ಸೌದಿ ಅರೇಬಿಯಕ್ಕೆ ನೆರವು ನೀಡುವುದನ್ನು ಮುಂದುವರಿಸುತ್ತೇವೆ: ಬೈಡನ್ ಘೋಷಣೆ

Update: 2021-02-05 14:12 GMT

ವಾಶಿಂಗ್ಟನ್, ಫೆ. 5: ಸೌದಿ ಅರೇಬಿಯದ ನೇತೃತ್ವದಲ್ಲಿ ಯೆಮನ್‌ನಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗೆ ಬೆಂಬಲ ನೀಡುವುದನ್ನು ಅಮೆರಿಕ ನಿಲ್ಲಿಸುವುದು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಗುರುವಾರ ಘೋಷಿಸಿದ್ದಾರೆ. ಇದರೊಂದಿಗೆ ಯೆಮನ್‌ನಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಸಕ್ರಿಯ ಪಾತ್ರವನ್ನು ವಹಿಸಲು ಅಮೆರಿಕದ ನೂತನ ಆಡಳಿತ ನಿರ್ಧರಿಸಿದೆ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

‘‘ಯುದ್ಧವು ಕೊನೆಗೊಳ್ಳಲೇಬೇಕಾಗಿದೆ. ಹಾಗಾಗಿ, ಯೆಮನ್‌ನಲ್ಲಿ ನಡೆಯುತ್ತಿರುವ ದಮನ ಕಾರ್ಯಾಚರಣೆಗೆ ಅಮೆರಿಕ ನೀಡುತ್ತಿರುವ ಎಲ್ಲ ನೆರವನ್ನು ನಾವು ಕೊನೆಗೊಳಿಸುತ್ತಿದ್ದೇವೆ. ಅದರ ಭಾಗವಾಗಿ, ಶಸ್ತ್ರಾಸ್ತ್ರ ಮಾರಾಟಗಳನ್ನು ನಾವು ನಿಲ್ಲಿಸುತ್ತಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ಮಾಡಿದ ಭಾಷಣದಲ್ಲಿ ಬೈಡನ್ ಹೇಳಿದರು.

‘‘ಅದೇ ವೇಳೆ, ಹಲವಾರು ದೇಶಗಳಲ್ಲಿರುವ ಇರಾನ್ ಬೆಂಬಲಿತ ಗುಂಪುಗಳು ಸೌದಿ ಅರೇಬಿಯದ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿವೆ. ತನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಜನರನ್ನು ರಕ್ಷಿಸುವುದಕ್ಕಾಗಿ ಸೌದಿ ಅರೇಬಿಯಕ್ಕೆ ನೆರವು ನೀಡುವುದನ್ನು ನಾವು ಮುಂದುವರಿಸಲಿದ್ದೇವೆ’’ ಎಂದು ಅವರು ಹೇಳಿದರು.

ಸೌದಿ ಅರೇಬಿಯ ಸ್ವಾಗತ

ಸೌದಿ ಅರೇಬಿಯದ ಸೌರ್ವಭೌಮತ್ವ ರಕ್ಷಣೆಗೆ ಅಮೆರಿಕ ನೀಡುತ್ತಿರುವ ಬೆಂಬಲ ಮುಂದುವರಿಯಲಿದೆ ಎಂಬ ಅವೆುರಿಕ ಅಧ್ಯಕ್ಷ ಜೋ ಬೈಡನ್‌ರ ಹೇಳಿಕೆಯನ್ನು ಸೌದಿ ಅರೇಬಿಯ ಸ್ವಾಗತಿಸಿದೆ.

ವಲಯದಲ್ಲಿನ ವಿವಾದಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬೈಡನ್ ಸರಕಾರದೊಂದಿಗೆ ಸೌದಿ ಅರೇಬಿಯ ಕೆಲಸ ಮಾಡಲಿದೆ ಎಂದು ದೇಶದ ವಿದೇಶ ಸಚಿವ ಫೈಸಲ್ ಬಿನ್ ಫರ್ಹಾನ್ ಅಲ್-ಸೌದ್ ಟ್ವಿಟರ್‌ನಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News