ಮುಝಫ್ಫರ್‌ ನಗರ್:‌ ತಮ್ಮೊಳಗಿನ ವೈರತ್ವವನ್ನು ತೊರೆದು ರೈತ ಹೋರಾಟಕ್ಕಾಗಿ ಒಂದಾದ ಮುಸ್ಲಿಮರು ಮತ್ತು ಜಾಟರು

Update: 2021-02-06 09:20 GMT

ಮುಝಫ್ಫರನಗರ್: ಎಂಟು ವರ್ಷಗಳ ಹಿಂದೆ ಮೂರು ಸಾವುಗಳು ಹಾಗೂ ಒಂದು ಮಹಾಪಂಚಾಯತ್ ನಂತರದ ಘಟನಾವಳಿಗಳು ಮುಝಫ್ಫರ ನಗರದಲ್ಲಿ ವಾರಗಳ ಹಿಂಸಾಚಾರಕ್ಕೆ ನಾಂದಿಯಾಗಿತ್ತು. ಇದು ಸಮಾಜದಲ್ಲಿ ಸೃಷ್ಟಿಸಿದ ವಿಭಜನೆ ಬಹಳ ಆಳವಾಗಿತ್ತು.

ಇಂದು ಮುಝಫ್ಫರನಗರದ ಗ್ರಾಮಗಳಲ್ಲಿ ಹಲವಾರು ಮುಸ್ಲಿಮರು ಹಾಗೂ ಜಾಟರು ರಕ್ತಸಿಕ್ತ ಇತಿಹಾಸವನ್ನು ಮರೆತು ರೈತರ ಪ್ರತಿಭಟನೆಗಳಿಗೆ ಒಂದಾಗಿದ್ದಾರೆ. "ಮುಂದಕ್ಕೆ ಸಾಗುವ ಸಮಯ ಇದಾಗಿದೆ" ಎಂದು ಹಿಂದಿನ ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗಿದ್ದ ವಕೀಲ ಆಸಾದ್ ಝಮಾ ಹೇಳುತ್ತಾರೆ. "ಎರಡು ಸಮುದಾಯಗಳೂ ಉತ್ತರ ಪ್ರದೇಶದ ರಾಜಕಾರಣವನ್ನು ನಿರ್ಣಯಿಸುತ್ತವೆ  ಜತೆಯಾಗಿ ನಾವು ಬಹಳಷ್ಟು ಕೆಲಸಗಳನ್ನು ಮಾಡಬಹುದು" ಎಂದು ಅವರು ಹೇಳುತ್ತಾರೆ.

2013ರಲ್ಲಿ ಭಾರತೀಯ ಕಿಸಾನ್ ಯೂನಿಯನ್‍ನ ಮುಸ್ಲಿಂ ಸದಸ್ಯರು, ಯೂನಿಯನ್‍ನ ಸ್ಥಾಪಕ ಸದಸ್ಯ ಗುಲಾಂ ಮೊಹಮ್ಮದ್ ಜೋಲಾ ನೇತೃತ್ವದಲ್ಲಿ ಸಂಘಟನೆಯಿಂದ ಹೊರನಡೆದಿದ್ದರು. ಯೂನಿಯನ್ ಮುಖ್ಯಸ್ಥ ನರೇಶ್ ಟಿಕಾಯತ್ ಮತ್ತವರ ಸೋದರ ಹಾಗೂ ಯೂನಿಯನ್  ವಕ್ತಾರ ರಾಕೇಶ್ ಟಿಕಾಯತ್ ಅವರು ಮಹಾಪಂಚಾಯತ್‍ನಲ್ಲಿ ಪ್ರಚೋದನಾತ್ಮಕ  ಭಾಷಣ ನೀಡಿದ್ದರೆಂಬ ಆರೋಪವೂ ಇದೆ. ಕೋಮು ಹಿಂಸೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಟಿಕಾಯತ್ ಸೋದರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.  ನಂತರದ ಬೆಳವಣಿಗೆಯಲ್ಲಿ ಮೊಹಮ್ಮದ್ ಜೋಲಾ ಸಂಘಟನೆಯಿಂದ ಹೊರನಡೆದಿದ್ದರು.

ಆದರೆ ಇತ್ತೀಚೆಗೆ ನಡೆದ ಮಹಾಪಂಚಾಯತ್‍ನಲ್ಲಿ ಜೋಲಾ ಅವರು ನರೇಶ್ ಟಿಕಾಯತ್ ಜತೆ ವೇದಿಕೆ ಹಂಚಿಕೊಂಡು ಅವರನ್ನು ಆಲಂಗಿಸಿದ್ದರು. ರಾಕೇಶ್ ಟಿಕಾಯತ್ ಅವರು ಅಳುತ್ತಾ ಮಾಡಿದ ಭಾಷಣ ರೈತರ ಹೋರಾಟಕ್ಕೆ ಇನ್ನಷ್ಟು ಬಲ ನೀಡಿದ್ದ ಮರುದಿನ ಅದಾಗಿತ್ತು.

ಟಿಕಾಯತ್ ಸೋದರರ ತಂದೆ ಹಾಗೂ ಪ್ರಭಾವಿ ರೈತ ನಾಯಕ ಮಹೇಂದರ್ ಅವರ ಸಮೀಪವರ್ತಿಯಾಗಿದ್ದ ಜೋಲಾ ಮತ್ತೆ ತಿಕಾಯತ್ ಸೋದರರ ಜತೆ ಒಂದಾಗಿದ್ದರು.

"ಎಂಟು ವರ್ಷಗಳು ಸಂದಿವೆ. ಈಗ ನಾವು ಜತೆಯಾಗಿದ್ದೇವೆ. ನಮ್ಮ ಈ ಸ್ನೇಹ ಎರಡೂ ಸಮುದಾಯಗಳ ನಡುವೆ ಸ್ನೇಹ ಸೇತುವಾಗಲಿದೆ ಎಂದು ನಂಬಿದ್ದೇನೆ" ಎಂದು ಜೋಲಾ ಹೇಳಿದ್ದಾರೆ.

ಹಲವರಿಗೆ ಈ ಬೆಳವಣಿಗೆಯಿಂದ ಖುಷಿಯಾಗಿದ್ದರೂ ಕೆಲವರು ಇಂತಹ ಒಂದು ಕ್ರಮ ಅನಿವಾರ್ಯವಾಗಿತ್ತು ಎಂದು ಹೇಳುತ್ತಾರೆ. "2013ರ ಹಿಂಸಾಚಾರದ ಗಾಯಗಳು ಆಳವಾಗಿವೆ, ಅದು  ಮರೆಯಾಗಲು ಇನ್ನೂ ಸಮಯ ಬೇಕಿದೆ" ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News