ದಿಲ್ಲಿ ಟ್ರಾಕ್ಟರ್ ರ‍್ಯಾಲಿ ಕಳೆದು 12 ದಿನಗಳಾದರೂ ರೈತರು ನಾಪತ್ತೆ, ಹತಾಶ ಸ್ಥಿತಿಯಲ್ಲಿ ಕುಟುಂಬಗಳು

Update: 2021-02-07 11:11 GMT

ಹೊಸದಿಲ್ಲಿ: ಪರಮಜೀತ್ ಕೌರ್ ಜ.22ರಂದು ದಿಲ್ಲಿಯ ಸಿಂಘು ಗಡಿಯಲ್ಲಿ ತನ್ನ ತಂದೆ ಸರ್ದಾರ್ ಜೋರಾವರ್ ಸಿಂಗ್ (75) ಅವರನ್ನು ಭೇಟಿಯಾಗಿದ್ದರು. ಅದೇ ಕೊನೆಯ ಬಾರಿ ಆಕೆ ತನ್ನ ತಂದೆಯನ್ನು ನೋಡಿದ್ದು. ಲೂಧಿಯಾನಾದ ಇಕ್ಕೋಲಹಿ ಗ್ರಾಮದ ರೈತ ಜೋರಾವರ್ ನ.26ರಿಂದ ಸಿಂಘು ಗಡಿಯಲ್ಲಿ ಪಂಜಾಬ ಮತ್ತು ಹರ್ಯಾಣದ ಇತರ ಸಾವಿರಾರು ರೈತರೊಂದಿಗೆ ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು.

‘ತಂದೆ ಎರಡು ತಿಂಗಳುಗಳಿಂದಲೂ ಕೊರೆಯುವ ಚಳಿಯಲ್ಲಿ ಸಿಂಘು ಗಡಿಯಲ್ಲಿ ಮೊಕ್ಕಾಂ ಹೂಡಿದ್ದರು. ಮನೆಗೆ ಮರಳುವಂತೆ ನಾನು ಅವರನ್ನು ಒತ್ತಾಯಿಸಿದ್ದೆ. ಆದರೆ ಕೃಷಿ ಕಾಯ್ದೆಗಳು ರದ್ದಾಗುವವರೆಗೂ ತಾನು ಪ್ರತಿಭಟನೆಯನ್ನು ತೊರೆಯುವುದಿಲ್ಲ,ಗಡಿಯಲ್ಲಿಯೇ ತನ್ನ ಪ್ರಾಣ ಹೋದರೂ ಸರಿ ಎಂದು ಅವರು ಹೇಳಿದ್ದರು ’ ಎಂದು ಕೌರ್ ಸುದ್ದಿಸಂಸ್ಥೆಗೆ ತಿಳಿಸಿದರು.

ತನ್ನ ತಂದೆಯ ಮನವೊಲಿಸಲು ಸಾಧ್ಯವಾಗದೆ ಕೌರ್ ಜ.23ರಂದು ತನ್ನ ಗ್ರಾಮಕ್ಕೆ ಮರಳಿದ್ದರು. ಜ.26ರಂದು ರಾತ್ರಿ ತನ್ನ ತಂದೆ ನಾಪತ್ತೆಯಾಗಿದ್ದಾರೆ ಎಂಬ ಬರಸಿಡಿಲಿನಂತಹ ಸುದ್ದಿ ಆಕೆಯನ್ನು ತಲುಪಿತ್ತು.
 
‘ನನ್ನ ತಂದೆ ಇತರ ರೈತರೊಂದಿಗೆ ಕೆಂಪುಕೋಟೆಯತ್ತ ಹೋಗಿದ್ದಿರಬೇಕು, ಏಕೆಂದರೆ ಆ ಇತರರಲ್ಲಿ ಕೆಲವರು ಬಳಿಕ ಜೈಲುಗಳಲ್ಲಿ ಪತ್ತೆಯಾಗಿದ್ದಾರೆ. ಆದರೆ ನನ್ನ ತಂದೆಯನ್ನು ಹುಡುಕಲು ಯಾರಿಗೂ ಸಾಧ್ಯವಾಗಿಲ್ಲ ’ಎಂದು ಫೋನಿನಲ್ಲಿ ಅಳುವಿನ ನಡುವೆಯೇ ಕೌರ್ ತಿಳಿಸಿದರು. ತಂದೆ ಜೈಲಿನಲ್ಲಿಲ್ಲ,ಸಿಂಘು ಗಡಿಯಲ್ಲೂ ಇಲ್ಲ. ಅವರೆಲ್ಲಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಅವರಿಗೆ ತುಂಬ ವಯಸ್ಸಾಗಿದೆ. ಯಾರಾದರೂ ಅವರನ್ನು ಲಾಠಿಯಿಂದ ಹೊಡೆದಿದ್ದರೆ ಏನು ಗತಿ? ಅವರ ಇರುವಿಕೆಯ ಬಗ್ಗೆ ಯಾರಿಗೂ ಮಾಹಿತಿಯಿಲ್ಲ ಎಂದು ಕೌರ್ ಹೇಳಿದರು.

ಸಂಕಟ ಅನುಭವಿಸುತ್ತಿರುವವರು ಕೌರ್ ಒಬ್ಬರೇ ಅಲ್ಲ. ದಿಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಹಿಂಸಾತ್ಮಕ ಘರ್ಷಣೆಗಳ ಘಟನೆಗಳೊಂದಿಗೆ ಗಣತಂತ್ರ ದಿನದ ಟ್ರಾಕ್ಟರ್ ರ‍್ಯಾಲಿ ಅಂತ್ಯಗೊಂಡಿದ್ದ ಜ.26ರಿಂದ ಕನಿಷ್ಠ 21 ರೈತರು ದಿಲ್ಲಿಯಿಂದ ನಾಪತ್ತೆಯಾಗಿದ್ದಾರೆ.
ಆಗಿನಿಂದ ರಾಷ್ಟ್ರ ರಾಜಧಾನಿಯಾದ್ಯಂತ ಕನಿಷ್ಠ 125 ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು,ಅವರ ವಿರುದ್ಧ ದಂಗೆ,ಹಲ್ಲೆ,ಕೊಲೆಯತ್ನ ಇತ್ಯಾದಿ ಆರೋಪಗಳನ್ನು ಹೊರಿಸಲಾಗಿದೆ. ಅವರು ಜಾಮೀನು ಪಡೆಯಲು ಮತ್ತು ಪ್ರಕರಣಗಳ ವಿರುದ್ಧ ಹೋರಾಡಲು ನೆರವಾಗುವ ನಿಟ್ಟಿನಲ್ಲಿ ರೈತ ಸಂಘಟನೆಗಳು ವಕೀಲರ ದೊಡ್ಡ ದಂಡನ್ನೇ ನಿಯೋಜಿಸಿವೆ. ಈ ಸಂಘಟನೆಗಳು ನಾಪತ್ತೆಯಾಗಿರುವ ರೈತರನ್ನು ಪತ್ತೆ ಹಚ್ಚಲೂ ಶ್ರಮಿಸುತ್ತಿವೆ.

ನಾಪತ್ತೆಯಾಗಿರುವ ರೈತರನ್ನು ಪತ್ತೆ ಹಚ್ಚಲು ತನ್ನ ಸರಕಾರವು ನೆರವಾಗಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಫೆ.4ರಂದು ರೈತ ಸಂಘಟನೆಗಳಿಗೆ ಭರವಸೆಯನ್ನು ನೀಡಿದ್ದರು. ಆದರೆ ದಿನಗರುಳಿದಂತೆ ನಾಪತ್ತೆಯಾಗಿರುವ ರೈತರ ಕುಟುಂಬಗಳ ದುಗುಡ,ಹತಾಶೆ ಹೆಚ್ಚುತ್ತಿವೆ.

ಗದ್ದಲದಲ್ಲಿ ಆತ ಕಳೆದುಹೋಗಿದ್ದಾನೆ

ಹರ್ಯಾನದ ಕಂಡೇಲಾ ಗ್ರಾಮದ ಯುವಕ ಬಲ್ಜಿತ್ ಸಿಂಗ್ ನಾಪತ್ತೆಯಾಗಿರುವ ತನ್ನ ಚಿಕ್ಕಮ್ಮನ ಮಗ ಬಜಿಂದರ್ ಸಿಂಗ್ ಕುರಿತಂತೆ ದಿಲ್ಲಿ ಪೊಲೀಸರು ಮತ್ತು ಸರಕಾರದ ಎದುರು ಸರಣಿ ಪ್ರಶ್ನೆಗಳನ್ನಿಟ್ಟಿದ್ದಾರೆ.
ದಿಲ್ಲಿ ಮಹಾನಗರ ಮತ್ತು ಅಲ್ಲಿ ಬಜಿಂದರ್ ನಾಪತ್ತೆಯಾಗಿದ್ದಾನೆ. ಆತನೆಲ್ಲಿದ್ದಾನೆ ಎಂದು ನಾವು ತಿಳಿದುಕೊಳ್ಳುವುದಾದರೂ ಹೇಗೆ? ಯಾವ ಸ್ಥಿತಿಯಲ್ಲಿದ್ದಾನೆ? ಆತ ಸುರಕ್ಷಿತವಾಗಿಯಾದರೂ ಇದ್ದಾನೆಯೇ ಎಂದು ಬಲ್ಜಿತ್ ಪ್ರಶ್ನಿಸಿದರು.
ವಿಧವೆ ತಾಯಿ ಮತ್ತು ಹಿರಿಯ ಸೋದರನೊಂದಿಗೆ ಕಂಡೇಲಾ ಗ್ರಾಮದಲ್ಲಿ ವಾಸವಾಗಿದ್ದ ಗೋದಿ ಬೆಳೆಗಾರ ಬಜಿಂದರ್ (30) ಜ.24ರಂದು ತನ್ನ ಗ್ರಾಮದ ರೈತರ ಗುಂಪಿನೊಂದಿಗೆ ಟ್ರಾಕ್ಟರ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಟಿಕ್ರಿ ಗಡಿಯತ್ತ ತೆರಳಿದ್ದರು. ಅದು ಅವರ ಮೊದಲ ದಿಲ್ಲಿ ಭೇಟಿಯಾಗಿತ್ತು.
  
‘ಸರಕಾರವು ರ್ಯಾಲಿಗಾಗಿ ಕೆಲವು ಮಾರ್ಗಗಳನ್ನು ನಿಗದಿಗೊಳಿಸಿತ್ತು ಮತ್ತು ಅವರು ಅವುಗಳಲ್ಲೊಂದರಲ್ಲಿ ತೆರಳಿದ್ದಿರಬೇಕು. ಆತ ಕೊನೆಯ ಬಾರಿ ನಾಂಗೋಲಿ ಪ್ರದೇಶದಲ್ಲಿ ನಮ್ಮ ಗ್ರಾಮದ ರೈತನೋರ್ವನ ಕಣ್ಣಿಗೆ ಬಿದ್ದಿದ್ದ. ಒಂದು ಹಂತದಲ್ಲಿ ಅಲ್ಲಿ ಪೊಲೀಸ್ ಲಾಠಿ ಪ್ರಹಾರ ನಡೆದಿತ್ತು ಮತ್ತು ಜನರೆಲ್ಲ ದಿಕ್ಕಾಪಾಲಾಗಿ ಓಡಿದ್ದರು. ಗದ್ದಲದಲ್ಲಿ ಬಜಿಂದರ್ ಕಳೆದುಹೋಗಿದ್ದಾನೆ. ಅನಂತರ ಆತನಿಗೆ ಏನಾಗಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ ’ಎಂದು ಬಲ್ಜಿತ್ ನುಡಿದರು.
 
ಕಳೆದ 12 ದಿನಗಳಿಂದಲೂ ತೀವ್ರ ಕಳವಳ,ಹತಾಶೆಯಲ್ಲಿರುವ ಬಜಿಂದರ್ ಕುಟುಂಬ ಮತ್ತು ಸ್ನೇಹಿತರು ಆತನ ಬಗ್ಗೆ ಏನಾದರೂ ಮಾಹಿತಿ ದೊರೆಯುವ ಆಸೆಯಿಂದ ಪ್ರತಿದಿನವೂ ದಿಲ್ಲಿಯ ಪೋಲಿಸ್ ಠಾಣೆಗಳಿಗೆ,ಪ್ರತಿಭಟನೆಯ ನಾಯಕರಿಗೆ ಮತ್ತು ವಕೀಲರಿಗೆ ದೂರವಾಣಿ ಕರೆಗಳನ್ನು ಮಾಡುತ್ತಲೇ ಇದ್ದಾರೆ.
 
‘ನಾವು ಬಜಿಂದರ್ನ ಫೋಟೊವನ್ನು ಫೇಸ್ಬುಕ್ನಲ್ಲಿ ಹಾಕಿದ್ದೇವೆ. ಆತನ ಬಳಿ ಮೊಬೈಲ್ ಫೋನ್ ಕೂಡ ಇಲ್ಲ. ದಿಲ್ಲಿಯನ್ನು ಪ್ರವೇಶಿಸಲು ನಮಗೆ ಅವಕಾಶ ನೀಡುತ್ತಿಲ್ಲವಾದ್ದರಿಂದ ಆತನ ನಾಪತ್ತೆಯ ಬಗ್ಗೆ ಹರ್ಯಾಣ ಪೊಲೀಸರಿಗೆ ದೂರನ್ನೂ ಸಲ್ಲಿಸಿದ್ದೇವೆ ’ ಎಂದ ಬಲ್ಜಿತ್,ಆತ ಪೊಲೀಸ್ ಲಾಕಪ್ನಲ್ಲಿ ಇಲ್ಲವಾದರೆ ಪೊಲೀಸರೇಕೆ ದಿಲ್ಲಿಯಾದ್ಯಂತದ ಸಿಸಿಟವಿ ಕ್ಯಾಮೆರಾಗಳ ವೀಡಿಯೊಗಳನ್ನೇಕೆ ಪರಿಶೀಲಿಸುತ್ತಿಲ್ಲ ಎಂದು ಪ್ರಶ್ನಿಸಿದರು.
 
‘ಬಜಿಂದರ್ ನಾಪತ್ತೆಯಿಂದ ಆತನ ತಾಯಿ ತೀರ ಹತಾಶ ಸ್ಥಿತಿಯಲ್ಲಿದ್ದಾರೆ. ತನ್ನ ಮಗ ಸುರಕ್ಷಿತನಾಗಿದ್ದಾನೆ ಎನ್ನುವುದನ್ನಷ್ಟೇ ತಿಳಿಯಲು ಅವರು ಬಯಸಿದ್ದಾರೆ. ಆತನನ್ನು ಬಂಧಿಸಿ ಜೈಲಿಗೆ ತಳ್ಳಿದ್ದರೂ ನಾವದನ್ನು ಎದುರಿಸುತ್ತೇವೆ, ನಾವು ಆತನ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತವೆ ಮತ್ತು ಪ್ರಕರಣದ ವಿರುದ್ಧ ಹೋರಾಡುತ್ತೇವೆ. ಆದರೆ ಆತ ಎಲ್ಲಿದ್ದಾನೆ ಎನ್ನುವುದನ್ನು ಪತ್ತೆ ಹಚ್ಚುವುದು ಮುಖ್ಯವಾಗಿದೆ ’ ಎಂದು ಬಲ್ಜಿತ್ ಹೇಳಿದರು.

ಆತ ನಮಗೆ ಎಲ್ಲಿಯೂ ಸಿಕ್ಕಿಲ್ಲ

ಅತ್ತ ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಮೋತ್ ಗ್ರಾಮದಲ್ಲಿ ಸುಶೀಲ ಧಂಡಾ ಮತ್ತು ಹರ್ಷದೀಪ ಸಿಂಗ್ ಗಿಲ್ ನಾಪತ್ತೆಯಾಗಿರುವ ತಮ್ಮ ಸ್ನೇಹಿತ ಮಹಾ ಸಿಂಗ್ನ ಕುಟುಂಬಕ್ಕೆ ಭರವಸೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಗೋದಿ ಮತ್ತು ಸಾಸಿವೆ ಬೆಳೆಗಾರ ಮಹಾ ಸಿಂಗ್ (45) ಜ.18ರಿಂದಲೂ ಟಿಕ್ರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದ.

ಧಂಡಾ ಕೂಡ ಪ್ರತಿಭಟನಾ ಸ್ಥಳದಲ್ಲಿದ್ದರು. ಆದರೆ ಅವರು ಪ್ರತಿಭಟನಾಕಾರರಿಗೆ ಅಡಿಗೆ ತಯಾರಿಸುವಲ್ಲಿ ವ್ಯಸ್ತರಾಗಿದ್ದರಿಂದ ಟ್ರಾಕ್ಟರ್ ರ‍್ಯಾಲಿಗೆ ತೆರಳಿರಲಿಲ್ಲ. ಆದರೆ ಮಹಾ ಸಿಂಗ್ ರ್ಯಾಲಿಗೆ ತೆರಳಿದ್ದ.
  
‘ಮಹಾ ಸಿಂಗ್ ಕೆಂಪುಕೋಟೆಯತ್ತ ಹೋಗಿದ್ದಿರಬೇಕು. ನಾಂಗೋಲಿ,ಕೆಂಪುಕೋಟೆ ಮತ್ತು ಐಟಿಒ ಬಳಿ ಲಾಠಿ ಪ್ರಹಾರ ಮತ್ತು ಹಿಂಸಾಚಾರ ನಡೆದಿತ್ತು. ಆದರೆ ಮಹಾ ಸಿಂಗ್ ಆ ಸಂದರ್ಭದಲ್ಲಿ ಅಲ್ಲಿದ್ದನೇ ಅಥವಾ ಆತ ಕೆಂಪುಕೋಟೆ ಬಳಿ ತೆರಳಿದ್ದನೇ ಎನ್ನುವುದೂ ನಮಗೆ ಗೊತಿಲ್ಲ. ದಿಲ್ಲಿಗೆ ತೆರಳಬೇಕಾದರೆ ಆತ ತನ್ನ ಮೊಬೈಲ್ ಫೋನ್ನ್ನು ಮನೆಯಲ್ಲಿಯೇ ಮರೆತಿದ್ದ. ಹೀಗಾಗಿ ಆತನನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ ’ಎಂದು ವಕೀಲರಾಗಿರುವ ಗಿಲ್ ತಿಳಿಸಿದರು.

‘ಮಹಾ ಸಿಂಗ್ನ ಪತ್ನಿ,ಪುತ್ರ ಮತ್ತು ನಾಲ್ವರು ಪುತ್ರಿಯರು ದಿನಗಳೆದಂತೆ ತೀರ ಹತಾಶಗೊಳ್ಳುತ್ತಿದ್ದಾರೆ. ಆತ ಗಾಯಗೊಂಡು ಎಲ್ಲಿಯೋ ಬಿದ್ದಿರಬೇಕು ಎಂದು ಅವರು ಹೆದರಿದ್ದಾರೆ. ನಾವು ಸಣ್ಣ ಗುಂಪುಗಳಾಗಿ ದಿಲ್ಲಿಗೆ ತೆರಳಿ ಹುಡುಕಾಡಿದ್ದರೂ ಮಹಾ ಸಿಂಗ್ ಪತ್ತೆಯಾಗಿಲ್ಲ’ ಎಂದು ಧಂಡಾ ಹೇಳಿದರು.

ಮಹಾ ಸಿಂಗ್ ಕುಟುಂಬ ಮತ್ತು ಸ್ನೇಹಿತರು ಸಂಯುಕ್ತ ಕಿಸಾನ ಮೋರ್ಚಾದ ಕಾನೂನು ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆತನ ಇರುವಿಕೆಯ ಬಗ್ಗೆ ಯಾರಾದರೂ ಮಾಹಿತಿ ನೀಡಬಹುದು ಎಂಬ ಆಶಯದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಆತನ ಫೋಟೊಗಳನ್ನೂ ಪೋಸ್ಟ್ ಮಾಡಿದ್ದಾರೆ. ತನ್ಮಧ್ಯೆ ಪರಮಜೀತ್ ಕೌರ್,‘ನನ್ನ ತಾಯಿ ಕಳೆದ ವರ್ಷ ನಿಧನರಾಗಿದ್ದಾರೆ ಮತ್ತು ನನ್ನ ಕಿರಿಯ ಸೋದರ ಕೂಡ ತೀರಿಕೊಂಡಿದ್ದಾನೆ. ನಾನು ಕೈಮುಗಿದು ನಿಮ್ಮನ್ನು ಬೇಡಿಕೊಳ್ಳುತ್ತೇನೆ,ದಯವಿಟ್ಟು ನನ್ನ ತಂದೆಯನ್ನು ಹುಡುಕಿಕೊಡಿ. ನಾನು ಅವರನ್ನೂ ಕಳೆದುಕೊಳ್ಳಲು ಬಯಸುತ್ತಿಲ್ಲ ’ಎಂದು ಮಾಧ್ಯಮಗಳನ್ನು ಕೋರಿಕೊಂಡಿದ್ದಾರೆ.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News