ಸಚಿವರಿಗೆ ಸೂಕ್ತ ಸ್ವಾಗತ ನೀಡದ ಇಬ್ಬರು ಅಧಿಕಾರಿಗಳಿಗೆ ಅಮಾನತು ಶಿಕ್ಷೆ !

Update: 2021-02-11 04:04 GMT

ಪಾಟ್ನಾ: ಬಿಹಾರ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾದ ಸಚಿವರಿಗೆ ಸೂಕ್ತ ಸ್ವಾಗತ ನೀಡಿಲ್ಲ ಎಂಬ ಕಾರಣಕ್ಕಾಗಿ ಇಬ್ಬರು ಅಧಿಕಾರಿಗಳನ್ನು ಅಮಾನತುಪಡಿಸಲಾಗಿದೆ.

ಮಂಗಳವಾರ ನಿತೀಶ್ ಕುಮಾರ್ ಸಂಪುಟಕ್ಕೆ ಸೇರ್ಪಡೆಗೊಂಡಿದ್ದ ಬಿಜೆಪಿ ಮುಖಂಡ ಜನಕ ರಾಮ್, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅಧಿಕಾರ ಸ್ವೀಕರಿಸಲು ತೆರಳಿದಾಗ ಸೂಕ್ತ ಸ್ವಾಗತ ಅಧಿಕಾರಿಗಳಿಂದ ಸಿಕ್ಕಿಲ್ಲ ಎನ್ನಲಾಗಿದೆ. ಇಲಾಖೆ ಪ್ರಧಾನ ಕಾರ್ಯದರ್ಶಿ ಮೀಟಿಂಗ್‌ನಲ್ಲಿದ್ದ ಕಾರಣ ಹಾಗೂ ತಮ್ಮನ್ನು ಚೇಂಬರ್‌ಗೆ ಕರೆದೊಯ್ಯಲು ನಿರ್ದೇಶಕ ಶ್ರೇಣಿಯ ಅಧಿಕಾರಿ ಹಾಜರಿರಲಿಲ್ಲ ಎಂಬ ಹಿನ್ನೆಲೆಯಲ್ಲಿ ಸಚಿವ ಜನಕರಾಮ್ ತೀವ್ರ ಸಿಡಿಮಿಡಿಗೊಂಡಿದ್ದರು.

ಜನಕರಾಮ್ ದಲಿತ ಮುಖಂಡರಾಗಿದ್ದು, ಈ ಮುನ್ನ ಗೋಪಾಲ್‌ಗಂಜ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನಾಲ್ಕನೇ ದರ್ಜೆ ಸಿಬ್ಬಂದಿಯೊಬ್ಬರಿಂದ ಹೂಗುಚ್ಛ ಸ್ವೀಕರಿಸಬೇಕಾಯಿತು ಎಂದು ಜನಕರಾಮ್ ಕಿಡಿ ಕಾರಿದ್ದರು. ಸಂತೋಷ್ ಯಾದವ್ ಎಂಬ ಜವಾನ ಸಚಿವರಿಗೆ ಹೂಗುಚ್ಛ ನೀಡಿದಾಗ ಅಭಿಮಾನದಿಂದ ರಾಮ್ ಬೆನ್ನುತಟ್ಟಿದ್ದರು.

ಈ ಘಟನೆಯಿಂದಾಗಿ ಪ್ರಧಾನ ಕಾರ್ಯದರ್ಶಿ ಹರ್ಜೋತ್ ಕೌರ್ ಆಗಮಿಸಿ, ಆಗಿರುವ ಲೋಪಕ್ಕೆ ವಿಷಾದ ವ್ಯಕ್ತಪಡಿಸಿ ಹೂಗುಚ್ಛ ನೀಡುವವರೆಗೂ, ಅಧಿಕಾರಶಾಹಿ ಬಗ್ಗೆ ಗುಸುಗುಸು ಮಾತುಕತೆ ನಡೆಯುತ್ತಿತ್ತು. ಸಚಿವರ ಆಗಮನ ಬಗ್ಗೆ ಸಚಿವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಚೌಹಾಣ್ ಹಾಗೂ ಎಲ್‌ಡಿಸಿ ಸಂತೋಷ್ ಕುಮಾರ್ ಮಾಹಿತಿ ನೀಡದೇ ಇರುವುದು ಪ್ರಮಾದಕ್ಕೆ ಕಾರಣ ಎಂದು ಪತ್ರಕರ್ತರ ಜತೆ ಮಾತನಾಡಿದ ಕೌರ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತುಪಡಿಸಿ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಕೌರ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News