ದೇಶದಲ್ಲಿ ಬ್ರಿಟಿಷರ ಕಾಲಕ್ಕಿಂತ ಕ್ರೂರ ಪರಿಸ್ಥಿತಿ ನಿರ್ಮಾಣ: ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ

Update: 2021-02-07 15:52 GMT

ಬೆಂಗಳೂರು, ಫೆ.7: ದೇಶದಲ್ಲಿ ಬ್ರಿಟೀಷರ ಕಾಲಕ್ಕಿಂತ ಕ್ರೂರ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ವಿರುದ್ಧ ಧ್ವನಿಗೂಡಿಸಿ, ಬೀದಿಗಿಳಿಯುವ ಕಾಲ ಬಂದಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.

ರವಿವಾರ ನಗರದ ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಾಶನ ಮತ್ತು ಸಮನ್ವಯ ವೇದಿಕೆ ಜಂಟಿ ಆಶ್ರಯದಲ್ಲಿ ಪ್ರಜಾಸತ್ತೆಯ ಪ್ರಯಣ: ಎಸ್.ಎ.ಡಾಂಗೆ ಚಿಂತನೆಗಳು ಕುರಿತ ವಿಚಾರ ಸಂಕಿರಣ ಹಾಗೂ ಕಾಮ್ರೇಡ್ ಡಾಂಗೆ ಅವರ ಭಾಷಣಗಳು ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಅಂದು ಬ್ರಿಟೀಷರ ವಿರುದ್ಧ ಹೋರಾಡುತ್ತಿದ್ದೆವು, ಇಂದು ಭಾರತೀಯರ ವಿರುದ್ಧ ಹೋರಾಡುವಂತಾಗಿದೆ. ಪ್ರತಿಭಟನೆ ಮಾಡಿದರೆ ಜೈಲಿಗೆ ಹಾಕುತ್ತಿರುವುದು ಬ್ರಿಟೀಷರ ಕಾಲಕ್ಕಿಂತ ಕ್ರೂರ ಪರಿಸ್ಥಿತಿಯಲ್ಲಿದ್ದೇವೆ. ಭಿನ್ನ ದನಿಯನ್ನು ಸಹಿಸಿಕೊಳ್ಳುವಂತಾಗಿದ್ದು ಅದರ ವಿರುದ್ಧ ಮಾತನಾಡುವ ಕಾಲ ಬಂದಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಡಾಂಗೆಯವರು ಚಿತ್ರಿಸಿದ ದೇಶದಲ್ಲಿದ್ದ ಆರ್ಥಿಕ ಕುಸಿತ, ಜಾತಿವ್ಯವಸ್ಥೆ, ಕಡುಬಡತನ, ಸಾಮ್ರಾಜ್ಯಶಾಹಿ ಆಡಳಿತದ ಪರಿಸ್ಥಿತಿ ಈಗ ಭಿನ್ನವಾಗಿಲ್ಲ. ವಿಜ್ಞಾನ, ಶೈಕ್ಷಣಿಕ ಇತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ್ದರೂ, ನವ ಸಾಮ್ರಾಜ್ಯಶಾಹಿಗಳ ಚಿಂತನೆಯ ಬೌದ್ಧಿಕ ಬಡತನದಲ್ಲಿ ನರಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಜನಪರ ದನಿಎತ್ತುವವರನ್ನು ಜೈಲಿಗೆ ಹಾಕುವ ಪರಿಸ್ಥಿತಿ ನೋಡಿದರೆ ಅಂದಿನ, ಇಂದಿನ ಪರಿಸ್ಥಿತಿಗೆ ವ್ಯತ್ಯಾಸವಿಲ್ಲ ಎಂದ ಅವರು, ನಮ್ಮ ಪ್ರಜಾಸತ್ತೆಯನ್ನು, ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿಗಳನ್ನು ಬೆಂಬಲಿಸುವ ಆಯ್ಕೆ ನಮ್ಮದಾಗಬೇಕು ಎಂದರು.

ಇನ್ನು, ಶಿವಾಜಿಯನ್ನು ಒಬ್ಬ ಹಿಂದೂ ರಾಜನೆಂದು ಸಾರುವ ಇತಿಹಾಸ ಆತನ ಆರ್ಥಿಕ ಸುಧಾರಣೆಗಳನ್ನು ಕಡೆಗಣಿಸುತ್ತದೆ. ಮರಾಠಿ ಸಾಹಿತ್ಯದಲ್ಲೂ ಆಧುನಿಕತೆ ಬರುವವರೆಗೂ ವಿಧವೆಯ ಮರು ವಿವಾಹದ ಪ್ರಸ್ತಾಪವೇ ಇಲ್ಲ ಎಂದು ರಾನಡೆ ಇತಿಹಾಸದ ವಾಸ್ತವ ತೆರೆದಿಡುತ್ತಾರೆ ಎಂದು ಹನುಮಂತಯ್ಯ ನುಡಿದರು.

ಸಿಪಿಐ ಪಕ್ಷದ ರಾಜ್ಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ಶ್ರೀಪಾದ ಅಮೃತ ಡಾಂಗೆ ಅವರು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಪ್ರಮುಖ ನಾಯಕರು. ಭಾರತೀಯ ಟ್ರಡ್ ಯೂನಿಯನ್ ಚಳವಳಿಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಕಾರ್ಮಿಕರ ನ್ಯಾಯಕ್ಕಾಗಿ ಹೋರಾಡಿದವರು. ಬ್ರಿಟಿಷ್ ಸರಕಾರದ ವಿರುದ್ಧ ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡುತ್ತಲೇ ಕಾರ್ಮಿಕರ ಹಕ್ಕುಗಳನ್ನು ಪ್ರತಿಪಾದಿಸಿದ ಆರೋಪ ಮೇಲೆ ಅವರನ್ನು ಒಟ್ಟು 13 ವರ್ಷ ಕಾಲ ಜೈಲಿನಲ್ಲಿ ಬಂಧಿಸಿದ್ದರು ಎಂದು ಹೇಳಿದರು.

ಮುಂದೆ ಸಿಪಿಐ ಪಕ್ಷವು ಸಿಪಿಎಂ ಎಂದು ವಿಭಜನೆಯಾದ ನಂತರವೂ ಅವರು 1978ರವರೆಗೆ ಸಿಪಿಐ ಪಕ್ಷದ ಸೂತ್ರ ಹಿಡಿದಿದ್ದರು. ಭಾಷಾವಾರು ಪ್ರಾಂತ್ಯಗಳ ವಿಭಜನೆ ಸಮಯದಲ್ಲೂ ಡಾಂಗೆ ಅವರು ಮಹಾರಾಷ್ಟ್ರ ರಾಜ್ಯ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಡಾಂಗೆ ಅವರ ಭಾಷಣಗಳು ಕಾರ್ಮಿಕರ ಮೇಲೆ ತುಂಬಾ ಪ್ರಭಾವ ಬೀರುತ್ತಿದ್ದು, ದೇಶದಲ್ಲಿ ಕಮ್ಯೂನಿಸ್ಟ್ ಚಳವಳಿ ತೀವ್ರಗೊಂಡು ಜನಮನದಲ್ಲಿ ಪಕ್ಷದ ಧ್ಯೇಯ-ಧೋರಣೆಗಳು ನೆಲೆಗೊಳ್ಳುವಂತೆ ಮಾಡಿದ್ದನ್ನು ಮರೆಯುವಂತಿಲ್ಲ ಎಂದು ಸ್ಮರಿಸಿದರು.

ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಚಿಂತಕ ಡಾ.ಜಿ.ರಾಮಕೃಷ್ಣ ವಹಿಸಿದ್ದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ಫಾರ್ವರ್ಡ್ ಬ್ಲಾಕ್ ಕಾರ್ಯದರ್ಶಿ ಜಿ.ಆರ್.ಶಿವಶಂಕರ್, ಸಾಹಿತಿ ಡಾ.ವಸುಂಧರಾ ಭೂಪತಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News