವರ ನಿಶಾನ್ ಸಾಹಿಬ್‍ನಲ್ಲಿ ಅಕಾಲ್ ಸಹೈ (ದೇವರು ನಿಮ್ಮನ್ನು ಆಶೀರ್ವದಿಸಲಿ) ಎಂಬ ಕೆತ್ತನೆಯಿದೆ ಎನ್ನಲಾಗಿದೆ.

ನಿಶಾನ್ ಸಾಹಿಬ್ ಹೊಂದಿದ್ದ ಭಾಯಿ ಆಲಂ ಸಿಂಗ್ ಎಂಬಾತನನ್ನು ಒಮ್ಮೆ ಮುಘಲ್ ಸೇನಾ ಪಡೆಗಳು   ಯುದ್ಧವೊಂದರ ಸಂದರ್ಭ ಸೆರೆ ಹಿಡಿದು ಅದನ್ನು ಎಸೆಯುವಂತೆ ಇಲ್ಲದೇ ಇದ್ದರೆ ಆತನ ಕೈಗಳನ್ನು ಕಡಿಯಲಾಗುವುದು ಎಂದು ಹೇಳಿದ್ದವು. ಆಗ ಸಿಂಗ್, ತನ್ನ ಕೈಗಳನ್ನು ಕಡಿದರೆ ಈ ನಿಶಾನ್ ಸಾಹಿಬ್ ಅನ್ನು ಕಾಲುಗಳಲ್ಲಿ ಹಿಡಿಯುತ್ತೇನೆ ಎಂದು ಉತ್ತರಿಸಿದ್ದ ಎಂದು ಹೇಳಲಾಗಿದೆ. ಆಗ ಮೊಘಲರ ಸೇನೆ ಆತನ ಕಾಲುಗಳನ್ನೂ ಕತ್ತರಿಸುವುದಾಗಿ ಹೇಳಿದಾಗ ಆತ ಆ ಧ್ವಜವನ್ನು ತನ್ನ ಬಾಯಿಯಲ್ಲಿ ಹಿಡಿಯುವುದಾಗಿ ಉತ್ತರಿಸಿದ್ದ, ಆಗ ಆತನ ತಲೆಗಳನ್ನೂ ಕಡಿಯಲಾಗುವುದಾಗಿ ಹೇಳಿದಾಗ ``ಯಾವ ಗುರುವಿನ ಧ್ವಜವನ್ನು ನಾನು ಹಿಡಿದ್ದಿದೇಯೋ ಆ ಗುರುವೇ ಅದನ್ನು ನೋಡಿಕೊಳ್ಳುತ್ತಾರೆ,' ಎಂದು ಆತ ಉತ್ತರಿಸಿದ್ದ ಎಂಬ ನಂಬಿಕೆಯಿರುವ ಕಥೆಯೊಂದು ಸಿಖ್‌ ಸಮುದಾಯದ ನಡುವೆ ಪ್ರಚಲಿತದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News