ಶಾಲಾ ಶುಲ್ಕ ಪಾವತಿ ಮಾಡುವಂತೆ ಒತ್ತಡ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

Update: 2021-02-10 15:02 GMT

ಬೆಂಗಳೂರು, ಫೆ.10: ಖಾಸಗಿ ಶಾಲಾ ಮಂಡಳಿಯು ಶಾಲಾ ಶುಲ್ಕ ಪಾವತಿ ಮಾಡುವಂತೆ ಒತ್ತಡ ಹೇರಿದೆ ಎನ್ನಲಾಗಿದ್ದು, ಪರಿಣಾಮ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಾಲೆಗೆ ಪೂರ್ತಿ ಶುಲ್ಕ ಪಾವತಿಸಲಿಲ್ಲವೆಂದು ಶಾಲಾ ಆಡಳಿತವು 10ನೆ ತರಗತಿ ಓದುತ್ತಿದ್ದ ವಿದ್ಯಾರ್ಥಿಯೋರ್ವನನ್ನು ಪರೀಕ್ಷೆ ವೇಳೆ ಎಬ್ಬಿಸಿ ಹೊರಕಳುಹಿಸಿದೆ ಎನ್ನಲಾಗಿದ್ದು, ಇದರಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಲಾಗುತ್ತಿದೆ.

ಬೊಮ್ಮನಹಳ್ಳಿಯ ಸೋಮಸುಂದರ ಪಾಳ್ಯದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಶಾಲಾ ಆಡಳಿತ ಮಂಡಳಿಯವರು ಆಂಧ್ರ ಮೂಲದವರು ಎಂದು ತಿಳಿದುಬಂದಿದ್ದು, ಪೋಷಕರ ಸಮಯಪ್ರಜ್ಞೆಯಿಂದಾಗಿ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಶಾಲಾ ಆಡಳಿತ ಮಂಡಳಿಯು 96 ಸಾವಿರ ಶುಲ್ಕದಲ್ಲಿ ಶಾಲೆ 10 ಸಾವಿರ ರೂ.ಗಳ ವಿನಾಯಿತಿ ನೀಡಿದೆ ಎನ್ನಲಾಗಿದೆ. ವಿದ್ಯಾರ್ಥಿಯ ಪೋಷಕರು ಈಗಾಗಲೇ 36 ಸಾವಿರ ರೂ.ಶುಲ್ಕ ಪಾವತಿಸಿದ್ದು, ಉಳಿದ 50 ಸಾವಿರ ರೂ.ಪಾವತಿ ಮಾಡುವಂತೆ ವಿದ್ಯಾರ್ಥಿಗೆ ಒತ್ತಡ ಹೇರಿದೆ ಎಂದು ಆರೋಪಿಸಲಾಗಿದೆ. ಶಾಲೆಯ ಕಿರುಕುಳದ ಬಗ್ಗೆ ವಿದ್ಯಾರ್ಥಿಯ ಪೋಷಕರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News