ಡಿಜಿಟಲ್ ಆರ್ಥಿಕತೆಗೆ ಉತ್ತೇಜನ, ಬೆಂಗಳೂರು ವ್ಯಾಪ್ತಿಯಾಚೆಗೂ ಸಮತೋಲನ ಬೆಳವಣಿಗೆ: ಡಾ.ಅಶ್ವತ್ಥನಾರಾಯಣ

Update: 2021-02-09 18:10 GMT

ಬೆಂಗಳೂರು, ಫೆ.9: ರಾಜ್ಯದ ಒಟ್ಟಾರೆ ಉತ್ಪಾದನೆಯಲ್ಲಿ(ಎಸ್.ಡಿ.ಜಿ.ಪಿ.) ಡಿಜಿಟಲ್ ಆರ್ಥಿಕತೆಯ ಕೊಡುಗೆಯನ್ನು ಮುಂದಿನ ಐದು ವರ್ಷಗಳಲ್ಲಿ ಶೇ.30ರಷ್ಟಕ್ಕೆ ಹೆಚ್ಚಿಸುವ ಗುರಿ ಹೊಂದಿರುವ ‘ಕರ್ನಾಟಕ ಡಿಜಿಟಿಲ್ ಆರ್ಥಿಕತೆ ಮಿಷನ್’ನ(ಕೆಡಿಇಎಂ) ಉದ್ಘಾಟನೆ ಹಾಗೂ ಇದಕ್ಕೆ ಪೂರಕವಾದ ‘ಬೆಂಗಳೂರು ವ್ಯಾಪ್ತಿಯಾಚೆ’ (ಬಿಯಾಂಡ್ ಬೆಂಗಳೂರು) ವರದಿಯ ಅನಾವರಣ ಮಂಗಳವಾರ ನಡೆಯಿತು.

ಕೆಡಿಇಎಂ ಹೆಚ್ಚು ಉದ್ಯಮಸ್ನೇಹಿ ಆಗಿರಬೇಕೆಂಬ ಸರಕಾರ ಇದರಲ್ಲಿ ಹೆಚ್ಚಿನ ಪಾಲುದಾರಿಕೆಯನ್ನು(ಶೇ. 51ರಷ್ಟು) ಉದ್ಯಮ ಸಂಘಟನೆಗಳಿಗೆ ಬಿಟ್ಟುಕೊಟ್ಟಿದೆ. ಸೌಕರ್ಯ ಒದಗಿಸುವ ಪಾತ್ರ ನಿರ್ವಹಿಸಲು ಒತ್ತು ಕೊಡಲಿರುವ ಸರಕಾರವು ಇದರಲ್ಲಿ ಶೇ.49ರಷ್ಟು ಪಾಲನ್ನು ಮಾತ್ರ ತಾನು ಇರಿಸಿಕೊಂಡಿದೆ ಎಂದು ಉದ್ಘಾಟನೆ ನೆರವೇರಿಸಿದ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಡಿಜಿಟಲ್ ಆರ್ಥಿಕತೆಯನ್ನು ಸದೃಢಗೊಳಿಸುವುದಕ್ಕಾಗಿ ಕುಗ್ರಾಮಗಳಲ್ಲೂ ಸಂಪರ್ಕ ಜಾಲ ಉತ್ತಮಗೊಳಿಸುವ, ದಿನದ 24 ಗಂಟೆಯೂ ವಿದ್ಯುತ್ ಸೌಲಭ್ಯ ಒದಗಿಸುವಂತಹ ಮೂಲಸೌಕರ್ಯಗಳನ್ನು ನಿರ್ಮಿಸಲು ಸರಕಾರ ಗಮನ ಕೇಂದ್ರೀಕರಿಸುತ್ತದೆ. ಜೊತೆಗೆ ಗ್ರಾಮೀಣ-ನಗರ ಪ್ರದೇಶಗಳ ನಡುವಿನ ಅಂತರವನ್ನು ನಿವಾರಿಸಲು ಒತ್ತು ಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಉದ್ಯಮಗಳು ವಿದ್ಯಾರ್ಥಿ ಅವಧಿಯ ಇಂಟರ್ನ್‍ಶಿಪ್‍ಗೆ ಉತ್ತೇಜನ ನೀಡುವ ಪ್ರವೃತ್ತಿ ಬೆಳೆಸುವ ಅಗತ್ಯವಿದೆ. ಪ್ರಸ್ತುತ ಇದಕ್ಕೆ ಸಂಬಂಧಿಸಿದಂತೆ ಉದ್ಯಮಗಳು ನಿರಾಸಕ್ತಿ ತಾಳಿವೆ. ಆದರೆ ಯುವಪೀಳಿಗೆಯೆ ಮುಂದಿನ ಭವಿಷ್ಯವಾದ್ದರಿಂದ ಅವರಿಗೆ ಅವಕಾಶ ನೀಡಬೇಕಾಗುತ್ತದೆ ಎಂದು ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.

ಡಿಜಿಟಲ್ ಆರ್ಥಿಕತೆಗೆ ಪೂರಕವಾಗಿ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ದಿಮೆಗಳಿಗೆ ಹೂಡಿಕೆಗಳನ್ನು ಆಕರ್ಷಿಸಿ 2025ರ ವೇಳೆಗೆ 10 ಲಕ್ಷ  ಉದ್ಯೋಗ ಸೃಷ್ಟಿಸುವ ಗುರಿಯನ್ನು ಕೆಡಿಇಎಂ ಹೊಂದಿದೆ. ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ಅಭಿವೃದ್ಧಿ ಮತ್ತು ಸೇವೆಗಳನ್ನು ಒದಗಿಸುವುದು, ಆವಿಷ್ಕಾರಗಳು ಮತ್ತು ನವೋದ್ಯಮಗಳು, ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ಇ.ಎಸ್.ಡಿ.ಎಂ.), ‘ಬೆಂಗಳೂರು ವ್ಯಾಪ್ತಿಯಾಚೆ’ (ಬಿಯಾಂಡ್ ಬೆಂಗಳೂರು) ಮತ್ತು ಪ್ರತಿಭಾ ಸಂವರ್ಧನೆ (ಟ್ಯಾಲೆಂಟ್ ಆಕ್ಸಲರೇಟರ್) ಈ ಐದು ವಲಯಗಳನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಲಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.

ಕರ್ನಾಟಕದ ಮಾಹಿತಿ ತಂತ್ರಜ್ಞಾನ ರಫ್ತು ಮೊತ್ತವು 2025ರ ವೇಳೆಗೆ 150 ಶತಕೋಟಿ ಯು.ಎಸ್.ಡಾಲರ್ ಗಳ ಗುರಿ ಮುಟ್ಟಲು ಹಾಗೂ ರಾಜ್ಯದ ಆರ್ಥಿಕತೆಯು 300 ಶತಕೋಟಿ ಡಾಲರ್ ಗಳ ಗುರಿ ಸಾಧಿಸಲು ಕೆಡಿಇಎಂ ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಮಾತನಾಡಿ, ಸದ್ಯ ರಾಜ್ಯದ ಒಟ್ಟಾರೆ ಜಿಡಿಪಿಗೆ ಮಾಹಿತಿ ತಂತ್ರಜ್ಞಾನ ವಲಯದ ಕೊಡುಗೆ ಶೇ.25ರಷ್ಟು ಇದ್ದು, ಇದರಲ್ಲಿ ಬೆಂಗಳೂರಿನ ಕೊಡುಗೆಯೇ ಶೇ.98ರಷ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವ್ಯಾಪ್ತಿಯಾಚೆಗಿನ ಪಾಲು ಹೆಚ್ಚಿಸುವ ಸಲುವಾಗಿ ‘ಬಿಯಾಂಡ್ ಬೆಂಗಳೂರು’ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ದೇಶವು ಮುಂದಿನ ಐದು ವರ್ಷಗಳಲ್ಲಿ ಒಂದು ಟ್ರಿಲಿಯನ್ (ಒಂದು ಲಕ್ಷ ಕೋಟಿ) ಡಾಲರ್ ಆರ್ಥಿಕತೆಯಾಗುವ ವೇಳೆಗೆ ‘ಬೆಂಗಳೂರು ವ್ಯಾಪ್ತಿಯಾಚೆ’ಗಿನ ಐಟಿ ವಲಯದ ಪಾಲು ರಾಜ್ಯ ಜಿಡಿಪಿಗೆ ಶೇ.10ರಷ್ಟು ಇರಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ನವೋದ್ಯಮ ದೂರದರ್ಶಿತ್ವ ಸಮಿತಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾತನಾಡಿ, ಉದ್ಯಮ-ಶೈಕ್ಷಣಿಕ ವಲಯ-ಸರಕಾರ, ಇವುಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಡಿಇಎಂ ಕೆಲಸ ಮಾಡಲಿದೆ. ಸೂಕ್ತ ಕಾರ್ಯನೀತಿ ರೂಪಿಸಲು, ಕಾರ್ಯತಂತ್ರ ಅಳವಡಿಸಿಕೊಳ್ಳಲು, ರಾಜ್ಯವನ್ನು ಡಿಜಿಟಲ್ ಸಂಶೋಧನಾ ನೆಲೆಯನ್ನಾಗಿಸಲು ಕೆಡಿಇಎಂ ಪ್ರಯತ್ನ ನಿರತವಾಗಲಿದೆ ಎಂದರು.

ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡ ಮಾತನಾಡಿ, ಮೈಸೂರು, ಮಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರ್ಗಿ, ಶಿವಮೊಗ್ಗ, ತುಮಕೂರು ಈ ಆರು ಕ್ಲಸ್ಟರ್ ಗಳಲ್ಲಿ ಡಿಟಿಜಲ್ ಆರ್ಥಿಕತೆ ಕೊಡುಗೆ ಹೆಚ್ಚಿಸಲು ಅವಕಾಶಗಳಿವೆ ಎಂದರು.

ನ್ಯಾಸ್ ಕಾಂ, ಅಸೋಚಾಮ್, ಭಾರತೀಯ ವಿದ್ಯುನ್ಮಾನ ಮತ್ತು ಅರೆವಾಹಕ ಉದ್ಯಮಗಳ ಸಂಘಟನೆ (ಐಇಎಸ್‍ಎ) ಮತ್ತು ನವೋದ್ಯಮಗಳ ದೂರದರ್ಶಿತ್ವ ಸಮಿತಿಗಳು ಕೆಡಿಇಎಂ ನಲ್ಲಿ ಶೇ.51ರಷ್ಟು ಪಾಲುದಾರಿಕೆ ಹೊಂದಿವೆ ಎಂದು ಅವರು ಹೇಳಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ನ್ಯಾಸ್ ಕಾಂ ಉಪಾಧ್ಯಕ್ಷ ವಿಶ್ವನಾಥ್, ಕೆಡಿಇಎಂ ಸದಸ್ಯ ನಾಗೇಶ್, ಎಲೆಕ್ಟ್ರಾನಿಕ್ಸ್ ಮತ್ತು ಐಟಿ/ಬಿಟಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕಿ ಡಾ.ಮೀನಾ ನಾಗರಾಜ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News