ದಿಲ್ಲಿ: ಪೊಲೀಸ್ ಠಾಣೆಗಳ ಸಿಸಿಟಿವಿ ವೀಡಿಯೊ ತುಣಕು ಸಂರಕ್ಷಿಸಿಡಲು ಆಗ್ರಹಿಸಿ ಪೊಲೀಸ್ ಆಯುಕ್ತರಿಗೆ ಪತ್ರ

Update: 2021-02-04 18:36 GMT

ಅಮೃತಸರ, ಫೆ.5: ದಿಲ್ಲಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿರುವ ಸಿಸಿಟಿವಿಯಲ್ಲಿ ಜನವರಿ 26ರಿಂದ 30ರವರೆಗೆ ದಾಖಲಾಗಿರುವ ವೀಡಿಯೊ ದೃಶ್ಯದ ತುಣುಕನ್ನು ಜೋಪಾನವಾಗಿಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಂಜಾಬ್ ಮಾನವ ಹಕ್ಕುಗಳ ಸಂಸ್ಥೆಯ ಸದಸ್ಯ, ನಿವೃತ್ತ ಮುಖ್ಯ ನ್ಯಾಯಾಧೀಶ ಅಜಿತ್ ಸಿಂಗ್ ಬೈನ್ಸ್ ದಿಲ್ಲಿ ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಟ್ರಾಕ್ಟರ್ ರ್ಯಾಲಿಯ ಬಳಿಕ ನಾಪತ್ತೆಯಾಗಿರುವ ತಮ್ಮ ಬಂಧುಗಳ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗೆ ಹೋದ ಹಲವು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಜಿತ್ ಸಿಂಗ್ ಬರೆದಿರುವ ಪತ್ರದಲ್ಲಿ ಆರೋಪಿಸಲಾಗಿದೆ.

ಒತ್ತಡಕ್ಕೆ ಮಣಿದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಅಸಾಮರ್ಥ್ಯ ಮತ್ತು ವೈಫಲ್ಯವನ್ನು ಮುಚ್ಚಿಹಾಕಲು ದಿಲ್ಲಿಯ ವಿವಿಧ ಭಾಗಗಳಿಂದ ನೂರಾರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನವರಿ 27ರಂದು ನೀವು ನಡೆಸಿದ ಸುದ್ದಿಗೋಷ್ಟಿಯಲ್ಲಿ ದಿಲ್ಲಿ ಪೊಲೀಸರು 19 ಜನರನ್ನು ಬಂಧಿಸಿದ್ದಾರೆ ಮತ್ತು 50 ಇತರರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದ್ದೀರಿ. ಕೆಲವರು ದಿಲ್ಲಿ ಪೊಲೀಸರ ಅಕ್ರಮ ವಶದಲ್ಲಿರುವುದು ನಿಮಗೆ ತಿಳಿದಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಅಲ್ಲದೆ, ಜನವರಿ 26ರಂದು ಸಂಜೆ ದಿಲ್ಲಿಯ ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ ಪ್ರತಿಭಟನಾ ನಿರತ ರೈತರು ಹಾಗೂ ಅವರ ಸಹಚರರನ್ನು ದಿಲ್ಲಿ ಪೊಲೀಸರು ಕಸ್ಟಡಿಗೆ ಪಡೆದಿದ್ದು ಅವರನ್ನು ಕ್ರಿಮಿನಲ್ ಪ್ರಕರಣಗಳಡಿ ಬಂಧಿಸಿರುವುದಾಗಿ ಉಲ್ಲೇಖಿಸಿರುವ ಬಗ್ಗೆಯೂ ವರದಿಯಾಗಿದೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ಪೊಲೀಸ್ ಠಾಣೆಯಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಗಳು ವೈಜ್ಞಾನಿಕ ಪುರಾವೆಗಳಾಗಲಿವೆ. ಆದ್ದರಿಂದ ಜನವರಿ 26ರಿಂದ 30ರವರೆಗೆ ಸಿಸಿಟಿವಿಯಲ್ಲಿ ದಾಖಲಾಗಿರುವ ವೀಡಿಯೊ ದೃಶ್ಯಗಳನ್ನು ಸಂರಕ್ಷಿಸಿಡುವಂತೆ ಎಲ್ಲಾ ಠಾಣೆಗಳಿಗೆ ಸೂಚನೆ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News