​ಚಮೋಲಿ ಹಿಮಪಾತ, ಪ್ರವಾಹ: ಎರಡು ವಿದ್ಯುತ್ ಯೋಜನೆಗಳಿಗೆ ಹಾನಿ

Update: 2021-02-08 04:40 GMT

ಚಮೋಲಿ : ಉತ್ತರಾಖಂಡದ ಚಮೋಲಿಯಲ್ಲಿ ನೀರ್ಗಲ್ಲು ಕುಸಿತದಿಂದ ಸಂಭವಿಸಿದ ಭಾರೀ ಪ್ರವಾಹದಿಂದಾಗಿ ನಿರ್ಮಾಣ ಹಂತದಲ್ಲಿದ್ದ ಋಷಿಗಂಗಾ ಜಲವಿದ್ಯುತ್ ಯೋಜನೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಅಂತೆಯೇ 530 ಮೆಗಾವ್ಯಾಟ್ ಸಾಮರ್ಥ್ಯದ ದೂಲಿಗಂಗಾ ಜಲವಿದ್ಯುತ್ ಯೋಜನೆಗೆ ಭಾರೀ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚಮೋಲಿ ವಿಕೋಪ ಪರಿಸ್ಥಿತಿಯ ಅವಲೋಕನಕ್ಕಾಗಿ ರಾಜೀವ್ ಗೂಬಾ ನೇತೃತ್ವದ ರಾಷ್ಟ್ರೀಯ ವಿಕೋಪ ನಿರ್ವಹಣಾ ಸಮಿತಿ (ಎನ್‌ಸಿಎಂಸಿ)  ಸಭೆ ಸೇರಿದ್ದು, ಈ ನೀರ್ಗಲ್ಲು ಕುಸಿತಕ್ಕೆ ಹಿಮ ಸರೋವರ ಒಡೆದಿರುವುದು ಕಾರಣ ಎಂದು ಅಭಿಪ್ರಾಯಪಟ್ಟಿದೆ. ಈ ಕಾರಣದಿಂದ ಋಷಿಗಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, 13.2 ಮೆಗಾವ್ಯಾಟ್ ಸಾಮರ್ಥ್ಯದ ಋಷಿಗಂಗಾ ಯೋಜನೆಯ ಕಾಮಗಾರಿಗಳು ಸಂಪೂರ್ಣ ಕೊಚ್ಚಿಕೊಂಡು ಹೋಗುವೆ ಎಂದು ಎನ್‌ಸಿಎಂಸಿ ಪ್ರಕಟಣೆ ಹೇಳಿದೆ.

ನದಿಯ ಕೆಳಭಾಗದ ಎನ್‌ಟಿಪಿಸಿ ವಿದ್ಯುತ್ ಯೋಜನೆಗೂ ಧಕ್ಕೆಯಾಗಿದ್ದು, ಅಲಕಾನಂದ ನದಿಯ ಉಪನದಿಯಾದ ದೂಲಿಗಂಗಾ ನದಿಗೆ ತಪೋವನ ಪ್ರದೇಶದಲ್ಲಿ ಈ ಯೋಜನೆ ನಿರ್ಮಾಣ ಹಂತದಲ್ಲಿತ್ತು. ನದಿಯ ಪ್ರವಾಹದ ರಭಸ ಮತ್ತು ಬಂಡೆಗಳು ಉರುಳಿಬಂದ ಪರಿಣಾಮವಾಗಿ, ರೈನಿ ಸಮೀಪದ ಋಷಿಗಂಗಾ ಯೋಜನೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಇದರ ಅವಶೇಷಗಳು ದೂಲಿಗಂಗಾ ನದಿಯಲ್ಲಿ ಹರಿದು ಬರುತ್ತಿದ್ದು, 10 ಕಿಲೋಮೀಟರ್ ದೂರದಲ್ಲಿರುವ 530 ಮೆಗಾವ್ಯಾಟ್ ಸಾಮರ್ಥ್ಯದ ದೂಲಿಗಂಗಾ ಯೋಜನೆಗೂ ಧಕ್ಕೆಯಾಗಿವೆ ಎಂದು ವಿವರಿಸಿದ್ದಾರೆ.

ನದಿಗಳು ಸಾಮಾನ್ಯ ಮಟ್ಟಕ್ಕಿಂತ 10-15 ಮೀಟರ್ ಅಧಿಕ ಮಟ್ಟದಲ್ಲಿ ಹರಿಯತ್ತಿದ್ದು, ಪ್ರತಿಯೊಂದು ಕೊಚ್ಚಿಕೊಂಡು ಹೋಗುತ್ತಿವೆ. ನದಿ ದಂಡೆಯ ಋಷಿಗಂಗಾ ಜಲವಿದ್ಯುತ್ ಯೋಜನೆಯ ಕಾಂಕ್ರೀಟ್ ಕಟ್ಟಡಗಳ ಅವಶೇಷಗಳು ಮಾತ್ರ ಉಳಿದಿವೆ ಎಂದು ದೊಡ್ಡ ಸ್ಫೋಟದ ಸದ್ದು ಕೇಳಿ ಮನೆಯಿಂದ ಹೊರಬಂದ ರೈನಿ ಗ್ರಾಮದ ಧನ್‌ಸಿಂಗ್ ರಾವತ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News