ಭಾರತಕ್ಕೆ ಸಮಸ್ಯೆಯಾಗಿ ಕಾಡುತ್ತಿರುವ ಅಣೆಕಟ್ಟುಗಳು

Update: 2021-02-10 06:10 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜನಜೀವನವನ್ನು ಸುಗಮಗೊಳಿಸುವುದಕ್ಕಾಗಿ ರೂಪಿಸಿದ ಯೋಜನೆಗಳೇ ಭವಿಷ್ಯದಲ್ಲಿ ಸಮಸ್ಯೆಯಾಗಿ ಪರಿವರ್ತನೆಯಾದ ಪ್ರಕರಣಗಳು ನಮ್ಮ ಮುಂದೆ ಹಲವು ಇವೆ. ನೀರಿಲ್ಲದೆ ವಿಲ ವಿಲ ಒದ್ದಾಡುತ್ತಿದ್ದ ಗ್ರಾಮೀಣ ಪ್ರದೇಶಗಳಿಗೆ ‘ಬೋರ್‌ವೆಲ್’ ಮೂಲಕ ನೀರು ಹನಿಸಿದ ನಝೀರ್ ಸಾಬ್, ತನ್ನ ಯೋಜನೆಗಾಗಿ ‘ನೀರ್ ಸಾಬ್’ ಎಂದೇ ಗುರುತಿಸಲ್ಪಟ್ಟರು. ಆದರೆ ಒಂದು ಕಾಲದಲ್ಲಿ ಸಂಜೀವಿನಿಯಾಗಿ ಬಂದ ಬೋರ್‌ವೆಲ್‌ಗಳು ಇಂದು ನಮ್ಮ ಸಮಾಜವನ್ನು ಮೃತ್ಯುಕೂಪವಾಗಿ ಕಾಡುತ್ತಿವೆ. ಯಾವಾಗ ಬೋರ್‌ವೆಲ್‌ಗಳು ಧನದಾಹಿಗಳ ಕೈಗೆ ಸಿಕ್ಕಿತೋ ಅಲ್ಲಿಂದ ಸಮಸ್ಯೆಗಳು ಆರಂಭವಾದವು. ಕಂಡಕಂಡಲ್ಲಿ ಬೋರ್‌ವೆಲ್‌ಗಳನ್ನು ಕೊರೆಯುತ್ತಾ ಅಂತರ್ಜಲಕ್ಕೆ ಅಪಾಯ ಒದಗಿದೆ. ಮತ್ತೊಂದೆಡೆ ಕೆಟ್ಟು ಹೋದ ಬೋರ್‌ವೆಲ್‌ಗಳು ಪುಟ್ಟ ಮಕ್ಕಳನ್ನು ನುಂಗಿ ನೀರು ಕುಡಿಯುತ್ತಿವೆ. ಇಂದು ಸಮಾಜ ತಾನೇ ಕೊರೆದ ಬೋರ್‌ವೆಲ್‌ನ ಕೊಳವೆಯೊಳಗೆ ಸಿಲುಕಿ ಒದ್ದಾಡುತ್ತಿದೆೆ. ಹಸಿರುಕ್ರಾಂತಿಯಿಂದಾಗಿ ದೇಶ ಆಹಾರದ ವಿಷಯದಲ್ಲಿ ಸ್ವಾವಲಂಬಿಯಾಯಿತು. ಆದರೆ ರಾಸಾಯನಿಕ ಬಳಕೆಗಳು ಈ ನೆಲದ ಫಲವತ್ತತೆಯನ್ನು ಇಲ್ಲವಾಗಿಸಿದೆ ಎಂದು ತಜ್ಞರು ಹೇಳುತ್ತಾರೆ. ಮತ್ತೆ ಸಾವಯವ ಕೃಷಿಯೆಡೆಗೆ ಮರಳುವುದಕ್ಕೆ ಅವರು ಕರೆ ನೀಡುತ್ತಿದ್ದಾರೆ.

‘ಅಣೆಕಟ್ಟು’ಗಳನ್ನು ‘ಆಧುನಿಕ ಭಾರತದ ದೇವಸ್ಥಾನಗಳು’ ಎಂದು ಜವಾಹರಲಾಲ್ ನೆಹರೂ ಅವರು ಕರೆದಿದ್ದರು. ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ಕೃಷಿಕರ ಬದುಕನ್ನು ಹಸನಾಗಿಸಿದ್ದು ಅಣೆಕಟ್ಟುಗಳು. ಅಣೆಕಟ್ಟು ನಿರ್ಮಾಣಗಳ ಸಂದರ್ಭದಲ್ಲಿ ಸಹಸ್ರಾರು ಮನೆಗಳು ಮುಳುಗಡೆಯಾಗಿವೆ. ಸಾವಿರಾರು ಜನರು ತಮ್ಮ ಮನೆ, ಭೂಮಿಗಳನ್ನು ಕಳೆದುಕೊಂಡಿದ್ದಾರೆ. ಆದರೂ ಇಂತಹದೊಂದು ತ್ಯಾಗಕ್ಕೆ ಜನರು ಸಿದ್ಧರಾಗಲೇಬೇಕಾಗಿತ್ತು. ಆದರೆ ಬೇಕಾಬಿಟ್ಟಿಯಾಗಿ ತಲೆಯೆತ್ತಿದ ಕೈಗಾರಿಕೆಗಳೂ ಈ ನೀರಿನಲ್ಲಿ ಪಾಲು ಕೇಳಲಾರಂಭಿಸಿದಾಗ ಅಣೆಕಟ್ಟುಗಳ ಎತ್ತರದಲ್ಲಿ ಏರಿಕೆಯಾಗತೊಡಗಿದವು. ನರ್ಮದಾ ತೀರದ ಆದಿವಾಸಿಗಳು, ರೈತರು ಇಂತಹ ಅಕ್ರಮಗಳ ವಿರುದ್ಧ ಹಲವು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ನೂರಾರು ಅಣೆಕಟ್ಟುಗಳು ತಮ್ಮ ಆಯುಷ್ಯವನ್ನು ಕಳೆದುಕೊಂಡಿವೆ. ದೂರದೃಷ್ಟಿಯಿಲ್ಲದ ಯೋಜನೆಗಳಿಂದ, ಇದೀಗ ಈ ಮುದಿ ಅಣೆಕಟ್ಟುಗಳನ್ನು ನಿಭಾಯಿಸುವುದೇ ಭಾರತಕ್ಕೆ ಅತಿ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಬೃಹತ್ ಅಣೆಕಟ್ಟುಗಳ ನಿರ್ಮಾಣದಲ್ಲಿ ವಿಶ್ವದಲ್ಲಿ ಭಾರತ ತೃತೀಯ ಸ್ಥಾನ ಪಡೆದಿದೆ. ಇಷ್ಟರವರೆಗೆ ದೇಶದಲ್ಲಿ ನಿರ್ಮಿಸಲಾಗಿರುವ 5,200ಕ್ಕೂ ಹೆಚ್ಚು ಬೃಹತ್ ಅಣೆಕಟ್ಟುಗಳಲ್ಲಿ ಸುಮಾರು 1,100 ಅಣೆಕಟ್ಟುಗಳು 50 ವರ್ಷಕ್ಕೂ ಹೆಚ್ಚು ಹಳೆಯದಾಗಿವೆ. ಕೆಲವು ಅಣೆಕಟ್ಟುಗಳಿಗೆ 120ಕ್ಕೂ ಹೆಚ್ಚು ವರ್ಷ ಪ್ರಾಯವಾಗಿವೆ. 2050ರ ವೇಳೆಗೆ ಇಂತಹ ಅಣೆಕಟ್ಟುಗಳ ಸಂಖ್ಯೆ 4,400ರಷ್ಟಾಗಲಿವೆ. ಅಂದರೆ ದೇಶದ ಶೇ.80ರಷ್ಟು ಬೃಹತ್ ಅಣೆಕಟ್ಟುಗಳು 50ರಿಂದ 150 ವರ್ಷಗಳಷ್ಟು ಹಳೆಯದಾಗಲಿವೆ.ಮಧ್ಯಮ ಹಾಗೂ ಸಣ್ಣ ಪ್ರಮಾಣದ ಸಾವಿರಾರು ಅಣೆಕಟ್ಟುಗಳ ಆಯುಷ್ಯ ಬೃಹತ್ ಅಣೆಕಟ್ಟುಗಳ ಆಯುಷ್ಯಕ್ಕಿಂತ ಕಡಿಮೆ ಇರುವುದರಿಂದ ಇವುಗಳು ಇನ್ನಷ್ಟು ಅಪಾಯಕಾರಿಯಾಗಲಿವೆ. 1931ರಲ್ಲಿ ನಿರ್ಮಿಸಲಾದ ಕೃಷ್ಣರಾಜ ಸಾಗರ ಅಣೆಕಟ್ಟು 90 ವರ್ಷ ಹಳೆಯದಾಗಿದೆ. ಹಾಗೆಯೇ 1934ರಲ್ಲಿ ಕಟ್ಟಲಾದ ಮೆಟ್ಟೂರು ಅಣೆಕಟ್ಟಿಗೆ 87 ವರ್ಷವಾಗಿದೆ.

  ಸಮಸ್ಯೆಯನ್ನು ಇನ್ನಷ್ಟು ಗಂಭೀರವಾಗಿಸುವ ವಿಷಯವೆಂದರೆ ನಮ್ಮ ಹಲವಾರು ಜಲಾಶಯಗಳ ವಿನ್ಯಾಸ ದೋಷಪೂರ್ಣವಾಗಿವೆೆ. ರೋಹನ್ ಡಿಸೋಜರವರು ಬರೆದಿರುವ ಲೇಖನವೊಂದರ ಪ್ರಕಾರ, ಭಾರತದ ಹೆಮ್ಮೆ ಎನ್ನಲಾದ ಭಾಕ್ರಾ ಅಣೆಕಟ್ಟಿನಲ್ಲಿ ಶೇಖರವಾಗಿರುವ ಮಣ್ಣಿನ ಪ್ರಮಾಣ ಮೂಲ ಲೆಕ್ಕಾಚಾರಕ್ಕಿಂತ ಶೇ. 139.86ರಷ್ಟು ಹೆಚ್ಚಾಗಿದೆ. ಈ ದರದಲ್ಲಿ, ‘‘ಭಾಕ್ರಾ ಅಣೆಕಟ್ಟು ಅದನ್ನು ನಿರ್ಮಿಸುವಾಗ ಅಂದಾಜಿಸಿದ 88 ವರ್ಷಗಳ ಬದಲು, ಇನ್ನು ಕೇವಲ 47 ವರ್ಷಗಳವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದೆ.’’ ಅದೇ ರೀತಿಯಾಗಿ ಹಿರಾಕುಡ್, ಮೈಥಾನ್ ಮತ್ತು ಘೋಡ್ ಅಣೆಕಟ್ಟುಗಳಲ್ಲಿ ಸಂಗ್ರಹವಾಗುತ್ತಿರುವ ಕೆಸರು ಮಣ್ಣು, ಅನುಕ್ರಮವಾಗಿ 141.67ಶೇ, 808.64ಶೇ, ಹಾಗೂ 426.59ಶೇದಷ್ಟು ಹೆಚ್ಚಾಗಿದೆ.ಇದರಿಂದ ಜಲಾಶಯಗಳಲ್ಲಿ ಸಂಗ್ರಹವಾಗ ಬೇಕಾದಷ್ಟು ನೀರು ಸಂಗ್ರಹವಾಗದ ಪರಿಣಾಮವಾಗಿ ಅಣೆಕಟ್ಟುಗಳ ಕೆಳ ಭಾಗದ ಪ್ರದೇಶಗಳಲ್ಲಿ ನೆರೆ ಪ್ರವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ. ಜಲಾಶಯಗಳಿಂದ ನೀರನ್ನು ಬಿಡುಗಡೆಗೊಳಿಸಿದ ಪರಿಣಾಮವಾಗಿಯೇ 2020ರಲ್ಲಿ ಭರೂಚ್‌ನಲ್ಲಿ, 2018ರಲ್ಲಿ ಕೇರಳದಲ್ಲಿ ಮತ್ತು 2015ರಲ್ಲಿ ಚೆನ್ನೈಯಲ್ಲಿ ನೆರೆ, ಪ್ರವಾಹಗಳು ಸಂಭವಿಸಿದವು ಎನ್ನಲಾಗಿದೆ.

ಸಾವಿರಾರು ಅಣೆಕಟ್ಟು ಹೀಗೆ ಅಪಾಯಕಾರಿ ಹಂತಕ್ಕೆ ತಲುಪಿರುವುದರಿಂದ ಎರಡು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಒಂದು ಪ್ರಕೃತಿ ವಿಕೋಪ. ಇನ್ನೊಂದು,ಭವಿಷ್ಯದಲ್ಲಿ ಕೃಷಿಗೆ ಮತ್ತು ಕೈಗಾರಿಕೆಗಳಿಗೆ ಅಗತ್ಯವಿರುವ ನೀರನ್ನು ಪೂರೈಸುವುದಕ್ಕೆ ಉಂಟಾಗುವ ಅಡೆತಡೆಗಳು. ಕೃಷಿಗೆ ಮಾತ್ರವಲ್ಲದೆ, ನಗರಾಭಿವೃದ್ಧಿಯ ಮೇಲೂ ಇದು ತೀವ್ರ ದುಷ್ಪರಿಣಾಮವನ್ನು ಉಂಟು ಮಾಡಲಿದೆ. ಆದುದರಿಂದ, ಈ ಸವಾಲನ್ನು ಎದುರಿಸುವ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕಾಗಿದೆ, ಮತ್ತು ಮುಂದಿನ ದಿನಗಳಲ್ಲಿ ಅಣೆಕಟ್ಟು ನಿರ್ಮಾಣದಂತಹ ಯೋಜನೆಗಳಿಗೆ ಕೈಯಿಕ್ಕುವಾಗ ದೂರದೃಷ್ಟಿಯನ್ನು ಇಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ. ಮಾನವೀಯ ಕಾರಣಗಳಿಗಾಗಿ ಅಣೆಕಟ್ಟುಗಳಂತಹ ಬೃಹತ್ ಯೋಜನೆಗಳನ್ನು ರೂಪಿಸಬೇಕೇ ಹೊರತು, ಮನುಷ್ಯನ ಸ್ವಾರ್ಥ, ಲಾಲಸೆಗಳನ್ನು ಈಡೇರಿಸುವುದಕ್ಕಾಗಿ ಅವುಗಳನ್ನು ಬಳಸಬಾರದು. ಒಂದು ಅಣೆಕಟ್ಟು ಸಹಸ್ರಾರು ಜನರ ಬದುಕನ್ನು ಕಿತ್ತುಕೊಳ್ಳುತ್ತದೆ. ಆ ಸಂದರ್ಭದಲ್ಲಿ ಅಂತಹ ಯೋಜನೆಗಳಿಗೆ ಕೋಟ್ಯಂತರ ಜನರ ಬದುಕಿನ ಅಗತ್ಯವನ್ನು ಈಡೇರಿಸುವ ಶಕ್ತಿಯಿರಬೇಕು. ಯಾರೋ ಕೆಲವು ಉದ್ಯಮಿಗಳ ಹಿತಾಸಕ್ತಿಗಾಗಿ ಜನರ ಬದುಕಿನೊಂದಿಗೆ ಅಥವಾ ಪ್ರಕೃತಿಯೊಂದಿಗೆ ಚೆಲ್ಲಾಟಕ್ಕಿಳಿಯಬಾರದು. ಹಾಗೆ ಇಳಿದದ್ದೇ ಆದರೆ, ಅದು ಒಂದಲ್ಲ ಒಂದು ದಿನ ಬೇರೆ ಬೇರೆ ರೂಪಗಳಲ್ಲಿ ದೇಶವನ್ನು ಕಾಡಬಹುದು. ಅಮಾಯಕ ಜನರನ್ನು ಬಲಿ ತೆಗೆದುಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News