ಸಾರಿಗೆ ನೌಕರರ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಬಿಎಂಟಿಸಿ ಕೇಂದ್ರ ಕಚೇರಿ ಮುಂಭಾಗ ಧರಣಿ

Update: 2021-02-10 14:32 GMT

ಬೆಂಗಳೂರು, ಫೆ.10: ಸಾರಿಗೆ ನೌಕರರಿಗೆ ನಿಗದಿತ ವೇಳೆಗೆ ಸಂಬಳ ಸಿಗದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಿಐಟಿಯು ಮುಖಂಡ ಎಚ್.ಡಿ.ರೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಬುಧವಾರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿ ಮುಂಭಾಗ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ನಾಲ್ಕು ತಿಂಗಳಿನಿಂದ ನಿಗದಿತ ವೇಳೆಗೆ ಸಂಬಳವಿಲ್ಲದೆ ಸಾರಿಗೆ ನೌಕರರ ಕುಟುಂಬಗಳು ದಿಕ್ಕು ತೋಚದ ಸ್ಥಿತಿಗೆ ತಲುಪಿವೆ. ಈ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸದಿದ್ದರೆ ಸಮಸ್ಯೆಗಳು ಗಂಭೀರ ಸ್ವರೂಪ ಪಡೆಯಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹತ್ತು, ಇಪ್ಪತ್ತು ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ನೌಕರರನ್ನು ಏಕಾಏಕಿ ಬೀದಿಗೆ ತಳ್ಳುವ ರೀತಿಯಲ್ಲಿ ರಾಜ್ಯ ಸರಕಾರ ಹಾಗೂ ಸಂಸ್ಥೆಗಳ ಅಧಿಕಾರಿಗಳು ವರ್ತಿಸುವುದು ಸರಿಯಲ್ಲ. ಸಂಸ್ಥೆಯ ಅಧಿಕಾರಿಗಳಿಗೇ ನಮ್ಮ ಸಮಸ್ಯೆ ಅರಿವಾಗದಿದ್ದರೆ ಮತ್ಯಾರಿಗೆ ತಿಳಿಯಲಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಸಾರಿಗೆ ನೌಕರರು ದುಪ್ಪಟ್ಟು ಸಂಬಳ ಕೇಳಿಲ್ಲ. ನಿಯಮ ಪ್ರಕಾರ ನಮಗೆ ಬರಬೇಕಾದ ಸಂಬಳವನ್ನು ನಿಗದಿತ ವೇಳೆಗೆ ನೀಡಿದರೆ ಸಾಕು. ಹಾಗೂ ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನಮ್ಮನ್ನು ಅಧಿಕಾರಿಗಳು ಅರ್ಥ ಮಾಡಿಕೊಂಡು, ಸೌಜನ್ಯದಿಂದ ವರ್ತಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಹಕ್ಕೊತ್ತಾಯಗಳು

-ನಿಗದಿತ ಸಮಯಕ್ಕೆ ವೇತನ ಪಾವತಿ ಮಾಡಬೇಕು.

-ವಾರದ ರಜೆ ಕಡ್ಡಾಯವಾಗಿ ಷರತ್ತುಗಳಿಲ್ಲದೆ ನೀಡಬೇಕು, ಕಾರ್ಮಿಕರ ರಜೆ ಕಡಿತ ನಿಲ್ಲಿಸಬೇಕು.

-ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಬೇಕು. ನಾಲ್ಕು ಪಾಳಿಗಳಲ್ಲಿ ಕೆಲಸ ನೀಡಬೇಕು. ಹಾಗೂ ಕೆಲಸ ನೀಡಲು ಲಂಚ ಪಡೆಯುವ ಅಧಿಕಾರಿಗಳನ್ನು ಶಿಕ್ಷಿಸಬೇಕು.

-ಮಹಿಳಾ ಕಾರ್ಮಿಕರಿಗೆ ಮೊದಲ ಮತ್ತು ಸಾಮಾನ್ಯ ಪಾಳಿಯಲ್ಲಿ ಕೆಲಸಕ್ಕೆ ಆದ್ಯತೆ ನೀಡಬೇಕು.

-ಘಟಕ ಮಟ್ಟದಲ್ಲಿ ಕಾರ್ಮಿಕರ ಕುಂದುಕೊರತೆ ನಿವಾರಣಾ ಸಮಿತಿಗಳನ್ನು ರಚಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಬೇಕು.

ಕಿಡ್ನಿ ಮಾರಾಟಕ್ಕಿಟ್ಟ ನೌಕರ

ಗಂಗಾವತಿ ಡಿಪೋದಲ್ಲಿ ಸಾರಿಗೆ ನಿರ್ವಾಹಕನಾಗಿ ಕೆಲಸ ಮಾಡುತ್ತಿರುವ ಹನುಮಂತಪ್ಪ ಜೀವನ ನಿರ್ವಹಣೆಗೆ ಕಿಡ್ನಿ ಮಾರಲು ಮುಂದಾಗಿದ್ದಾರೆ. ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದು, ನಾನೊಬ್ಬ ಸಾರಿಗೆ ನೌಕರನಾಗಿದ್ದೇನೆ. ಮನೆ ಬಾಡಿಗೆ, ರೇಷನ್ ಕೊಳ್ಳುವುದಕ್ಕೆ ಹಣ ಇಲ್ಲ. ಹೀಗಾಗಿ ನನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News