ʼದಿ ಕಾರವಾನ್‌ʼ ಮ್ಯಾಗಝೀನ್ ಗೆ ಪ್ರತಿಷ್ಠಿತ ಹಾರ್ವರ್ಡ್ ವಿವಿಯ ಪತ್ರಿಕೋದ್ಯಮ ಪ್ರಶಸ್ತಿ

Update: 2021-02-09 16:44 GMT

ಹೊಸದಿಲ್ಲಿ,ಫೆ.9: ಭಾರತದಲ್ಲಿ ಮಾನವ ಹಕ್ಕುಗಳು,ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ನಶಿಸುವಿಕೆಯ ವಿಶಿಷ್ಟ ಮತ್ತು ರಾಜಿರಹಿತ ವರದಿಗಾರಿಕೆಗಾಗಿ ‘ದಿ ಕಾರವಾನ್ ’ಮ್ಯಾಗಝಿನ್ ಮಂಗಳವಾರ ಪತ್ರಿಕೋದ್ಯಮದಲ್ಲಿ ಆತ್ಮಸಾಕ್ಷಿ ಮತ್ತು ನಿಷ್ಠೆಗಾಗಿ ಲುಯಿಸ್ ಎಂ.ಲಿಯೊನ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕಾರವಾನ್ ಅಮೆರಿಕದ ಹಾರ್ವರ್ಡ್ ವಿವಿಯ ನೀಮನ್ ಫೆಲೋಸ್ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಗೆದ್ದಿರುವ ಮೊದಲ ಭಾರತೀಯ ಸುದ್ದಿಸಂಸ್ಥೆಯಾಗಿದೆ.

 ‘ಅಸಾಧಾರಣ ಮತ್ತು ಆತಂಕಕಾರಿ ಪರಿಸ್ಥಿತಿಗಳ ’ನಡುವೆ ಪ್ರಶಸ್ತಿಗಾಗಿ ಕಾರವಾನ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ನೀಮನ್ ಫೌಂಡೇಷನ್,ರಾಷ್ಟ್ರವ್ಯಾಪಿ ರೈತರ ಪ್ರತಿಭಟನೆಗಳ ಬಗ್ಗೆ ಕಾರವಾನ್‌ನ ಇತ್ತೀಚಿನ ವರದಿಯು ಪ್ರಧಾನಿ ನರೇಂದ್ರ ಮೋದಿ ಸರಕಾರದ ಕೆಂಗಣ್ಣಿಗೆ ಸಿಲುಕಿದೆ ಮತ್ತು ಅದು ಕಾರವಾನ್‌ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮುಚ್ಚಿಸಲು ಪ್ರಯತ್ನಿಸಿದೆ ಹಾಗೂ ಮ್ಯಾಗಝಿನ್ ಉದ್ಯೋಗಿಗಳ ವಿರುದ್ಧ ದೇಶದ್ರೋಹ ಆರೋಪವನ್ನು ಹೊರಿಸಿದೆ. ಇಂತಹ ಬೆದರಿಕೆಗಳ ನಡುವೆಯೂ ಕಾರವಾನ್ ಆತ್ಮಸಾಕ್ಷಿ ಮತ್ತು ನಿಷ್ಠೆಗೆ ತುರ್ತು ಬದ್ಧತೆಯನ್ನು ಮೈಗೂಡಿಸಿಕೊಂಡಿದೆ ಎಂದು ಪ್ರಶಂಸಿಸಿದೆ.

‘ಕಾರವಾನ್’ ಅಧಿಕಾರದಲ್ಲಿರುವವರಿಗೆ ನಿರಂತರವಾಗಿ ಸತ್ಯಗಳನ್ನು ಹೇಳುತ್ತಲೇ ಬಂದಿದೆ ಮತ್ತು ಕಳೆದ ಒಂದು ದಶಕಕ್ಕೂ ಅಧಿಕ ಅವಧಿಯಲ್ಲಿ ರಾಜಕೀಯದಲ್ಲಿ ಹಿಂದುತ್ವವಾದದ ಉತ್ಕರ್ಷವನ್ನು ದಾಖಲಿಸುತ್ತಿದೆ. ಕಾರವಾನ್ ಕಾರ್ಯವು ವಿಶ್ವದ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ದೇಶದಲ್ಲಿ ಅತ್ಯಗತ್ಯ ವರದಿಗಾರಿಕೆಯ ಪರಂಪರೆಯಲ್ಲಿ ಇನ್ನೊಂದು ಅಧ್ಯಾಯವಾಗಿದೆ ಎಂದಿರುವ ಫೌಂಡೇಷನ್,ಹಿಂಸೆ ಮತ್ತು ಜೈಲುವಾಸಕ್ಕೆ ಗುರಿಯಾಗುವ ಅಪಾಯದ ನಡುವೆಯೇ ಅದರ ವರದಿಗಾರರು ಹಿಂದು ಪಾರಮ್ಯವಾದಿ ಭಯೋತ್ಪಾದನೆ, ರಾಜಕೀಯ ಕೊಲೆಗಳು,ಜಾತಿ ಮತ್ತು ಲಿಂಗ ತಾರತಮ್ಯ ಹಾಗೂ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಜನಾಂಗೀಯ ಹಿಂಸೆಯ ಕುರಿತು ಸರಣಿ ತನಿಖಾ ವರದಿಗಳನ್ನು ಪ್ರಕಟಿಸಿದ್ದಾರೆ. ಭಾರತದ ಸಾರ್ವಜನಿಕ ಜೀವನದಲ್ಲಿ ತಾನು ನೈತಿಕ ಸ್ಫುಟತೆಯ ದಾರಿದೀಪವಾಗಿದ್ದೇನೆ ಎನ್ನುವುದನ್ನು ಕಾರವಾನ್ ಪದೇ ಪದೇ ಪ್ರದರ್ಶಿಸಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News