ಕೋವಿಡ್ ಕಾಲದಲ್ಲೂ ಕೋಟ್ಯಧೀಶರ ಸಂಪತ್ತು ವೃದ್ಧಿ

Update: 2021-02-02 04:54 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶವನ್ನು ಎಪ್ಪತ್ತು ವರ್ಷ ಆಳಿದವರು ಹಾಳು ಮಾಡಿದರು ನಾವು ಉದ್ಧಾರ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಕಳೆದ ಏಳು ವರ್ಷಗಳಲ್ಲಿ ಏನು ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಯಾವುದೇ ಪೂರ್ವಾಪರ ಸಿದ್ಧತೆಯಿಲ್ಲದೆ ಮಾಡಿದ ನೋಟು ಅಮಾನ್ಯೀಕರಣ, ಜಿಎಸ್‌ಟಿ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಜನರ ಮೇಲೆ ಹೆಚ್ಚುತ್ತಿರುವ ದಾಳಿಗಳು, ಸಾರ್ವಜನಿಕ ಉದ್ಯಮಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವುದು, ವಿದೇಶಿ ಸಾಲ ಹೆಚ್ಚಳ ಇವೆಲ್ಲವುಗಳಿಂದಾಗಿ ದೇಶ ದಿವಾಳಿಯ ಅಂಚಿಗೆ ಬಂದು ನಿಂತಾಗ ಕೋವಿಡ್ ಎಂಬ ಮಹಾಮಾರಿ ವಕ್ಕರಿಸಿತು. ಇದರ ಪರಿಣಾಮವಾಗಿ ಇಡೀ ದೇಶವನ್ನೇ ಐದಾರು ತಿಂಗಳ ಕಾಲ ಬಂದ್ ಮಾಡಿದ್ದು ಮತ್ತು ಸಾಕಷ್ಟು ಪೂರ್ವಸೂಚನೆ ಮತ್ತು ಸಿದ್ಧತೆಯಿಲ್ಲದೆ ಮಾಡಿದ ಲಾಕ್‌ಡೌನ್ ಘೋಷಣೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋದರು. ಆದರೆ ಕೊರೋನ ಪರಿಣಾಮವಾಗಿ ದುಡಿದುಣ್ಣವ ಬಡವರು ಭಾರೀ ಬೆಲೆ ತೆತ್ತರೇ ಹೊರತು ಇದರಿಂದ ಕಾರ್ಪೊರೇಟ್ ಜಗತ್ತಿನ ಕೋಟ್ಯಧೀಶರಿಗೆ ಯಾವ ತೊಂದರೆಯೂ ಆಗಲಿಲ್ಲ. ಕೊರೋನ ಕಾಲದಲ್ಲೇ ಬಡವರು ಮತ್ತು ಸಿರಿವಂತರ ನಡುವಿನ ಅಂತರ ಇನ್ನಷ್ಟು ಹೆಚ್ಚಾಯಿತು. ಇತ್ತೀಚೆಗೆ ದೊರತ ಅಧ್ಯಯನದ ಅಂಕಿ ಅಂಶಗಳ ಪ್ರಕಾರ ಕೊರೋನ ಕಾಲದಲ್ಲಿ ಭಾರತದ ಕೋಟ್ಯಧೀಶರ ಸಂಪತ್ತು ಹಲವಾರು ಪಟ್ಟು ಹೆಚ್ಚಾಗಿದೆ.

ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕೊರೋನ ಕಾಲಾವಧಿಯಲ್ಲಿ ಭಾರತದ ಉನ್ನತ ಸ್ಥಾನದಲ್ಲಿ ಇರುವ ಕೋಟ್ಯಧೀಶರ ಸಂಪತ್ತು 13 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ. ಇದನ್ನು ಭಾರತದ 130 ಕೋಟಿ ಜನರಿಗೆ ಸಮಾನವಾಗಿ ಹಂಚಿದರೆ ತಲಾ ಒಂದು ಲಕ್ಷ ರೂಪಾಯಿ ಸಿಗುತ್ತದೆ. ಕೊರೋನ ಕಾಲದಲ್ಲಿ ಭಾರತದ ಬಡವರಲ್ಲಿ ಒಂದೂವರೆ ಕೋಟಿ ಜನ ತಮ್ಮ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇದು ಭಾರತದ ಕತೆ ಮಾತ್ರವಲ್ಲ ಜಗತ್ತಿನೆಲ್ಲೆಡೆ ಸಿರಿವಂತರು ಮತ್ತಷ್ಟು ಸಿರಿವಂತರಾಗಿದ್ದಾರೆ. ಬಡವರು ಕಡು ಬಡತನಕ್ಕೆ ನೂಕಲ್ಪಟ್ಟಿದ್ದಾರೆ.

ಮೊದಲೇ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ತುಂಬಿ ತುಳುಕುತ್ತಿತ್ತು.ಕೊರೋನ ಕಾಲದಲ್ಲಿ ಅದು ಇನ್ನಷ್ಟು ಹೆಚ್ಚಾಗಿದೆ. ಶಿಕ್ಷಣ, ಆರೋಗ್ಯ, ಸಾರ್ವಜನಿಕ ಸೌಲಭ್ಯಗಳು ಹೀಗೆ ಸಾಮಾಜಿಕ ಜೀವನದ ಎಲ್ಲ ಕಡೆ ಬಡವರು ಮತ್ತು ಸಿರಿವಂತರ ನಡುವಿನ ಅಸಮಾನತೆ ಅಜಗಜಾಂತರವಾಗಿದೆ. ಈ ಅಸಮಾನತೆಯನ್ನು ನಿವಾರಿಸುವುದು ಹೇಗೆಂಬುದು ಭಾರತ ಮಾತ್ರವಲ್ಲ ಜಗತ್ತಿನ ಮುಂದಿರುವ ಅತ್ಯಂತ ಬಹುಮುಖ್ಯ ಸವಾಲಾಗಿದೆ. ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ಅಂಗೀಕರಿಸಿ ಜಾರಿಗೆ ತರುತ್ತಿರುವ ಆರ್ಥಿಕ ನೀತಿ, ಧೋರಣೆಗಳು ಈ ಆರ್ಥಿಕ ಸಾಮಾಜಿಕ ಅಸಮಾನತೆಯನ್ನು ನಿವಾರಿಸುವ ಯಾವ ಕಾರ್ಯಕ್ರಮಗಳನ್ನೂ ಹೊಂದಿಲ್ಲ. ಬದಲಾಗಿ ಈ ಸರಕಾರಗಳು ಅನುಸರಿಸುತ್ತಿರುವ ಆರ್ಥಿಕ ನೀತಿ, ಕಾರ್ಯಕ್ರಮಗಳು ಕಾರ್ಪೊರೇಟ್ ಬಂಡವಾಳಶಾಹಿಯನ್ನು ಇನ್ನಷ್ಟು ಕೊಬ್ಬಿಸುವ, ದುಡಿಮೆಗಾರರನ್ನು ಬಡವರನ್ನು ಇನ್ನಷ್ಟು ಕಡು ಬಡತನಕ್ಕೆ ದೂಡುವ ಅಪಾಯಕಾರಿ ಅಂಶಗಳನ್ನು ಒಳಗೊಂಡಿವೆ.

ಬಡವರು ಮತ್ತು ಸಿರಿವಂತರ ನಡುವಿನ ಈ ಅಸಮಾನತೆಯ ಪರಿಣಾಮವಾಗಿ ಇಡೀ ಆರ್ಥಿಕತೆಯೇ ಕುಸಿತದ ಹಂತಕ್ಕೆ ತಲುಪುತ್ತಿದೆ. ಜನರ ಕೊಳ್ಳುವ ಸಾಮರ್ಥ್ಯ ಕಡಿಮೆಯಾದರೆ ಅದರಿಂದ ಸಮಾಜದ ಎಲ್ಲ ವಲಯಗಳ ಮೇಲೂ ಪರಿಣಾಮ ಉಂಟಾಗುತ್ತದೆ. ಈ ಅಪಾಯವನ್ನು ತಪ್ಪಿಸಲು ಸರಕಾರ ಸುಸ್ಥಿರವಾದ ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಸಾಮಾಜಿಕ ಸುರಕ್ಷತಾ ಯೋಜನೆಗಳಿಗೆ ಆದ್ಯತೆ ನೀಡಬೇಕು. ಇದನ್ನೆಲ್ಲ ಸರಿಪಡಿಸಲು ಸಂಪನ್ಮೂಲಗಳು ಬೇಕು. ಅದಕ್ಕಾಗಿ ಕಾರ್ಪೊರೇಟ್ ಜಗತ್ತಿನ ಕೋಟ್ಯಧೀಶರ ಮೇಲೆ ವಿಶೇಷ ತೆರಿಗೆಯನ್ನು ಹಾಕಿ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಳ್ಳಬೇಕು. ಆದರೆ ನಮ್ಮ ದೇಶದ ಈ ವರ್ಷದ ಆಯವ್ಯಯ ಪತ್ರ ನೋಡಿದರೆ ನಿರಾಶೆ ಉಂಟಾಗುತ್ತದೆ. ಈ ಬಜೆಟ್‌ನಲ್ಲಿ ಬಡವರು ಮತ್ತು ಸಿರಿವಂತರ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುವ ಯಾವ ಯೋಜನೆಗಳೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News