ಬೆಂಗಳೂರು ಗಲಭೆ ಪ್ರಕರಣ: ಫೆ.28ರೊಳಗೆ ಆಡಿಯೋ, ವಿಡಿಯೋ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ

Update: 2021-02-06 13:30 GMT

ಬೆಂಗಳೂರು, ಫೆ. 4: ಇಲ್ಲಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯ ಪೊಲೀಸ್ ಠಾಣೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಯಾವುದೇ ಆಡಿಯೋ, ವಿಡಿಯೋ, ಅಥವಾ ಇತರೆ ರೆಕಾರ್ಡಿಂಗ್‍ಗಳು ಇದ್ದಲ್ಲಿ ಸಾರ್ವಜನಿಕರು ಲಿಖಿತ ಹೇಳಿಕೆಗಳೊಂದಿಗೆ ಕ್ಲೈಮ್ ಕಮೀಷನರ್ ಕಚೇರಿಗೆ ಫೆ.28ರೊಳಗಾಗಿ ಸಲ್ಲಿಸಲು ಕೋರಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳಿಗೆ ಉಂಟಾಗಿರುವ ಹಾನಿಯನ್ನು ಅಂದಾಜು ಮಾಡಲು ಹಾಗೂ ಹೊಣೆಗಾರಿಕೆ ತನಿಖೆ ಮಾಡಲು ಸರಕಾರವು ಉಚ್ಚ ನ್ಯಾಯಲಯದ ನಿವೃತ್ತ ನ್ಯಾಯಾಧೀಶ ಎಚ್.ಎಸ್.ಕೆಂಪಣ್ಣ ಅವರನ್ನು ಕ್ಲೈಮ್ ಕಮೀಷನರ್ ಆಗಿ ನೇಮಕ ಮಾಡಿದೆ.

ರೆಕಾರ್ಡಿಂಗ್‍ಗಳನ್ನು ಸಲ್ಲಿಸುವಾಗ ಹೆಸರು, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸದ ವಿವರಗಳನ್ನು ಒಳಗೊಂಡಿರುವ ಲಿಖಿತ ಹೇಳಿಕೆಯೊಂದಿಗೆ ಸಲ್ಲಿಸಬೇಕು. ಜೊತೆಗೆ ಸೂಕ್ತ ಪ್ರಾಧಿಕಾರದ ಮುಂದೆ ಪ್ರಾಧಿಕಾರದ ಮುಂದೆ ಪ್ರಮಾಣವಚನ ಸ್ವೀಕರಿಸಿದ ಅಫಿಡವಿಟ್‍ನೊಂದಿಗೆ ರೆಕಾರ್ಡಿಂಗ್‍ಗಳ ಸಲ್ಲಿಕೆ ನೋಂದಾಯಿತ ಪೋಸ್ಟ್ ಅಥವಾ ಸೇವೆಯ ಮೂಲಕವೂ ಸಲ್ಲಿಸಬಹುದು.

ಖುದ್ದಾಗಿ ಸಲ್ಲಿಸುವವರು ಕಚೇರಿಯಲ್ಲಿನ ಅಧಿಕಾರಿಗಳಿಗೆ ಎಲ್ಲ ಕೆಲಸದ ದಿನಗಳಲ್ಲಿ (ಶನಿವಾರ ಹೊರತುಪಡಿಸಿ) ಬೆಳಗ್ಗೆ 11ರಿಂದ ಸಂಜೆ 4 ಗಂಟೆ ವರೆಗೆ (ಊಟದ ಸಮಯ ಮಧ್ಯಾಹ್ನ 1-30ರಿಂದ ಮಧ್ಯಾಹ್ನ 2 ಗಂಟೆ ಹೊರತುಪಡಿಸಿ) ಸಲ್ಲಿಸಬಹುದಾಗಿರುತ್ತದೆ. ಈ ರೆಕಾರ್ಡಿಂಗ್‍ಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲೈಮ್ಸ್ ಕಮೀಷನರ್ ಕಚೇರಿಯ ವಿಳಾಸವಾದ ಕೊಠಡಿಸಂಖ್ಯೆ-1 ಮತ್ತು 2, 1ನೇ ಮಹಡಿ, ಬಾಲಬ್ರೂಯಿ ಅತಿಥಿಗೃಹ, ಅರಮನೆ ರಸ್ತೆ, ಬೆಂಗಳೂರು 560001 ಇಲ್ಲಿಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News