ರೌಡಿ ಕೊಲೆ ಪ್ರಕರಣ: ಆರೋಪಿಗೆ ಗುಂಡೇಟು

Update: 2021-02-09 13:23 GMT

ಬೆಂಗಳೂರು, ಫೆ.9: ರೌಡಿ ಶ್ರೀನಿವಾಸ್ ಕೊಲೆ ಪ್ರಕರಣ ಸಂಬಂಧ ಆರೋಪಿಯ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಇಲ್ಲಿನ ರಾಜಗೋಪಾಲನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಜಿ.ಕೆ.ಡಬ್ಲ್ಯೂ ಲೇಔಟ್‍ನ ಸಂತೋಷ್(21) ಬಂಧಿತ ಆರೋಪಿಯಾಗಿದ್ದು, ಗುಂಡೇಟಿನಿಂದ ಗಾಯಗೊಂಡು ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದ್ದಾರೆ.

ಜ.9ರಂದು ಕಸ್ತೂರಿ ನಗರದಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಹಾಡುಹಗಲೇ ರೌಡಿ ಶ್ರೀನಿವಾಸ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಸಂತೋಷ್ ಪರಾರಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡದಲ್ಲಿದ್ದ ರಾಜಗೋಪಾಲನಗರ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಹನುಮಂತ ಹಾದಿಮನಿ ಮತ್ತವರ ಸಿಬ್ಬಂದಿಗೆ ಸಂತೋಷ್ ರಾಜಗೋಪಾಲನಗರದ ಜಿ.ಕೆ.ಡಬ್ಲ್ಯೂ ಲೇಔಟ್‍ನಲ್ಲಿ ಅಡಗಿರುವ ಖಚಿತ ಮಾಹಿತಿ ಲಭ್ಯವಾಗಿದೆ

ಅದನ್ನು ಆಧರಿಸಿ ಮಂಗಳವಾರ ಮುಂಜಾನೆ ಜಿ.ಕೆ.ಡಬ್ಲ್ಯೂ ಲೇಔಟ್‍ಗೆ ಧಾವಿಸಿ ಕಾರ್ಯಾಚರಣೆಗೆ ಮುಂದಾದಾಗ ಪೊಲೀಸ್ ವಾಹನ ಕಂಡು ಸಂತೋಷ್ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಬೆನ್ನಟ್ಟಿ ಹಿಡಿಯಲು ಹೋದ ಮುಖ್ಯ ಪೇದೆ ಸಿದ್ರಾಮ್ ಅವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಲು ಮುಂದಾದಾಗ ಹನುಮಂತ ಹಾದಿಮನಿ ಅವರು ಗಾಳಿಯಲ್ಲಿ ಒಂದು ಸುತ್ತುಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.

ಆದರೂ, ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News