ನಕಲಿ ಡಿಡಿ ಪ್ರಕರಣ: ದಂಪತಿ ಸೇರಿ ನಾಲ್ವರ ಬಂಧನ

Update: 2021-02-10 13:18 GMT

ಬೆಂಗಳೂರು, ಫೆ.10: ನಕಲಿ ಡಿಡಿ (ಡಿಮ್ಯಾಂಡ್‍ಡ್ರಾಪ್ಟ್)ಗಳನ್ನು ತಯಾರಿಸುತ್ತಿದ್ದ ಆರೋಪದಡಿ ದಂಪತಿ ಸೇರಿ ನಾಲ್ವರನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 7 ಕೋಟಿ 18 ಲಕ್ಷ ಮೌಲ್ಯದ 25 ನಕಲಿ ಡಿಡಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇಂದ್ರಜಿತ್ ನಾಯಕ್(34), ಆತನ ಪತ್ನಿ ಮಂಜುಳಾ(34), ಆನಂದ(39), ಮುನಿರಾಜ(32) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೇಗೂರಿನ ಜಯರಾಂ ಎಂಬುವರನ್ನು ಆರೋಪಿ ಇಂದ್ರಜಿತ್ ನಾಯಕ್ ಪರಿಚಯ ಮಾಡಿಕೊಂಡು ಕೆಲ ಡೆವಲಪರ್ ಹೆಸರಿನಲ್ಲಿ 4 ಲಕ್ಷ 95 ಸಾವಿರ ರೂ.ಗಳ ನಕಲಿ ಡಿಡಿಗಳನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲು ನೀಡಿ ಒಂದೂವರೆ ಲಕ್ಷ ನಗದನ್ನು ಪಡೆದುಕೊಂಡಿದ್ದಾರೆ. ಆನಂತರ, ಡಿಡಿಯನ್ನು ಜಯರಾಂ ಅವರು ಫೆಡರಲ್ ಬ್ಯಾಂಕಿಗೆ ಹೋಗಿ ಚೆಕ್ ಮಾಡಿಸಿದಾಗ ನಕಲಿ ಡಿಡಿ ಎಂದು ಪತ್ತೆಯಾಗಿದೆ. ಈ ಸಂಬಂಧ ಜಯರಾಂ ಅವರು ನೀಡಿದ ದೂರನ್ನಾಧರಿಸಿ ಆರೋಪಿ ಇಂದ್ರಜಿತ್ ನಾಯಕ್‍ನನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಆನಂದ್ ಎಂಬಾತನ ಬಳಿ ರಬ್ಬರ್ ಸ್ಟಾಂಪ್‍ಗಳನ್ನು ಮಾಡಿಸಿಕೊಂಡು ಬಂದು ನಕಲಿ ಡಿಡಿಗಳ ಮೇಲೆ ಮುದ್ರಿಸಿ ಅವುಗಳನ್ನು ಅಸಲಿ ಡಿಡಿಗಳಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಯೋಜನೆ ಹಾಕಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳಿಂದ 9 ಸಾವಿರ ನಗದು, ನಕಲಿ ಡಿಡಿ, ಪ್ರಿಂಟರ್, 6 ಸೀಲುಗಳು, ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್ ಸೇರಿದಂತೆ 7 ಕೋಟಿ 18 ಲಕ್ಷ ಮೌಲ್ಯದ 25 ನಕಲಿ ಡಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News