20 ಕೋಟಿ ಹೆಚ್ಚುವರಿ ಕೋವಿಡ್ ಲಸಿಕೆ ಖರೀದಿಸಲು ಜೋ ಬೈಡನ್ ನಿರ್ಧಾರ

Update: 2021-01-27 04:14 GMT

ವಾಷಿಂಗ್ಟನ್ : ಈ ವರ್ಷದ ಬೇಸಿಗೆಯ ಒಳಗಾಗಿ 60 ಕೋಟಿ ಮಂದಿಗೆ ಕೋವಿಡ್ ಲಸಿಕೆ ತಲುಪಿಸುವ ಕಾರ್ಯಯೋಜನೆಯ ಅಂಗವಾಗಿ 20 ಕೋಟಿ ಹೆಚ್ಚುವರಿ ಕೋವಿಡ್-19 ಲಸಿಕಾಡೋಸ್‌ಗಳನ್ನು ಖರೀದಿಸಲು ಜೋ ಬೈಡನ್ ನೇತೃತ್ವದ ಸರ್ಕಾರ ನಿರ್ಧರಿಸಿದೆ.

ಈ ಮೂಲಕ 30 ಕೋಟಿ ಮಂದಿಗೆ ಲಸಿಕಾ ಸುರಕ್ಷೆ ಒದಗಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಶ್ವೇತಭವನ ಪ್ರಕಟಿಸಿದೆ.

"ಅಮೆರಿಕದ ಎಫ್‌ಡಿಎ ಅನುಮೋದಿಸಿರುವ ಪಿಫಿಝರ್ ಮತ್ತು ಮೊಡೆರ್ನಾ ಲಸಿಕೆಗಳ ಹೆಚ್ಚುವರಿ 20 ಕೋಟಿ ಡೋಸ್‌ಗಳನ್ನು ಖರೀದಿಸಲು ಬೈಡನ್ ಆಡಳಿತ ಕಾರ್ಯೋನ್ಮುಖವಾಗಿದೆ" ಎಂದು ಪ್ರಕಟಣೆ ಹೇಳಿದೆ. ಇದರಿಂದಾಗಿ ಅಮೆರಿಕ ಖರೀದಿಸಲಿರುವ ಲಸಿಕಾ ಡೋಸ್‌ಗಳ ಸಂಖ್ಯೆ 40 ಕೋಟಿಯಿಂದ 60 ಕೋಟಿಗೆ ಹೆಚ್ಚಲಿದೆ. ಬೇಸಿಗೆಯ ಕೊನೆ ವೇಳೆಗೆ 30 ಕೋಟಿ ಅಮೆರಿಕನ್ನರು ಲಸಿಕೆ ಪಡೆಯಲಿದ್ದಾರೆ ಎಂದು ವಿವರಿಸಿದೆ.

ರಾಜ್ಯಗಳಿಗೆ ಪ್ರತಿ ವಾರ ಪೂರೈಕೆಯಾಗುವ ಲಸಿಕಾ ಡೋಸ್ ಹೆಚ್ಚಿಸಲು ಕೂಡಾ ಸರ್ಕಾರ ನಿರ್ಧರಿಸಿದ್ದು, ಪ್ರಸ್ತುತ ಇರುವ 86 ಲಕ್ಷದಿಂದ 1 ಕೋಟಿಗೆ ಹೆಚ್ಚಿಸಲಾಗುತ್ತಿದೆ ಎಂದು ಪ್ರಕಟಣೆ ಹೇಳಿದೆ. ಇದರಿಂದಾಗಿ ನಿರೀಕ್ಷೆಗಿಂತಲೂ ಮೊದಲು 14 ಲಕ್ಷ ಮಂದಿ ಲಸಿಕೆ ಪಡೆಯಲಿದ್ದಾರೆ. ಮುಂದಿನ ಮೂರು ವಾರ ಕನಿಷ್ಠ ಪೂರೈಕೆ ಮಟ್ಟವನ್ನು ನಿರ್ವಹಿಸಿಕೊಂಡು ಹೋಗಲು ಅಗತ್ಯ ಸಿದ್ಧತೆ ನಡೆದಿದೆ ಎಂದು ಹೇಳಿದೆ.

ದೇಶದಲ್ಲಿ ಸಮರೋಪಾದಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಬೈಡನ್ ಈ ಮೊದಲು ಆಶ್ವಾಸನೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News