ಮಧ್ಯಪ್ರದೇಶದಲ್ಲಿ ಮುಚ್ಚುಗಡೆಯಾಗುವ ಭೀತಿಯಲ್ಲಿ ಮಂಡಿಗಳು, ವ್ಯವಹಾರದಲ್ಲಿ ಭಾರೀ ಕುಸಿತ

Update: 2021-02-13 09:54 GMT

ಭೋಪಾಲ್: ಕೇಂದ್ರ ಹಾಗೂ ಮಧ್ಯಪ್ರದೇಶ ಸರಕಾರ ನೂತನ ಕೃಷಿ ಕಾನೂನುಗಳ ಜಾರಿ ಹೊರತಾಗಿಯೂ ಸಗಟು ಕೃಷಿ ಮಾರುಕಟ್ಟೆಗಳು ಅಥವಾ ಮಂಡಿಗಳು ತೆರೆದಿರುತ್ತವೆ ಎಂದು ಭರವಸೆ ನೀಡುತ್ತಿರುವ ಸಮಯದಲ್ಲೇ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿ ಭಾರೀ ನಷ್ಟ ಅನುಭವಿಸುವ ಜೊತೆಗೆ ಅನಿಶ್ಚಿತ ಭವಿಷ್ಯದತ್ತ ಸಾಗುತ್ತಿದ್ದು, ಸರಕಾರದಿಂದ ಮುಚ್ಚುಗಡೆಯಾಗುವ ಭೀತಿಯಲ್ಲಿವೆ.

ರಾಜ್ಯದ ಸಗಟು ಕೃಷಿ ಮಾರುಕಟ್ಟೆಗಳು ಜನವರಿ 2020ರಲ್ಲಿ 88 ಕೋ.ರೂ. ಆದಾಯ ಗಳಿಸಿದ್ದರೆ ಜನವರಿ 2021ರಲ್ಲಿ 29.26 ಕೋ.ರೂ.ಆದಾಯ ಗಳಿಸಿದೆ. ಆದಾಯ ಪ್ರಮಾಣ 66 ಶೇ.ರಷ್ಟು ಕುಸಿದಿದೆ. ಕೇಂದ್ರ ಸರಕಾರ ಜಾರಿಗೊಳಿಸಿರುವ 3 ಕೃಷಿ ಕಾನೂನುಗಳ ಪೈಕಿ ಒಂದಾಗಿರುವ ರೈತರ ಉತ್ಪನ್ನ, ವ್ಯಾಪಾರ ಹಾಗೂ ವಾಣಿಜ್ಯ(ಪ್ರಚಾರ ಹಾಗೂ ಸೌಲಭ್ಯ)ಕಾಯ್ದೆ 2020ಅನ್ನು ಅಂಗೀಕರಿಸಿದ ನಂತರ ಮಂಡಿಯ ಆದಾಯದಲ್ಲಿ ಕುಸಿತವಾಗಿದೆ. ಕೃಷಿ ಕಾಯ್ದೆಯು ಸರಕಾರದಿಂದ ನಡೆಸಲ್ಪಡುವ ಮಂಡಿಗಳ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವು ಮಾಡಿಕೊಟ್ಟಿದೆ.

"ನಾವೀಗ ಮಂಡಿಗಳನ್ನು ಆದರ್ಶ ಮಾರುಕಟ್ಟೆಗಳನ್ನಾಗಿ ಮಾಡುತ್ತೇವೆ. ಮಂಡಿ ಹಾಗೂ ಎಂ ಎಸ್ ಪಿ (ಕನಿಷ್ಠ ಬೆಂಬಲ ಬೆಲೆ)ಎರಡೂ ಉಳಿಯುತ್ತವೆ. ರೈತರಿಗೆ ಉತ್ತಮ ವಾತಾವರಣ ಒದಗಿಸಲು ನಾವು ಬಯಸಿದ್ದು, ಮಂಡಿಯೊಳಗೆ  ಬ್ಯಾಂಕ್, ಪೆಟ್ರೋಲ್ ಪಂಪ್, ರಸಗೊಬ್ಬರದ ಬೀಜಗಳ ಅಂಗಡಿಗಳು ಇರುತ್ತವೆ. ಸೇನಾ ಕ್ಯಾಂಟೀನ್‍ನಂತಹ ದಿನಸಿ ಅಂಗಡಿಗಳು ಇರಲಿವೆ. ಇದಕ್ಕಾಗಿ ನಾವು ಖಾಸಗಿವಲಯ ಹಾಗೂ ಎನ್ ಜಿಒಗಳ ಸಹಕಾರವನ್ನು ಪಡೆದುಕೊಳ್ಳುತ್ತೇವೆ'' ಎಂದು ಕೃಷಿ ಸಚಿವ ಕಮಲ್ ಪಟೇಲ್ ಹೇಳಿದ್ದಾರೆ.

"ಮಂಡಿಗಳನ್ನು ಆಧುನೀಕರಣಗೊಳಿಸುವ ಯೋಜನೆಯು 40 ಎಕ್ಲಾಸ್ ಮಂಡಿಗಳಿಗೆ ಸಾಧ್ಯವಾಗಬಹುದು. ಸಣ್ಣ ಮಂಡಿಗಳಿಗೆ ಇದು ಸಾಧ್ಯವಿಲ್ಲ. ಆದಾಯವಿಲ್ಲದೆ ರಾಜ್ಯದ ಸಣ್ಣ ಮಂಡಿಗಳನ್ನು ಸರಕಾರ ಮುಚ್ಚುತ್ತದೆ ಎಂಬುದು ಸ್ಪಷ್ಟವಾಗಿದೆ'' ಎಂದು ಮಧ್ಯಪ್ರದೇಶದ ಮಂಡಿ ಮಂಡಳಿಯ ಅಧ್ಯಕ್ಷ ಬಿ.ಬಿ.ಫೌಜ್ದಾರ್ ಹೇಳಿದ್ದಾರೆ.

ಎಲ್ಲ ಮಂಡಿಗಳಿಗೆ ರೈತರ ಭೇಟಿ ಇಳಿಮುಖವಾಗಿದ್ದು,ಇಂದೋರ್‍ನಲ್ಲಿ ಶೇ.4,ರೇವಾದಲ್ಲಿ ಶೇ.71ರ ವರೆಗೆ ಇಳಿಮುಖವಾಗಿದೆ. ರಾಜ್ಯದಲ್ಲಿ 259 ಮಂಡಿಗಳಲ್ಲಿ 47 ಮಂಡಿಗಳು ಅಕ್ಟೋಬರ್ ನಲ್ಲಿ ಶೂನ್ಯ ವ್ಯವಹಾರ ಮಾಡಿದ್ದವು. ಕಳೆದ 6 ತಿಂಗಳಲ್ಲಿ 143 ಮಂಡಿಗಳಲ್ಲಿ ವ್ಯವಹಾರವು 50ರಿಂದ 60 ಶೇ.ಇಳಿತವಾಗಿದೆ.  ಕಳೆದ ಆರು ತಿಂಗಳಲ್ಲಿ ರಾಜ್ಯದ 298 ಸಬ್ ಮಂಡಿಗಳು ಶೂನ್ಯ ವ್ಯವಹಾರ ನಡೆಸಿವೆ ಎನ್ನುವುದು ಅಂಕಿಅಂಶ ತೋರಿಸುತ್ತಿದ್ದು, ಮುಚ್ಚುವ ಹಾದಿಯಲ್ಲಿದೆ. 

ಈ ಮಂಡಿಗಳಲ್ಲಿ 6,500 ಉದ್ಯೋಗಿಗಳಿದ್ದು, ಸುಮಾರು 2,500 ಪಿಂಚಣಿದಾರರು ಮಂಡಳಿಯನ್ನು ಅವಲಂಬಿಸಿದ್ದಾರೆ. ಅವರಲ್ಲಿ 45,000 ನೋಂದಾಯಿತ ವ್ಯಾಪಾರಿಗಳಿದ್ದಾರೆ. ಅಕ್ಟೋಬರ್ ನಲ್ಲಿ ಮಂಡಿ ಮಂಡಳಿಯ ಅಧಿಕಾರಿಗಳು, ವ್ಯಾಪಾರಿಗಳು ಭಾರೀ ಪ್ರತಿಭಟನೆ ನಡೆಸಿ ರಾಜ್ಯ ಮಾದರಿಯ ಮಂಡಿ ಕಾಯ್ದೆಯನ್ನು ವಿರೋಧಿಸಿದ್ದರು.

"ನೂತನ ಕೃಷಿ ಕಾನೂನುಗಳನ್ನು ಮೊದಲಿಗೆ ವಿರೋಧಿಸಿದ ರಾಜ್ಯ ಮಧ್ಯಪ್ರದೇಶ. ಮಂಡಿ ಮಂಡಳಿಯ ಉದ್ಯೋಗಿಗಳು, ವ್ಯಾಪಾರಿಗಳು, ಪೋರ್ಟರ್ ಗಳು ನೂತನ ಕಾಯ್ದೆಗಳನ್ನು ವಿರೋಧಿಸಿದ್ದರು. …ಭವಿಷ್ಯದಲ್ಲಿ ಯಾವ ಪರಿಸ್ಥಿತಿ ಬರುತ್ತದೆ ಎಂದು ನಮಗೆ ಗೊತ್ತಿತ್ತು. ಬಿಹಾರದಲ್ಲಿ ಯಾವ ಪರಿಸ್ಥಿತಿ ಸೃಷ್ಟಿಸಿದ್ದಾರೆ ಎಂದು ನಮಗೆ ಗೊತ್ತಿದೆ. ನಾವು ಹೋರಾಡುತ್ತೇವೆ. ಆದರೆ ಇಲ್ಲಿಗೆ ನಿಲ್ಲುವುದಿಲ್ಲ. ಕಳೆದ ವರ್ಷ ಆದಾಯ 1,200 ಕೋ.ರೂ. ಇತ್ತು. ಈ ಬಾರಿ ಅದು 700-800 ಕೋಟಿಗೆ ಇಳಿದಿದೆ. ಮುಂದಿನ ವರ್ಷ ಅದು ಮತ್ತಷ್ಟು ಇಳಿಯಲಿದೆ. ಕಳೆದ ಕೆಲವು ತಿಂಗಳುಗಳಿಂದ ರಾಜ್ಯಾದ್ಯಂತ 50-60 ಮಂಡಿಗಳಿಗೆ ವೇತನ ಪಾವತಿಸಲು ಸಾಧ್ಯವಾಗದ ಕಾರಣ ನಾವು ಅನುದಾನ ನೀಡಿದ್ದೇವೆ. ಸರಕಾರವು ಮಂಡಿಗಳನ್ನು ಮುಚ್ಚಲು ಉದ್ದೇಶಿಸಿದ್ದು ಸ್ಪಷ್ಟವಾಗಿದೆ'' ಎಂದು ಮ.ಪ್ರ.ಮಂಡಿ ಮಂಡಳಿ ಅಧ್ಯಕ್ಷ ಫೌಜ್ದಾರ್ ಹೇಳಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News