ಕೆಂಪುಕೋಟೆಯ ಸಂಘರ್ಷದ ಹಿಂದೆ ರೈತ ವಿರೋಧಿ ಶಕ್ತಿ

Update: 2021-01-28 05:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಿಎಎ ಕಾಯ್ದೆಯ ವಿರುದ್ಧ ಜನಾಂದೋಲನವೆದ್ದಾಗ, ಅದನ್ನು ದಮನಿಸುವುದಕ್ಕೆ ಪ್ರಭುತ್ವ ಅನುಸರಿಸಿದ ತಂತ್ರ ಇನ್ನೂ ಹಸಿಯಾಗಿಯೇ ಇದೆ. ಹಿಂಸೆಗೆ ಸ್ವತಃ ಪೊಲೀಸರೇ ಪ್ರಚೋದಿಸಿ ಆ ಬಳಿಕ ಪ್ರತಿಭಟನಾಕಾರರನ್ನು ‘ಉಗ್ರವಾದಿಗಳು’ ಎಂದು ಕರೆದು ದಾಳಿ ನಡೆಸಲಾಯಿತು. ವಿಶ್ವವಿದ್ಯಾನಿಲಯದೊಳಗೂ ನುಗ್ಗಿ ಪೊಲೀಸರು ದೌರ್ಜನ್ಯವೆಸಗಿದರು. ದುಷ್ಕರ್ಮಿಗಳು ಪಿಸ್ತೂಲ್ ಹಿಡಿದು ಪ್ರತಿಭಟನಾಕಾರರನ್ನು ಬೆದರಿಸಲು ನೋಡಿದಾಗಲೂ, ಶಾಂತಿ ಸಂಯಮ ಪಾಲಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ಅಮಾನವೀಯವಾಗಿ ಬಗ್ಗು ಬಡಿದರು. ಪೊಲೀಸರೇ ವಾಹನಗಳನ್ನು ಧ್ವಂಸಗೊಳಿಸುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದರೂ, ಪ್ರತಿಭಟನಾಕಾರರೇ ಹಿಂಸಾಚಾರಕ್ಕೆ ಕಾರಣ ಎಂದು ಮಾಧ್ಯಮಗಳ ಮೂಲಕ ಪ್ರಭುತ್ವ ಕೂಗಿ ಕೂಗಿ ಹೇಳಿತು. ಜನವರಿ 26ರಂದು ಸರಕಾರ ಮತ್ತೊಮ್ಮೆ ಅದೇ ತಂತ್ರವನ್ನು ಅನುಸರಿಸಲು ಹೋಗಿ ಭಾಗಶಃ ವಿಫಲಗೊಂಡಿದೆ. ಆದರೂ ತನ್ನ ಮುಷ್ಟಿಯೊಳಗಿರುವ ಮಾಧ್ಯಮಗಳನ್ನು ಬಳಸಿಕೊಂಡು, ಸೇರಿದ ಲಕ್ಷಾಂತರ ಪ್ರತಿಭಟನಾಕಾರರನ್ನು ಉಗ್ರವಾದಿಗಳು, ಖಾಲಿಸ್ತಾನಿಗಳು ಎಂಬಿತ್ಯಾದಿಯಾಗಿ ಬಿಂಬಿಸಲು ಪ್ರಯತ್ನ ಪಡುತ್ತಿದೆ. ನ್ಯಾಯಕ್ಕಾಗಿ ಬೀದಿಗಿಳಿದ ರೈತರನ್ನು ಉಗ್ರವಾದಿಗಳನ್ನಾಗಿಸಿ ಅವರನ್ನು ಪೊಲೀಸ್ ಲಾಠಿಗಳ ಮೂಲಕ ದಮನಿಸುವ ಪ್ರಯತ್ನದಲ್ಲಿದೆ ಸರಕಾರ. ಇದರ ಭಾಗವಾಗಿ ಜನವರಿ 26ರಂದು ಕೆಂಪುಕೋಟೆಯ ಬಳಿ ನಡೆದ ಹಿಂಸೆಯನ್ನೇ ಮುಂದಿಟ್ಟುಕೊಂಡು ಸಾವಿರಾರು ರೈತರ ಮೇಲೆ ಪ್ರಕರಣಗಳನ್ನು ದಾಖಲಿಸಲು ಮುಂದಾಗಿದೆ. 10ಕ್ಕೂ ಅಧಿಕ ರೈತ ಮುಖಂಡರ ಮೇಲೂ ಸರಕಾರ ಎಫ್‌ಐಆರ್ ದಾಖಲಿಸಿದೆೆ.

ಕೆಂಪುಕೋಟೆಯ ಸಮೀಪ ನಡೆದ ಬೆಳವಣಿಗೆಗಳು ಇದೀಗ ವಿಚಿತ್ರ ತಿರುವನ್ನು ಪಡೆದುಕೊಂಡಿವೆ. ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ರೈತರ ನೇತೃತ್ವವನ್ನು ವಹಿಸಿದ್ದ ದೀಪ್ ಸಿಧು, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಪ್ರಚಾರ ಮಾಡಿರುವುದು ಬೆಳಕಿಗೆ ಬಂದಿದೆ. ನಟನೂ ಆಗಿರುವ ಸಿಧು, ಬಿಜೆಪಿ ಸಂಸದ ಸನ್ನಿ ಡಿಯೋಲ್ ಪರವಾಗಿ ಪ್ರಭಾವಿ ಪ್ರಚಾರಕನಾಗಿ ಗುರುತಿಸಿಕೊಂಡಿದ್ದ. ರ್ಯಾಲಿಯ ಎರಡು ದಿನಗಳ ಹಿಂದೆ, ಈತ ಪ್ರತ್ಯೇಕವಾಗಿ ರೈತರನ್ನುದ್ದೇಶಿಸಿ ಮಾತನಾಡಿ ಅವರನ್ನು ಪ್ರಚೋದಿಸುತ್ತಿರುವುದರ ವಿರುದ್ಧ ಸ್ವತಃ ರೈತ ಮುಖಂಡರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತಾದರೂ ಅವರು ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದು ಯೋಗೇಂದ್ರಯಾದವ್ ಆರೋಪಿಸಿದ್ದಾರೆ.

ಸಿಧು ನಿಷೇಧಿತ ಸಂಘಟನೆಗಳ ಜೊತೆಗೂ ಸಂಬಂಧ ಹೊಂದಿದ್ದಾನೆ ಎನ್ನಲಾಗುತ್ತಿದೆ. ದೀಪ್ ಸಿಧು ಧ್ವನಿವರ್ಧಕಗಳೊಂದಿಗೆ ಕೆಂಪು ಕೋಟೆಯ ಬಳಿ ಪ್ರಭುತ್ವದ ಸಹಕಾರದಿಂದಲೇ ತಲುಪಿದ್ದಾರೆ ಎಂಬ ಆರೋಪಗಳನ್ನು ರೈತ ಮುಖಂಡರು ಮಾಡುತ್ತಿದ್ದಾರೆ. ಸರಕಾರವೇ ದುಷ್ಕರ್ಮಿಗಳನ್ನು ಪ್ರತಿಭಟನೆಯೊಳಗೆ ಸೇರಿಸಿ, ಅವರಿಂದ ಹಿಂಸಾಚಾರಗಳನ್ನು ಮಾಡಿಸಿದೆ ಎಂದು ದೂರುತ್ತಿದ್ದಾರೆ. ನಿನ್ನೆಯ ರ್ಯಾಲಿಯಲ್ಲಿ ಲಕ್ಷಾಂತರ ರೈತರು ಭಾಗವಹಿಸಿದ್ದಾರೆ. ಹಿಂಸೆ ನಡೆಸುವುದೇ ಅವರ ಗುರಿಯಾಗಿದ್ದರೆ, ಇಡೀ ದಿಲ್ಲಿಯೇ ಹೊತ್ತಿ ಉರಿಯುತ್ತಿತ್ತು. ಆದರೆ ಅಷ್ಟೂ ಜನಸಂಖ್ಯೆಯಲ್ಲಿ ಒಂದು ಸಣ್ಣ ಗುಂಪಷ್ಟೇ ಹಿಂಸೆಗೆ ಇಳಿದಿದೆ. ಪೊಲೀಸರೊಂದಿಗೆ ಕಾದಾಟಕ್ಕೆ ನಿಂತಿದೆ. ಸಂದರ್ಭವನ್ನು ಬಳಸಿಕೊಂಡು ಪೊಲೀಸರೂ ರೈತರ ಮೇಲೆ ಯದ್ವಾತದ್ವಾ ಲಾಠಿ ಬೀಸಿದ್ದಾರೆ. ಈವರೆಗೆ ರೈತ ಪ್ರತಿಭಟನೆಯ ಕಡೆಗೆ ಕಣ್ಣು ಹೊರಳಿಸಿಯೂ ನೋಡದ ಮಾಧ್ಯಮಗಳು, ಇಷ್ಟಕ್ಕೇ ಪ್ರತಿಭಟನಾ ನಿರತ ರೈತರನ್ನು ‘ಭೀಕರ ಜೀವಿಗಳು’ ಎಂಬಂತೆ ಬಿಂಬಿಸಿದವು.

ಈ ದೇಶದ ವಿರುದ್ಧ ಬಾಂಬಿಟ್ಟ ಆರೋಪವನ್ನು ಹೊತ್ತ ಆರೋಪಿಯೊಬ್ಬಳಿಗೆ ಟಿಕೆಟ್ ಕೊಟ್ಟು ಆಕೆಯನ್ನು ಸಂಸತ್‌ನೊಳಗೆ ಪ್ರವೇಶಿಸುವಂತೆ ಮಾಡಿ, ಸಂಸತ್‌ಗೆ ಮುಜುಗರವನ್ನು ಸೃಷ್ಟಿಸಿದ ಕೃತ್ಯಕ್ಕಿಂತ ದೊಡ್ಡದು ಕೆಂಪುಕೋಟೆಯಲ್ಲಿ ಸಂಭವಿಸಿಲ್ಲ. ದುಷ್ಕರ್ಮಿಗಳ ಗುಂಪು ಪೊಲೀಸರೊಂದಿಗೆ ಸಂಘರ್ಷಕ್ಕಿಳಿದು ಕೆಂಪುಕೋಟೆಯ ಸ್ಮಾರಕದಲ್ಲಿ ಸಿಖ್ಖರ ಬಾವುಟವನ್ನು ಹಾರಿಸಿದೆ. ಅದನ್ನು ಹಾರಿಸಿದ ದೀಪ್ ಸಿಧು, ಸ್ವತಃ ಸಮರ್ಥಿಸಿಕೊಂಡು ಹೇಳಿಕೆಯನ್ನೂ ನೀಡಿದ್ದಾರೆ. ಈಗಾಗಲೇ ಕಂಡ ಕಂಡ ರೈತ ಮುಖಂಡರ ಮೇಲೆ ಎಫ್‌ಐಆರ್ ದಾಖಲು ಮಾಡುತ್ತಿರುವ ಪೊಲೀಸರು ಈವರೆಗೆ ದೀಪ್ ಸಿಧು ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಸ್ವತಃ ರೈತರೇ ಸಿಧುವನ್ನು ತರಾಟೆಗೆ ತೆಗೆದುಕೊಳ್ಳುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿವೆಯಾದರೂ, ಪೊಲೀಸರಿಗೆ ಆತನನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಆದುದರಿಂದಲೇ, ದಿಲ್ಲಿಯಲ್ಲಿ ನಡೆದ ಸಂಘರ್ಷ ಆಕಸ್ಮಿಕವಲ್ಲ ಎಂಬ ರೈತ ನಾಯಕರ ಆರೋಪವನ್ನು ಗಂಭೀರವಾಗಿ ನಾವು ಸ್ವೀಕರಿಸಬೇಕಾಗಿದೆ.

 ರ್ಯಾಲಿಗೆ ಮೊದಲೇ ರೈತ ನಾಯಕರೊಬ್ಬರಿಗೆ ‘ಶಂಕಿತ ಉಗ್ರವಾದಿ’ ಎಂಬ ಆರೋಪದಲ್ಲಿ ಎನ್‌ಐಎ ವಾರಂಟ್ ಜಾರಿಗೊಳಿಸಿತ್ತು. ಆದರೆ ಇದಾದ ಎರಡೇ ದಿನಗಳಲ್ಲಿ ಆ ರೈತ ನಾಯಕರ ಹೆಸರು ಪ್ರತಿಷ್ಠಿತ ‘ಶಾಂತಿ ನೊಬೆಲ್’ಗೆ ಶಿಫಾರಸು ಗೊಂಡಿತ್ತು. ಎನ್‌ಐಎಗೆ ಇದು ತೀವ್ರ ಮುಜುಗರವನ್ನುಂಟು ಮಾಡಿತ್ತು ಮಾತ್ರವಲ್ಲ, ವಾರಂಟ್‌ನ್ನು ಹಿಂದೆಗೆದಿತ್ತು. ಇದೀಗ ದಿಲ್ಲಿಯಲ್ಲಿ ಪೊಲೀಸರೊಂದಿಗೆ ನಡೆದ ಸಂಘರ್ಷದ ಬೆನ್ನಿಗೇ, ಮತ್ತೆ ಹಲವು ರೈತ ನಾಯಕರ ಮೇಲೆ ಮೊಕದ್ದಮೆ ಹೂಡಲು ಪೊಲೀಸರು ಮುಂದಾಗಿದ್ದಾರೆ. ರೈತರ ಪ್ರತಿಭಟನೆಯನ್ನು ದುರ್ಬಲಗೊಳಿಸುವ ಒಂದೇ ಉದ್ದೇಶದಿಂದ ಈ ಎಫ್‌ಐಆರ್‌ಗಳು ದಾಖಲಾಗುತ್ತಿವೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಕಷ್ಟವಿಲ್ಲ. ಆದರೆ ಸರಕಾರ ಮತ್ತು ಪೊಲೀಸರ ದ್ವಂದ್ವ ನಿಲುವುಗಳನ್ನು ಜಗತ್ತು ಗಮನಿಸುತ್ತಿದೆ. ದಿಲ್ಲಿಯಲ್ಲಿ ರೈತ ನಾಯಕರು ಕಳೆದ ಎರಡು ತಿಂಗಳಲ್ಲಿ ನಡೆಸಿದ ಶಾಂತಿಯುತ ಪ್ರತಿಭಟನೆ, ಅದಕ್ಕೆ ಅವರು ತೆತ್ತ ಬೆಲೆಯೇನು ಎನ್ನುವುದು ಜಗತ್ತಿದೆ ಗೊತ್ತಿದೆ. ಇದೀಗ ಜನವರಿ 26ರಂದು ನಡೆದ ಸಂಘರ್ಷವನ್ನು ಮುಂದಿಟ್ಟುಕೊಂಡು, ರೈತರನ್ನು ‘ಉಗ್ರರು’ ಎಂದು ಕರೆದರೆ, ಅದರಿಂದ ಅವಮಾನ ಸ್ವತಃ ಸರಕಾರಕ್ಕೇ ಹೊರತು, ರೈತರಿಗಲ್ಲ.

ಸಿಎಎ ಪ್ರತಿಭಟನಾಕಾರರನ್ನು ಜೈಲಿಗೆ ತಳ್ಳಿ ಅವರ ಬಾಯಿ ಮುಚ್ಚಿಸಿದಂತೆ, ರೈತರ ಬಾಯಿ ಮುಚ್ಚಿಸುವುದು ಸುಲಭವಿಲ್ಲ. ಸಾರ್ವಜನಿಕರನ್ನು ಪ್ರಚೋದಿಸಿ ದಿಲ್ಲಿ ಗಲಭೆಯನ್ನು ನಡೆಸಿ 50ಕ್ಕೂ ಅಧಿಕ ಅಮಾಯಕರನ್ನು ಬಲಿ ತೆಗೆದುಕೊಂಡ ಬಿಜೆಪಿ ನಾಯಕರ ಕೃತ್ಯಕ್ಕೆ ಹೋಲಿಸಿದರೆ ಕೆಂಪುಕೋಟೆಯಲ್ಲಿ ನಡೆದ ಘರ್ಷನೆ ಏನೇನೂ ಅಲ್ಲ. ರೈತ ಪ್ರತಿಭಟನೆಯಲ್ಲಿ ಕಳೆದ ಎರಡು ತಿಂಗಳಿಂದ ಅಲ್ಲಿನ ನಾಯಕರಿಂದ ಯಾವುದೇ ಪ್ರಚೋದನಕಾರಿ ಹೇಳಿಕೆಗಳು ಹೊರಬಿದ್ದಿಲ್ಲ. ‘ಗೋಲಿ ಮಾರೋ ಸಾಲೋಂಕೋ’ ಎಂದು ಬಹಿರಂಗ ವೇದಿಕೆಯಲ್ಲಿ ಕೂಗಾಟ ನಡೆಸಿದವರನ್ನು ಬಂಧಿಸುವುದಿರಲಿ, ಅವರ ಮೇಲೆ ಯಾವುದೇ ಎಫ್‌ಐಆರ್‌ಗಳನ್ನು ಈವರೆಗೆ ದಾಖಲಿಸಲು ಸಾಧ್ಯವಾಗದ ಪೊಲೀಸರು, ಈಗ ರೈತರ ಮೇಲೆ ಎಫ್‌ಐಆರ್ ದಾಖಲಿಸಲು ಹೊರಡುತ್ತಿರುವುದು ಹಾಸ್ಯಾಸ್ಪದ.

ಈ ಮೂಲಕ ಸರಕಾರ ಪ್ರತಿಭಟನೆಯ ಬೆಂಕಿಗೆ ಇನ್ನಷ್ಟು ತುಪ್ಪವನ್ನು ಸುರಿಯಲು ಹೊರಟಿದೆ. ‘ರೈತರ ಪ್ರತಿಭಟನೆ ರಾಷ್ಟ್ರೀಯ ಸಮಸ್ಯೆಯಾಗುವ ಸಾಧ್ಯತೆಗಳಿವೆ’ ಎನ್ನುವ ಸುಪ್ರೀಂಕೋರ್ಟ್‌ನ ಎಚ್ಚರಿಕೆಯನ್ನು ಸರಕಾರ ಇನ್ನಾದರೂ ಗಂಭೀರವಾಗಿ ತೆಗೆದುಕೊಂಡು ರೈತರನ್ನೂ, ದೇಶವನ್ನು ಒಟ್ಟಾಗಿ ರಕ್ಷಿಸಿಕೊಳ್ಳಬೇಕಾಗಿದೆ. ಈಗಾಗಲೇ ವಿದೇಶಿ ಶಕ್ತಿಗಳು ದೇಶವನ್ನು ದುರ್ಬಲಗೊಳಿಸಲು ಗಡಿಭಾಗದಲ್ಲಿ ಹೊಂಚು ಹಾಕಿ ಕಾಯುತ್ತಿರುವಾಗ, ತನ್ನದೇ ನೆಲದ ಮಣ್ಣಿನ ಮಕ್ಕಳನ್ನು ಶತ್ರುಗಳಾಗಿ ಪರಿವರ್ತಿಸಿ ಅವರ ವಿರುದ್ಧ ಯುದ್ಧಕ್ಕೆ ನಿಲ್ಲುವುದು ಯಾವ ರೀತಿಯಲ್ಲೂ ದೇಶಕ್ಕಾಗಲಿ, ಜನರಿಗಾಗಲಿ ಒಳ್ಳೆಯದನ್ನು ಮಾಡಲಾರದು. ‘ಜೈ ಜವಾನ್- ಜೈ ಕಿಸಾನ್’ ಘೋಷಣೆಯ ವಿರುದ್ಧ ನಡೆಸುತ್ತಿರುವ ಯುದ್ಧವಿದು ಎನ್ನುವ ಎಚ್ಚರಿಕೆ ಸರಕಾರಕ್ಕಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News