ಅತಿವೇಗವಾಗಿ 40 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಿದ ದೇಶ ಯಾವುದು ಗೊತ್ತೇ?

Update: 2021-02-04 04:03 GMT

ಹೊಸದಿಲ್ಲಿ, ಫೆ.4: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು ಆರೋಗ್ಯ ಕಾರ್ಯಕರ್ತರ ಪೈಕಿ 45% ಮಂದಿಗೆ ಈಗಾಗಲೇ ಕೋವಿಡ್-19 ಲಸಿಕೆ ನೀಡಲಾಗಿದ್ದು, ಜನವರಿ 16ರಂದು ಲಸಿಕೆ ನೀಡಿಕೆ ಆರಂಭವಾದ 18 ದಿನಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಇದರೊಂದಿಗೆ ಇಡೀ ವಿಶ್ವದಲ್ಲೇ 40 ಲಕ್ಷ ಮಂದಿಗೆ ಅತಿವೇಗವಾಗಿ ಲಸಿಕೆ ನೀಡಿದ ದೇಶಗಳ ಪೈಕಿ ಭಾರತ ಅಗ್ರಸ್ಥಾನಿಯಾಗಿದೆ.

ಫೆಬ್ರವರಿ 2ರಂದು 2,48,662 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು, ಒಟ್ಟು 43.9 ಲಕ್ಷ ಮಂದಿಗೆ ಲಸಿಕೆ ನೀಡಿದಂತಾಗಿದೆ. ಲಸಿಕೆ ಪಡೆಯಲು ನೋಂದಾಯಿಸಿಕೊಂಡ ಸರಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಸಂಸ್ಥೆಗಳ 92.61 ಲಕ್ಷ ಮಂದಿಯ ಪೈಕಿ ಶೇ.47ರಷ್ಟು ಮಂದಿಗೆ ಲಸಿಕೆ ಲಭ್ಯವಾಗಿದೆ.

40 ಲಕ್ಷ ಮಂದಿಯನ್ನು ತಲುಪಲು ಅಮೆರಿಕ 20 ಹಾಗೂ ಬ್ರಿಟನ್ ಮತ್ತು ಇಸ್ರೇಲ್ 39 ದಿನಗಳನ್ನು ತೆಗೆದುಕೊಂಡಿದ್ದವು. ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಮಂದಿ ಫಲಾನುಭವಿಗಳು ಇದ್ದು ಶೇಕಡ 69.4ರಷ್ಟು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. ಶೇಕಡ 64.7ರಷ್ಟು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿರುವ ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ.

ಆದಾಗ್ಯೂ ಅತಿಹೆಚ್ಚು ಅಂದರೆ 4.63 ಲಕ್ಷ ಮಂದಿ ಲಸಿಕೆ ಪಡೆದಿರುವುದು ಉತ್ತರ ಪ್ರದೇಶದಲ್ಲಿ. ಈ ರಾಜ್ಯದಲ್ಲಿ 9 ಲಕ್ಷ ಆರೋಗ್ಯ ಕಾರ್ಯಕರ್ತರ ಪೈಕಿ ಶೇಕಡ 51ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಆದರೆ 9.36 ಲಕ್ಷ ಆರೋಗ್ಯ ಕಾರ್ಯಕರ್ತರು ನೋಂದಾಯಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ ಕೇವಲ 34% ಮಂದಿಗಷ್ಟೇ ಲಸಿಕೆ ಲಭ್ಯವಾಗಿದೆ. ತಮಿಳುನಾಡು (22.6%), ಛತ್ತೀಸ್‌ಗಢ (29%), ದಿಲ್ಲಿ (26.6%), ಪುದುಚೇರಿ (12.3%) ಮತ್ತು ಗೋವಾ (28.3%) ಕನಿಷ್ಠ ಲಸಿಕೆ ಪಡೆದ ರಾಜ್ಯಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News