ಅನಿರ್ಬಂಧಿತ ರೈಲು ಸಂಚಾರ ಯಾವಾಗ?

Update: 2021-02-12 04:59 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇಡೀ ಮನುಕುಲವನ್ನೇ ನಡುಗಿಸಿದ ಕೊರೋನ ಸೋಂಕು ಬಹುತೇಕ ಇಳಿಮುಖವಾಗುತ್ತಿದೆ. ಆತಂಕ ಇನ್ನೂ ಸಂಪೂರ್ಣ ನಿವಾರಣೆಯಾಗದಿದ್ದರೂ ಸರಕಾರ ಜನರ ಚಟುವಟಿಕೆಗಳ ಮೇಲೆ ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ವಿಧಿಸಿದ್ದ ನಿರ್ಬಂಧಗಳನ್ನು ಕ್ರಮೇಣ ತೆರವುಗೊಳಿಸುತ್ತಿದೆ. ದೇವಾಲಯಗಳು ತೆರೆದಿವೆ.ಬ್ರಹ್ಮ ರಥೋತ್ಸವ, ಅನ್ನ ದಾಸೋಹಗಳಂತಹ ಸೇವೆಗಳ ಪುನರಾರಂಭಕ್ಕೆ ಧಾರ್ಮಿಕ ದತ್ತಿ ಇಲಾಖೆ ಪರವಾನಿಗೆ ನೀಡಿದೆ. ಚಿತ್ರ ಮಂದಿರಗಳು ಸಂಪೂರ್ಣವಾಗಿ ತೆರೆದಿವೆ. ಶಾಲೆ, ಕಾಲೇಜುಗಳು ಆರಂಭವಾಗಿವೆ. ಮಾರುಕಟ್ಟೆಗಳು ಜನರಿಂದ ಗಿಜಿಗುಡುತ್ತಿವೆ.ರಾಜಧಾನಿ ಬೆಂಗಳೂರು ನಗರವನ್ನು 24 ಗಂಟೆ ಜನ ಚಟುವಟಿಕೆಗೆ ಮುಕ್ತಗೊಳಿಸುವ ಚಿಂತನೆಯೂ ನಡೆದಿದೆ. ಸಾರಿಗೆ ಬಸ್, ಟ್ಯಾಕ್ಸಿ, ಕ್ಯಾಬ್‌ಗಳ ಓಡಾಟ ಶುರುವಾಗಿದೆ. ಹೀಗೆ ಎಲ್ಲವನ್ನೂ ಮುಕ್ತಗೊಳಿಸಲಾಗಿದ್ದರೂ ರೈಲು ಸೇವೆಯ ಮೇಲಿನ ನಿರ್ಬಂಧವನ್ನು ಮಾತ್ರ ತೆಗೆದಿಲ್ಲ. ಕೆಲವೇ ಕೆಲವು ವಿಶೇಷ ರೈಲುಗಳು ಸಂಚರಿಸುತ್ತಿವೆ. ಆದರೆ ಲೋಕಲ್ ರೈಲು ಸಂಚಾರವನ್ನು ಇನ್ನೂ ಮುಕ್ತಗೊಳಿಸಿಲ್ಲ. ಹೀಗಾಗಿ ಊರಿಂದೂರಿಗೆ ಹೋಗಲು ಲೋಕಲ್ ರೈಲುಗಳನ್ನೇ ಅವಲಂಬಿಸಿರುವ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ.

  ಲಾಕ್‌ಡೌನ್‌ನಿಂದಾಗಿ ಕೆಲ ತಿಂಗಳು ಬಸ್ ಮತ್ತು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ನಿಧಾನವಾಗಿ ಬಸ್ ಸಂಚಾರ ಆರಂಭವಾಯಿತು. ತುಂಬಾ ತಡವಾಗಿ ರೈಲು ಸಂಚಾರವನ್ನೇನೋ ಆರಂಭಿಸಲಾಯಿತು. ಆದರೆ ಪೂರ್ಣ ಪ್ರಮಾಣದ ಓಡಾಟ ಇನ್ನೂ ಆರಂಭವಾಗಿಲ್ಲ. ಈ ದೇಶದಲ್ಲಿ ಶತಮಾನದ ಹಿಂದೆ ರೈಲು ಸಂಚಾರ ಆರಂಭವಾದಾಗಿನಿಂದ ಇಂತಹ ಪರಿಸ್ಥಿತಿ ಉಂಟಾಗಿರಲಿಲ್ಲ. ದೇಶದ ಬಹುತೇಕ ಪ್ರಯಾಣಿಕರು ದೂರ ಪ್ರಯಾಣವಿರಲಿ, ಸಮೀಪದ ಪ್ರಯಾಣವಿರಲಿ ಸಂಚಾರಕ್ಕೆ ರೈಲುಗಳನ್ನೇ ಅವಲಂಬಿಸಿದ್ದಾರೆ. ಹಳ್ಳಿಗಳಿಂದ ಸಮೀಪದ ನಗರಗಳಿಗೆ ಬಂದು ದುಡಿದು ಅಂದೇ ಸಂಜೆ ತಮ್ಮ ಊರುಗಳನ್ನು ಸೇರಿಕೊಳ್ಳುವವರು ಲೋಕಲ್ ರೈಲುಗಳನ್ನು ಅವಲಂಬಿಸಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.

ದೂರ ಪ್ರಯಾಣಕ್ಕೂ ರೈಲು ಬಿಟ್ಟರೆ ಜನರಿಗೆ ಬೇರೆ ಗತಿ ಇಲ್ಲ. ವಾಸ್ತವ ಸಂಗತಿ ಹೀಗಿರುವಾಗ ಕೊರೋನ ಸೋಂಕು ಇಳಿಮುಖವಾದ ನಂತರವೂ ರೈಲು ಸಂಚಾರ ಸಂಪೂರ್ಣ ಆರಂಭವಾಗದಿರುವುದರಿಂದ ಬಹುತೇಕ ನಗರಗಳಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ. ವಿಶೇಷವಾಗಿ ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಫಿ ಕೊಯ್ಲು ಮತ್ತಿತರ ಕೆಲಸಗಳಿಗೆ ಬರಬೇಕಾದ ಉತ್ತರ ಭಾರತದ ಕಾರ್ಮಿಕರು ಬರದಿರುವುದಕ್ಕೆ ರೈಲು ಸಂಚಾರದ ಮೇಲಿನ ನಿರ್ಬಂಧವೇ ಕಾರಣವಾಗಿದೆ. ಮುಂಚಿನಂತೆ ರೈಲು ನಿಲ್ದಾಣಗಳಲ್ಲಿ ನೇರವಾಗಿ ಟಿಕೆಟ್ ದೊರೆಯುತ್ತಿಲ್ಲ. ರಿಸರ್ವೇಶನ್ ಮಾಡಿಸಿದ ವಿಶೇಷ ರೈಲುಗಳಲ್ಲಿ ಸಂಚರಿಸುವವರಿಗೆ ಮಾತ್ರ ಈಗ ಅವಕಾಶ ನೀಡಿರುವುದರಿಂದ ಎಲ್ಲ ಕಡೆ ನಿಲ್ಲುವ ಪ್ಯಾಸೆಂಜರ್ ರೈಲುಗಳಲ್ಲಿ ಸಂಚರಿಸುವ ದಿನಗೂಲಿ ಕಾರ್ಮಿಕರಿಗೆ, ರೈತರಿಗೆ, ಅನಕ್ಷರಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ. ರೈಲು ನಿಲ್ಲುವ ಫ್ಲಾಟ್‌ಫಾರ್ಮ್ ಟಿಕೆಟ್‌ಗೆ ಕೂಡ ತಲಾ ರೂ. 50 ತೆರಬೇಕಾಗಿ ಬಂದಿದೆ. ಈಗ ಓಡಾಡುವ ವಿಶೇಷ ರೈಲುಗಳಲ್ಲಿ ತಿಂಗಳ ಪ್ರಯಾಣದ ಪಾಸುಗಳಿಗೆ ಅನುಮತಿಯಿಲ್ಲ. ಹಿರಿಯ ನಾಗರಿಕರಿಗೆ ಇರುವ ರಿಯಾಯಿತಿ ಕೂಡ ಇಲ್ಲ. ಹೀಗಾಗಿ ಮೊದಲೇ ಕೊರೋನ ಪರಿಣಾಮವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರು ಮೂಕ ಸಂಕಟವನ್ನು ಅನುಭವಿಸುತ್ತಿದ್ದಾರೆ.

ದೇಶದಲ್ಲಿ ಸುಮಾರು ಆರು ತಿಂಗಳುಗಳ ಕಾಲ ಶ್ರಮಿಕ ರೈಲು ಹೊರತು ಪಡಿಸಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಕೆಲವೇ ವಿಶೇಷ ರೈಲುಗಳು ಮಾತ್ರ ಸಂಚರಿಸುತ್ತಿರುವುದರಿಂದಾಗಿ ಪ್ರವಾಸೋದ್ಯಮಕ್ಕೂ ಸಾಕಷ್ಟು ಪೆಟ್ಟು ಬಿದ್ದಿದೆ. ವ್ಯಾಪಾರ, ವಹಿವಾಟು ಮತ್ತು ಆರ್ಥಿಕ ಚಟುವಟಿಕೆಗಳ ಮೇಲೂ ಕೆಟ್ಟ ಪರಿಣಾಮ ಉಂಟಾಗಿದೆ. ಕೊರೋನ ಸೋಂಕು ಇಳಿಮುಖವಾಗುತ್ತಿರುವುದರಿಂದ ವಿಶೇಷ ರೈಲುಗಳನ್ನು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಓಡಿಸಲು ಅನುಮತಿ ನೀಡಿದಂತೆ ಸ್ಥಳೀಯ ಪ್ಯಾಸೆಂಜರ್ ರೈಲುಗಳ ಓಡಾಟಕ್ಕೂ ಅವಕಾಶ ನೀಡಿದರೆ ಸೂಕ್ತವಾಗುತ್ತದೆ. ಔದ್ಯಮಿಕ ಚಟುವಟಿಕೆಗಳು ಮತ್ತು ವ್ಯಾಪಾರ, ವಹಿವಾಟುಗಳು ಮುಂಚಿನಂತೆ ನಡೆಯಬೇಕಾದರೆ ಸ್ಥಳೀಯ ರೈಲುಗಳ ಸಂಚಾರವನ್ನು ಪುನರಾರಂಭಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಕೋವಿಡ್ ನಿಯಮಗಳನ್ನು ಸರಕಾರ ಸಡಿಲುಗೊಳಿಸಬೇಕಾಗಿದೆ. ಈಗ ಪರಿಸ್ಥಿತಿ ಇದಕ್ಕೆ ಪಕ್ವವಾಗಿದೆ. ಈ ಬಗ್ಗೆ ಸರಕಾರ ಹಿಂದೆ ಮುಂದೆ ನೋಡಬಾರದು.

ಜಾತ್ರೆ, ಸಂತೆ, ದೇವಾಲಯ ಪ್ರವೇಶ, ರಥೋತ್ಸವ, ಬಸ್ ಸಂಚಾರ, ಮಾರುಕಟ್ಟೆ, ಚಲನಚಿತ್ರ ಮಂದಿರ ಮತ್ತು ಶಾಲೆ, ಕಾಲೇಜುಗಳ ಮೇಲೆ ಇಲ್ಲದ ನಿರ್ಬಂಧ ರೈಲುಗಳ ಸಂಚಾರದ ಮೇಲೆ ಮತ್ತು ರೈಲು ನಿಲ್ದಾಣಗಳಲ್ಲಿ ಹೇರಲು ಕಾರಣವೇನು ಎಂಬುದು ಅರ್ಥವಾಗುತ್ತಿಲ್ಲ. ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಎಲ್ಲ ಸಾರ್ವಜನಿಕ ರಂಗದ ಉದ್ಯಮಗಳನ್ನು ಖಾಸಗೀಕರಣ ಮಾಡಲು ಕೊರೋನ ವೈರಾಣುವನ್ನು ನೆಪವಾಗಿ ಬಳಸಿಕೊಂಡ ಹಾಗೆ ದೇಶದ ಹೆಮ್ಮೆಯ ಹಾಗೂ ನಷ್ಟದಲ್ಲಿಲ್ಲದ ರೈಲು ಸೇವೆಯನ್ನು ಖಾಸಗೀಕರಣ ಮಾಡಲು ಮಸಲತ್ತು ನಡೆಸಿದೆಯೇನೋ ಎಂಬ ಸಂದೇಹ ಸಹಜವಾಗಿ ಬರುತ್ತದೆ. ಜನಸಾಮಾನ್ಯರಲ್ಲಿ ಇಂತಹ ಸಂಶಯ ನಿವಾರಣೆಯಾಗಬೇಕಾದರೆ ರೈಲುಗಳ ಅನಿರ್ಬಂಧಿತ ಓಡಾಟಕ್ಕೆ ಸರಕಾರ ಅನುಮತಿ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News