​ದೇಶದ ಬಹುಸಂಸ್ಕೃತಿಯನ್ನು ಎಲ್ಲರೂ ಗೌರವಿಸಬೇಕು : ಮೌಲಾನಾ ಮಕ್ಸೂದ್ ಇಮ್ರಾನ್

Update: 2021-01-27 06:48 GMT

ಬೆಂಗಳೂರು : ನಮ್ಮ ದೇಶ ಭಾರತವು ಇಡೀ ವಿಶ್ವದಲ್ಲಿ ಶಾಂತಿಯ ತಾಣವಾಗಿ ಪ್ರಸಿದ್ಧಿ ಹೊಂದಿದೆ. ಹಲವಾರು ಜಾತಿ, ಧರ್ಮಗಳನ್ನು ಅನುಸರಿಸುವ ಜನರನ್ನು ಒಳಗೊಳ್ಳುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾರುವ "ಗಂಗಾ-ಜಮುನಿ" ಸಂಸ್ಕೃತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಬಣ್ಣಿಸಿದ್ದಾರೆ.

ನಗರದ ಸಿಟಿ ಮಾರುಕಟ್ಟೆಯಲ್ಲಿರುವ ಜಾಮಿಯಾ ಮಸೀದಿ ಆವರಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕವಿ ಅಲ್ಲಾಮಾ ಇಕ್ಬಾಲ್ ಅವರು ಹೇಳಿದಂತೆ "ಯಾವುದೇ ಧರ್ಮ ಪರಸ್ಪರ ದ್ವೇಷವನ್ನು ಹಂಚುವುದಿಲ್ಲ. ನಾವು ಭಾರತೀಯರು, ನಮ್ಮ ದೇಶ ಭಾರತ". ನಮ್ಮ ದೇಶದಲ್ಲಿ ಜನಿಸಿದ ಹಲವಾರು ಮಹನೀಯರು, ಸಂತರು, ದಾರ್ಶನಿಕರು, ಚಿಂತಕರು, ಧಾರ್ಮಿಕ ಮುಖಂಡರು ಭಾರತದಲ್ಲಿನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳು, ಸಹೋದರತೆಯ  ಮಹತ್ವವನ್ನು ಇಡೀ ಜಗತ್ತಿಗೆ ಸಾರಿದ್ದಾರೆ ಎಂದು ಅವರು ಹೇಳಿದರು.

ಮಾನವೀಯ ಹಕ್ಕುಗಳ ಉಲ್ಲಂಘನೆ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವಿಭಜನೆಯಾಗುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಂದು ವರ್ಗದ ಜನರು ತಮ್ಮ ತಮ್ಮ ಸಂಸ್ಕೃತಿಗಳನ್ನು ಅನುಸರಿಸಿ, ಇತರರ ನಂಬಿಕೆ, ಆಚಾರ ವಿಚಾರಗಳಿಗೆ ಗೌರವ ನೀಡುವ ಮೂಲಕ ಸಮಾಜದಲ್ಲಿ ವಿಭಜನೆ ಮಾಡಲು ಬಯಸುವವರಿಗೆ ಅವಕಾಶ ಇಲ್ಲದಂತೆ ಮಾಡಬೇಕು ಎಂದು ಅವರು ಕರೆ ನೀಡಿದರು.

ದೇಶದ ಐಕ್ಯತೆ, ಸಮಗ್ರತೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಮೌಲಾನಾ ಮಕ್ಸೂದ್ ಇಮ್ರಾನ್ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News