ಕೊಲ್ಕತ್ತಾ : ಬಿಜೆಪಿ ರಥಯಾತ್ರೆ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ

Update: 2021-02-05 05:07 GMT
ಸಾಂದರ್ಭಿಕ ಚಿತ್ರ

ಕೊಲ್ಕತ್ತಾ : ಪಶ್ಚಿಮ ಬಂಗಾಲ ಗದ್ದುಗೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಐದು ರಥಯಾತ್ರೆಗಳನ್ನು ನಡೆಸಲು ಮುಂದಾಗಿದೆ. ಆದರೆ ಬಿಜೆಪಿಯ ರಥಯಾತ್ರೆ ಕೋಮು ಗಲಭೆಗೆ ಕುಮ್ಮಕ್ಕು ನೀಡುವ ಹುನ್ನಾರ ಎಂದು ಆಪಾದಿಸಿ ರಥಯಾತ್ರೆಗೆ ತಡೆ ನೀಡುವಂತೆ ಕೋರಿ ನಗರದ ವಕೀಲರೊಬ್ಬರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದ ಮೊದಲ ರಥಯಾತ್ರೆ ಶನಿವಾರ ನವದ್ವೀಪ್‌ನಿಂದ ಆರಂಭವಾಗಲಿದೆ. ಫೆ. 11ರಂದು ಅಮಿತ್ ಶಾ ಅವರಿಂದ ಉತ್ತರ ಬಂಗಾಳದ ಕೂಚ್‌ಬೆಹಾರ್‌ನಿಂದ ಮತ್ತೊಂದು ರಥಯಾತ್ರೆ ಆರಂಭಿಸಲು ಉದ್ದೇಶಿಸಲಾಗಿದೆ. ಝಾರ್‌ಗ್ರಾಮ್, ಕಾಕದ್ವೀಪ್ ಮತ್ತು ತಾರಾಪಿಥ್‌ನಿಂದ ಉಳಿದ ಮೂರು ರಥಯಾತ್ರೆಗಳು ಆರಂಭವಾಗಲಿವೆ. ಈ ರ್ಯಾಲಿಗಳು ಎಲ್ಲ 294 ವಿಧಾನಸಭಾ ಕ್ಷೇತ್ರಗಳಲ್ಲೂ ಸಂಚರಿಸಲಿದ್ದು, ಪ್ರತಿ ರ್ಯಾಲಿ ಸುಮಾರು 25 ದಿನ ನಡೆಯಲಿದೆ. ರಥಯಾತ್ರೆ ಕಾನೂನುಬದ್ಧ ರಾಜಕೀಯ ಸಾಧನ ಎಂದು ಬಿಜೆಪಿ ಸಮರ್ಥಿಸಿಕೊಂಡಿದ್ದರೆ, ಇದು ಜನತೆಯನ್ನು ಪ್ರಚೋದಿಸುವ ಹುನ್ನಾರ ಎನ್ನುವುದು ತೃಣಮೂಲ ಕಾಂಗ್ರೆಸ್ ಪಕ್ಷದ ವಾದ. ರಥಯಾತ್ರೆಗೆ ಅನುಮತಿ ನಿರಾಕರಿಸುವುದು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಬಿಜೆಪಿ ದೂರಿದೆ.

"ಪ್ರಜಾಪ್ರಭುತ್ವದಲ್ಲಿ ಜನತೆಯ ಬಳಿಗೆ ತೆರಳುವುದು ವಿರೋಧ ಪಕ್ಷಗಳ ಹಕ್ಕು. ಆದರೆ ಮಮತಾ ಸರ್ಕಾರ ವಿರೋಧ ಪಕ್ಷಗಳನ್ನು ಸದ್ದಡಗಿಸುವ ಪ್ರಯತ್ನ ಮಾಡುತ್ತಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್‌ವರ್ಗೀಯ ಆಪಾದಿಸಿದ್ದಾರೆ. ಈ ಯಾತ್ರೆಗಳು ಕಲ್ಲಿದ್ದಲು ಹಗರಣ, ಗೋ ಕಳ್ಳಸಾಗಾಣಿಕೆ, ತೋಲಾಬಾಜಿಯಂಥ ಮಮತಾ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಇದನ್ನು ಪರಿವರ್ತನ ಯಾತ್ರೆ ಎಂದು ಬಣ್ಣಿಸಿದೆ. ಇದು ಕೇವಲ ರಾಜಕೀಯ ಯಾತ್ರೆ. ರಾಮಮಂದಿರ ನಿರ್ಮಾಣ ಅಥವಾ ಇತರ ಯಾವ ಮಂದಿರ ನಿರ್ಮಾಣಕ್ಕೂ ಅಲ್ಲ. ಕೇವಲ ಬದಲಾವಣೆಗಾಗಿ ಎಂದು ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News