"ನ್ಯಾಯಾಂಗ ಪವಿತ್ರವಾಗಿಲ್ಲ": ಸದನದಲ್ಲಿ ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಹೇಳಿಕೆ

Update: 2021-02-09 08:01 GMT

ಹೊಸದಿಲ್ಲಿ,ಫೆ.9: ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಆರೋಪಗಳನ್ನು ಉಲ್ಲೇಖಿಸಿ ನ್ಯಾಯಾಂಗ ಪವಿತ್ರವಾಗಿ ಉಳಿದಿಲ್ಲ ಎಂದು  ಸೋಮವಾರ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರ  ಸೋಮವಾರ ಲೋಕಸಭೆಯಲ್ಲಿ ಹೇಳಿರುವುದು ಭಾರೀ ಗದ್ದಲಕ್ಕೆ ಕಾರಣವಾಯಿತು. ಆಕೆಯ ಹೇಳಿಕೆಗಳನ್ನು ನಂತರ ಸದನದ ಕಡತದಿಂದ ತೆಗೆದು ಹಾಕಲಾಗಿದೆ ಎಂದು ಕೆಲ ವರದಿಗಳು ಹೇಳಿವೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ವೇಳೆ ನಡೆದ ಚರ್ಚೆಗಳ ಸಂದರ್ಭ ಮಾತನಾಡಿದ ಮೊಯಿತ್ರ, ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಕಿಡಿ ಕಾರಿದರಲ್ಲದೆ "ದ್ವೇಷ, ಅಲ್ಪತನ ಹಾಗೂ ಧರ್ಮಾಂಧತೆ"ಯನ್ನು ಸರಕಾರ ʼಅಪ್ಪಟ ಫ್ಯಾಸಿಸ್ಟ್ ಮಾದರಿʼಯಲ್ಲಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

"ಈ ದೇಶದಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ಮುಖ್ಯ ನ್ಯಾಯಮೂರ್ತಿಯೊಬ್ಬರ  ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದು ತಮ್ಮ ಪ್ರಕರಣದ ವಿಚಾರಣೆಯ ನೇತೃತ್ವವನ್ನು ಅವರೇ ವಹಿಸಿ ತಮ್ಮನ್ನು ತಾವೇ ಆರೋಪಮುಕ್ತಗೊಳಿಸಿ, ನಿವೃತ್ತರಾದ ಮೂರೇ ತಿಂಗಳಲ್ಲಿ ಸಂಸತ್ತಿನ ಮೇಲ್ಮನೆಗೆ ನಾಮಕರಣಗೊಂಡಿದ್ದೇ ಅಲ್ಲದೆ ಝೆಡ್ ಪ್ಲಸ್ ಭದ್ರತೆಯನ್ನು ಒದಗಿಸಿದ ದಿನವೇ ನ್ಯಾಯಾಂಗ ತನ್ನ ಪಾವಿತ್ರ್ಯವನ್ನು  ಕಳೆದುಕೊಂಡಿತು" ಎಂದು ಮೊಯಿತ್ರಾ ಹೇಳಿದರು.

"ನಮ್ಮ ಸಂವಿಧಾನದ ಮೂಲ ತತ್ವಗಳನ್ನು ಸಂರಕ್ಷಿಸುವ ಅವಕಾಶವನ್ನು ಕೈಚೆಲ್ಲಿದಾಗ ನಮ್ಮ ನ್ಯಾಯಾಂಗ  ತನ್ನ ಪಾವಿತ್ರ್ಯವನ್ನು ಕಳೆದುಕೊಂಡಿತು" ಎಂದು ಅವರು ಹೇಳಿದರು.

ತಮ್ಮ 20 ನಿಮಿಷಗಳ ಭಾಷಣದಲ್ಲಿ ಮೊಯಿತ್ರಾ ಸರಕಾರದ ವಿರುದ್ಧ  ಪ್ರಖರ ವಾಗ್ದಾಳಿ ನಡೆಸಿದರಲ್ಲದೆ  ಸರಕಾರವು ಅಪಪ್ರಚಾರ ಹಾಗೂ ಸುಳ್ಳು ಮಾಹಿತಿಯನ್ನು ತನ್ನ ಕೆಲಸವಾಗಿಸಿಕೊಂಡಿದೆ ಹಾಗೂ ಪುಕ್ಕಲುತನವನ್ನು ಧೈರ್ಯವೆಂಬಂತೆ ಬಿಂಬಿಸುವಲ್ಲಿ ಅದು ಯಶಸ್ವಿಯಾಗಿದೆ ಎಂದರು.

"ಸದನದ ಗೌರವಾನ್ವಿತ ಸದಸ್ಯರು ಹಾಗೂ ಒಬ್ಬ ಹಿರಿಯ ಪತ್ರಕರ್ತರ ವಿರುದ್ಧ  ದೇಶದ್ರೋಹ ಪ್ರಕರಣವನ್ನು ಏಕೈಕ ಕೆಟ್ಟ ಉದ್ದೇಶದ ದೂರಿನ ಆಧಾರದಲ್ಲಿ ದಾಖಲಿಸಿ ಸರಕಾರ ಭಾರತದ ಪ್ರಜಾಪ್ರಭುತ್ವವನ್ನು ಪೊಲೀಸ್ ರಾಜ್ಯವನ್ನಾಗಿಸಿದೆ" ಎಂದು ಅವರು ಹೇಳಿದರು.

".18 ವರ್ಷದ ಪರಿಸರ ಹೋರಾಟಗಾರ್ತಿ ಹಾಗೂ ಅಮೆರಿಕನ್ ಪಾಪ್ ಸ್ಟಾರ್ ಒಬ್ಬರು ಮಾಡಿದ ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಗೆ  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಾಹಿನಿಗಳನ್ನು ಬಳಸುವ ಧೈರ್ಯವನ್ನೂ ಸರಕಾರ ತೋರಿದೆ" ಎಂದು ಅವರು ವ್ಯಂಗ್ಯವಾಡಿದರು.

"ದಿಲ್ಲಿಯ ಗಡಿಗಳಲ್ಲಿ  ಸುಮಾರು 90 ದಿನಗಳಿಂದ ಠಿಕಾಣಿ ಹೂಡಿರುವ ಕುಟುಂಬಗಳ  ಮೂಲ ಅಗತ್ಯತೆಗಳಾದ ಆಹಾರ, ನೀರು ಹಾಗೂ ಇತರ  ಅಗತ್ಯತತೆಗಳನ್ನು ನೋಡಿಕೊಳ್ಳಲು ಸರಕಾರ ತನ್ನ  ಒಂದೇ ಒಂದು ಸಚಿವಾಲಯಕ್ಕೆ ಜವಾಬ್ದಾರಿ ನೀಡಿಲ್ಲ. ಸಂಪೂರ್ಣ ವಿಪಕ್ಷ ಹಾಗೂ ದೇಶಾದ್ಯಂತದ ರೈತರು ಹಾಗೂ ಸರಕಾರದ ಅತ್ಯಂತ ಹಳೆಯ ಮಿತ್ರ ಪಕ್ಷ ಕೂಡ ಈ ಮೂರು ಕೃಷಿ ಕಾನೂನುಗಳು ಅಸ್ವೀಕಾರಾರ್ಹ ಎಂದು ಹೇಳಿದ ಹೊರತಾಗಿಯೂ ಅವುಗಳನ್ನು ಜಾರಿಗೊಳಿಸುವ ಧೈರ್ಯ ತೋರಿದೆ, ಈ ಕಾನೂನುಗಳನ್ನು ಯಾವುದೇ ಒಮ್ಮತವಿಲ್ಲದೆ ಯಾವುದೇ ಚರ್ಚೆಯಿಲ್ಲದ ಟ್ರೆಶರಿ ಬೆಂಚುಗಳ ಬಲಪ್ರಯೋಗದಿಂದ ದೇಶದ ಗಂಟಲಿನಲ್ಲಿ ತುರುಕಲಾಗಿದೆ. ಈ ಸರಕಾರದ ಧ್ಯೇಯ ʼನೈತಿಕತೆಯ ಮೇಲೆ ಕ್ರೂರತೆʼ ಎಂಬುದನ್ನು ಇದು ದೃಢಪಡಿಸಿದೆ" ಎಂದು ಮೊಯಿತ್ರಾ ಸರಕಾರದ ವಿರುದ್ಧ ಗುಡುಗಿದ್ದಾರೆ.

ಸದನದ ಸಭಾಪತಿ ಸ್ಥಾನದಲ್ಲಿದ್ದ ರಿವೊಲ್ಯುಶನರಿ ಸೋಶಿಯಲಿಸ್ಟ್ ಪಾರ್ಟಿ ಸದಸ್ಯ ಎನ್ ಕೆ ಪ್ರೇಮಚಂದ್ರನ್ ಅವರು ಮೊಯಿತ್ರಾ ಅವರಿಗೆ ತಮ್ಮ ಭಾಷಣ ಪೂರ್ತಿಗೊಳಿಸಲು ಅನುಮತಿಸಿದರೂ ಆಕೆಯ ಹೇಳಿಕೆಗಳು ಆಕ್ಷೇಪಾರ್ಹ ಎಂದು ಕಂಡು ಬಂದಲ್ಲಿ  ಕಡತದಿಂದ ತೆಗೆದು ಹಾಕಲಾಗುವುದು ಎಂದು ಹೇಳಿದರು.

ಸಂವಿಧಾನದ 121ನೇ ವಿಧಿಯನ್ವಯ ಯಾವುದೇ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರು ಅಥವಾ ಯಾವುದೇ ತೀರ್ಪು ನೀಡಿದ ನ್ಯಾಯಾಧೀಶರ ಕುರಿತು  ಸದನದಲ್ಲಿ ಚರ್ಚಿಸುವಂತಿಲ್ಲ. ಮೇಲಾಗಿ ಸಂಸತ್ತಿನ ನಿಯಮ 352(5) ಅನ್ವಯ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಕ್ರಮಗಳನ್ನು ಪ್ರಶ್ನಿಸುವಂತಿಲ್ಲ.

ಆಡಳಿತ ಪಕ್ಷದ ಸದಸ್ಯರು ಮೊಯಿತ್ರಾ ಅವರ ಹೇಳಿಕೆಯನ್ನು ಖಂಡಿಸಿದರಲ್ಲದೆ ಆಕೆ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿದರು.

ಮಾಜಿ ಸಿಜೆಐ ವಿರುದ್ಧ ಮಹುವಾ ಮೊಯಿತ್ರಾ ಅವರ ಹೇಳಿಕೆಗಳು `ನಾಚಿಕೆಗೇಡು' ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು. ಆದರೆ  ಸಂಸದೆ ತಮ್ಮ ಹೇಳಿಕೆಗಳಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ  ಎಂದು ಟಿಎಂಸಿಯ ಸೌಗತಾ ರಾಯ್ ಹೇಳಿದ್ದಾರೆ.

ಆಕೆಯ ವಿರುದ್ಧ ಸರಕಾರ ಹಕ್ಕುಚ್ಯುತಿ ನಿರ್ಣಯ ಮಂಡಿಸಬಹುದು ಎಂದು  ಮೂಲಗಳು ತಿಳಿಸಿವೆ. ಆದರೆ ಮೊಯಿತ್ರಾ ಮಾತ್ರ ತಮ್ಮ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರಲ್ಲದೆ ಸತ್ಯವನ್ನು ಯಾವತ್ತೂ ಹೊರದಬ್ಬಲು ಸಾಧ್ಯವಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News