ಸಾಮಾಜಿಕ ಮಾಧ್ಯಮಗಳಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವುದು ಲೈಂಗಿಕ ಶೋಷಣೆಗೆ ಆಹ್ವಾನವಲ್ಲ: ಹಿ.ಪ್ರದೇಶ ಹೈಕೋರ್ಟ್

Update: 2021-02-08 15:16 GMT

ಡೆಹ್ರಾಡೂನ್,ಫೆ.7: ಮಹತ್ವದ ತೀರ್ಪೊಂದರಲ್ಲಿ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯವು ಸಾಮಾಜಿಕ ಮಾಧ್ಯಮಗಳಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವುದು ಲೈಂಗಿಕ ಹಲ್ಲೆಯನ್ನು ನಡೆಸಲು ಆಹ್ವಾನವಲ್ಲ ಎಂದು ಸ್ಪಷ್ಟಪಡಿಸಿದೆ.

ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಸಾಮಾನ್ಯವಾಗಿದೆ. ನೆಟ್‌ವರ್ಕಿಂಗ್, ಜ್ಞಾನ ಮತ್ತು ಮನರಂಜನೆಗಾಗಿ ಜನರು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆಯೇ ಹೊರತು ತಡೆಯಲ್ಪಡಲು ಅಥವಾ ಲೈಂಗಿಕವಾಗಿ ಮತ್ತು ಮಾನಸಿಕವಾಗಿ ಶೋಷಣೆಗೊಳಪಡಲು ಅಲ್ಲ ಎಂದು ಅತ್ಯಾಚಾರ ಪ್ರಕರಣವೊಂದರ ವಿಚಾರಣೆಯನ್ನು ನಡೆಸಿದ ರಜಾಕಾಲದ ನ್ಯಾಯಾಧೀಶ ಅನೂಪf ಚಿಟ್ಕಾರಾ ಅವರು ತೀರ್ಪಿನಲ್ಲಿ ಹೇಳಿದ್ದಾರೆ.

19ರ ಹರೆಯದ ಆರೋಪಿ ಫೇಸ್‌ಬುಕ್ ಮೂಲಕ ಅಪ್ರಾಪ್ತ ವಯಸ್ಕ ಬಾಲಕಿಯ ಸಂಪರ್ಕವನ್ನು ಸಾಧಿಸಿದ್ದ. ಬಾಲಕಿ ತನಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು ಮತ್ತು ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಳು ಎಂಬ ಕಾರಣವನ್ನೊಡ್ಡಿ ಆರೋಪಿಯು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.

ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಗುರುತುಗಳನ್ನು ಮರೆಮಾಚುವುದು ಸಾಮಾನ್ಯವಾಗಿದೆ ಎಂದು ಹೇಳಿರುವ ನ್ಯಾಯಮೂರ್ತಿಗಳು,ಹೇಗಿದ್ದರೂ ಆರೋಪಿಯು ಸಂತ್ರಸ್ತೆಯನ್ನು ಖುದ್ದಾಗಿ ಭೇಟಿಯಾದಾಗ ಆಕೆಯ ನಿಜವಾದ ವಯಸ್ಸು ಆತನಿಗೆ ಗೊತ್ತಾಗಿರಲೇಬೇಕು. ಬಾಲಕಿಯು ಆರೋಪಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು ಎನ್ನುವುದು ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಆತನಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಶೇ.66ರಷ್ಟು ಸಾಮಾಜಿಕ ಮಾಧ್ಯಮ ಬಳಕೆದಾರರು 15ರಿಂದ 29 ವರ್ಷ ವಯೋಮಾನದವರಾಗಿದ್ದಾರೆ ಮತ್ತು ಅಪ್ರಾಪ್ತ ವಯಸ್ಕರಿಂದ ಸಾಮಾಜಿಕ ಮಾಧ್ಯಮಗಳ ಬಳಕೆಯು ಮಕ್ಕಳು ಲೈಂಗಿಕ ಪಾಲುದಾರರನ್ನು ಹುಡುಕಲು ಅಥವಾ ಇಂತಹ ಆಹ್ವಾನಗಳನ್ನು ಸ್ವೀಕರಿಸಲು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸೃಷ್ಟಿಸುತ್ತಾರೆ ಎನ್ನುವುದನ್ನು ಯಾವುದೇ ರೀತಿಯಲ್ಲಿಯೂ ಸೂಚಿಸುವುದಿಲ್ಲ ಎಂದೂ ನ್ಯಾಯಾಲಯವು ಬೆಟ್ಟು ಮಾಡಿದೆ.

ಸಂತ್ರಸ್ತ ಬಾಲಕಿಯು ಲೈಂಗಿಕ ಸಂಪರ್ಕಕ್ಕೆ ತನ್ನ ಒಪ್ಪಿಗೆ ನೀಡಿದ್ದರೂ ಭಾರತದಲ್ಲಿಯ ಕಾನೂನುಗಳು ಅಪ್ರಾಪ್ತ ವಯಸ್ಕರು ಲೈಂಗಿಕ ಚಟುವಟಿಕೆಗಳಿಗೆ ಒಪ್ಪಿಗೆ ನೀಡುವುದನ್ನು ನಿಷೇಧಿಸಿವೆ. ಇಂತಹ ಪ್ರಕರಣಗಳಲ್ಲಿ ಅವರು ಸ್ಪಷ್ಟ ಒಪ್ಪಿಗೆ ನೀಡಿದ್ದರೂ ಸಹ ಅವರ ಒಪ್ಪಿಗೆ ಪರಿಗಣನೆಗೆ ಬರುವುದಿಲ್ಲ ಎಂದೂ ತೀರ್ಪಿನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News