ಬೆಂಗಳೂರು: ಜನತೆಯ ದಾಹ ತಣಿಸುವ ಜಲಮಂಡಳಿ ಕಾರ್ಯಯೋಜನೆ ಯಶಸ್ಸಿನತ್ತ ದಾಪುಗಾಲು

Update: 2021-02-01 18:22 GMT

ಬೆಂಗಳೂರು, ಫೆ.1: ಬೆಂಗಳೂರಿನಲ್ಲಿ ಔದ್ಯೋಗಿಕ ಕ್ಷೇತ್ರ ವಿಸ್ತರಿಸುತ್ತಿದ್ದಂತೆ ಜನಸಂಖ್ಯೆಯ ಪ್ರಮಾಣ ಹೆಚ್ಚಾಗುತ್ತಿದೆ. ಸದ್ಯ ನಗರ ಜನಸಂಖ್ಯೆ ಒಂದು ಕೋಟಿಗೂ ಹೆಚ್ಚು ಇದ್ದು, ಎಲ್ಲರಿಗೂ ಮೂಲಭೂತ ಸೌಕರ್ಯಗಳು ಒದಗಿಸುವಲ್ಲಿ ಬೆಂಗಳೂರಿನ ಆಡಳಿತ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯಯೋಜನೆಯನ್ನು ರೂಪಿಸಿಕೊಂಡಿವೆ. ಅದರಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡ್ಲ್ಯುಎಸ್ಸೆಸ್‍ಬಿ)ಯ ಕಾರ್ಯಯೋಜನೆಗಳನ್ನು ಅವಲೋಕಿಸಿದರೆ ನಗರದ ಜನತೆಯ ನೀರಿನ ದಾಹವನ್ನು ತಣಿಸುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಮನಗಾಣಬಹುದಾಗಿದೆ.

ಬೆಂಗಳೂರು ನಗರಕ್ಕೆ 1896ರಿಂದ ನಗರದ ಸಮೀಪವೇಯಿದ್ದ ಹೆಸರುಘಟ್ಟದಿಂದ ಸೋಸಿದ ನೀರಿನ ಪೂರೈಕೆಯನ್ನು ಮಾಡಲಾಯಿತು. ನಿರಂತರವಾದ ನಗರದ ಬೆಳವಣಿಗೆಯಿಂದ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹೊಸ ಸಂಪನ್ಮೂಲಗಳ ಕಡೆಗೆ ಮುಖಮಾಡುವುದು ಅನಿವಾರ್ಯವಾಯಿತು. ಅದರ ಪ್ರತಿಫಲವಾಗಿ ನೀರಿನ ಪೂರೈಕೆಗೆ ಕಾವೇರಿ ನದಿಯನ್ನು ಗುರುತಿಸಲಾಯಿತು. 1974ರಿಂದ ಕಾವೇರಿ ಮೂಲದಿಂದ ಹಂತ, ಹಂತವಾಗಿ ನೀರು ಪೂರೈಕೆ ಯೋಜನೆಗಳನ್ನು ರೂಪಿಸಲಾಯಿತು.

ತಿಪ್ಪಗೊಂಡನಹಳ್ಳಿ ಜಲಾಶಯ: 1933ರಲ್ಲಿ ಬೆಂಗಳೂರಿನ ಪಶ್ಚಿಮಕ್ಕೆ 26ಕಿಮೀ ದೂರದಲ್ಲಿ ಹೆಸರುಘಟ್ಟ ಜಲಾಶಯದ ಕೆಳ ಹರಿವಿನಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ತಿಪ್ಪಗೊಂಡನಹಳ್ಳಿ ಬಳಿ ಚಾಮರಾಜನಗರ ಜಲಾಶಯವನ್ನು ನಿರ್ಮಿಸಲಾಯಿತು. ಈ ಭಾಗದಿಂದ 1988ರವರೆಗೆ ನೀರು ಪೂರೈಕೆ ಆಗುತ್ತಿತ್ತು. ಆ ನಂತರ ಮುಂಗಾರು ಮಳೆ ನಿರಂತರವಾಗಿ ವಿಫಲವಾದ ಕಾರಣ ಜಲಾಶಯಕ್ಕೆ ನೀರಿನ ಹರಿವು ಇಲ್ಲವಾಗಿದೆ. ಹೀಗಾಗಿ ಅರ್ಕಾವತಿ ವಲಯದ ಜಲಾಗಾರಗಳಿಗೂ ಕಾವೇರಿ ನೀರನ್ನೇ ಪೂರೈಸಲಾಗುತ್ತಿದೆ.

ಕಾವೇರಿ ನೀರು ಪೂರೈಕೆ ಯೋಜನೆಗಳು: 1960ರ ನಂತರದ ದಿನಗಳಲ್ಲಿ ಸುಮಾರು 16 ಲಕ್ಷದಷ್ಟಿದ್ದ ಜನಸಂಖ್ಯೆಗೆ ಬೇಕಾದ ನೀರಿನ ಬೇಡಿಕೆಯನ್ನು ಅರ್ಕಾವತಿಯಿಂದ ಲಭ್ಯವಾಗುತ್ತಿದ್ದ 186 ದಶಲಕ್ಷ ಲೀಟರ್ ನೀರು ಪೂರೈಸುವುದು ಕಷ್ಟವಾಯಿತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನರಗದ ದಕ್ಷಿಣಕ್ಕೆ 86 ಕಿಮೀ ದೂರದಲ್ಲಿರುವ ಕಾವೇರಿ ನದಿಯಿಂದ ಜಲಮಂಡಳಿಗೆ ಕುಡಿಯುವ ನೀರನ್ನು ನಿಗದಿಗೊಳಿಸಿತು.

ಕಾವೇರಿ ಮೂಲದಿಂದ 1974ರಿಂದ ಅನೇಕ ಹಂತಗಳಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಕಾವೇರಿ ನೀರು ಪೂರೈಕೆ ಯೋಜನೆ ಹಂತ-1ನ್ನು 1974ರಲ್ಲಿ ಅನುಷ್ಠಾನಗೊಳಿಸಿದ್ದು, ಅದರಿಂದ 135 ದಶಲಕ್ಷ ಲೀಟರ್ ನೀರನ್ನು ನಗರಕ್ಕೆ ಪೂರೈಸಲಾಗಿದೆ. ಆ ನಂತರ 2ನೇ ಹಂತದ ಯೋಜನೆಯನ್ನು 1982ರಲ್ಲಿ ಅನುಷ್ಠಾನಗೊಳಿಸಿದ್ದು, ಇದರಲ್ಲಿ 135 ದಶಲಕ್ಷ ಲೀಟರ್ ನೀರನ್ನು ನಗರಕ್ಕೆ ಪೂರೈಸುತ್ತಿದೆ.

1994-95ರಲ್ಲಿ 3ನೇ ಹಂತಹ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಈ ಯೋಜನೆಯ ಸಾಮರ್ಥ್ಯ 270ದಶಲಕ್ಷ ಲೀಟರ್ ಆಗಿದೆ. 2006ರಲ್ಲಿ ಕಾವೇರಿ 4ನೇ ಹಂತ 1ನೇ ಘಟ್ಟದ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದರ ಸಾಮರ್ಥ್ಯ 270 ದಶಲಕ್ಷ ಲೀಟರ್ ಆಗಿದೆ. ತದನಂತರ 2012ರಲ್ಲಿ ಕಾವೇರಿ 4ನೇ ಹಂತ 2ನೇ ಘಟ್ಟದ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಅದರ ಸಾಮರ್ಥ್ಯ 500 ದಶಲಕ್ಷ ಲೀಟರ್ ಆಗಿರುತ್ತದೆ. ಈಗ ಕಾವೇರಿ 5ನೇ ಹಂತದ ನೀರು ಪೂರೈಕೆ ಕಾಮಗಾರಿ ಪ್ರಗತಿಯ ಹಂತದಲ್ಲಿದೆ.

ಜಲಮಂಡಳಿಯ ಧ್ಯೇಯೋದ್ದೇಶ: ಬೆಂಗಳೂರು ಜನತೆಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಸುವುದು ಮತ್ತು ತ್ಯಾಜ್ಯ ನೀರನ್ನು ಅಪೇಕ್ಷಿತ ಗುಣಮಟ್ಟಕ್ಕೆ ಸಂಸ್ಕರಿಸಿ ಮರು ಬಳಕೆಗೆ ಯೋಗ್ಯವೆನಿಸುವಂತೆ ಮಾಡುವುದು  ಜಲಮಂಡಳಿಯ ಉದ್ದೇಶವಾಗಿದೆ.

ಜಲಮಂಡಳಿಯ ಗುರಿ: ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಗ್ರಾಹಕರಿಗೆ ಮೌಲ್ಯಯುತವಾದ ಹಾಗೂ ತೃಪ್ತಿಕರ ಸೇವೆಯನ್ನು ನೀಡಿ ಅವರ ಅಗತ್ಯಗಳಿಗೆ ಸ್ಪಂದಿಸಿ, ನಿರಂತರ ಸಂಪರ್ಕ ಹೊಂದಿ ಗ್ರಾಹಕರ ಸೇವೆಯೇ ಪ್ರಮುಖ ಆದ್ಯತೆಯಾಗಿಸಿ, ಕಾರ್ಯಪ್ರವೃತ್ತವಾಗುವ ದಿಸೆಯಲ್ಲಿ ಜಲಮಂಡಳಿ ಕಾರ್ಯನಿರ್ವಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News