‘ವಿದ್ಯುತ್ ದರ ಹೆಚ್ಚಳ ಪ್ರಸ್ತಾಪ ಸಲ್ಲಿಸಿ ಜನರ ಸುಲಿಗೆಗೆ ಹೊರಟ ಬೆಸ್ಕಾಂ’

Update: 2021-02-13 15:57 GMT

ಬೆಂಗಳೂರು, ಫೆ.13: ಕಳೆದ ಸಾಲಿನ ನವೆಂಬರ್ 1 ರಿಂದ ಪ್ರತಿ ಯೂನಿಟ್‍ಗೆ 40 ಪೈಸೆ (ಶೇ.6ರಷ್ಟು) ವಿದ್ಯುತ್ ದರ ಹೆಚ್ಚಳ ಮಾಡಿದ್ದ ಬೆಸ್ಕಾಂ ಮತ್ತೊಮ್ಮೆ ತೆರೆಮರೆಯಲ್ಲಿ ಜನರ ಮೇಲೆ ಬರೆ ಎಳೆಯಲು ಹೊರಟಿದೆ. ಪ್ರಸಕ್ತ ಸಾಲಿನ ಎಪ್ರಿಲ್ ತಿಂಗಳಿನಿಂದ ಪ್ರತಿ ಯೂನಿಟ್‍ಗೆ 1.39 ರೂ.(ಶೇ.22ರಷ್ಟು) ಹೆಚ್ಚಳಕ್ಕೆ ಬೆಸ್ಕಾಂ ರಾಜ್ಯ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆ. ಇಂತಹ ಸಂಕಷ್ಟದ ಹೊತ್ತಿನಲ್ಲಿ ಮತ್ತೊಮ್ಮೆ ಬೆಸ್ಕಾಂ ಜನರ ಸುಲಿಗೆಗೆ ಇಳಿಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ನೀತಿ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಕಾಶ್ ನೆಡುಂಗಡಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2020-21ರ ಅವಧಿಯಲ್ಲಿ 5,872 ಕೋಟಿ ರೂ.ಆದಾಯದ ಕೊರತೆಯನ್ನು ಬೆಸ್ಕಾಂ ತೋರಿಸಿದೆ. ಕಳೆದ ವರ್ಷದ ವಿದ್ಯುತ್ ಬೆಲೆ ಹೆಚ್ಚಳ ಹಾಗೂ ಈಗ ಪ್ರಸ್ತಾಪಿಸಿರುವ ಬೆಲೆ ಏರಿಕೆಯನ್ನು ಸೇರಿಸಿದರೆ ಒಟ್ಟು ಪ್ರತಿ ಯುನಿಟ್‍ಗೆ 1.79 ರೂಪಾಯಿ (ಶೇ.26) ಹೆಚ್ಚಳವಾಗುತ್ತದೆ. ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸಿದರೆ ಸರಾಸರಿ 300 ರೂ.ನಷ್ಟು ಅಧಿಕ ಬಿಲ್ ಬರುತ್ತದೆ. ಜನರ ಹಣ ಸುಲಿಗೆ ಮಾಡಿ ಅದಾನಿ ಜೇಬು ತುಂಬಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ವಿದ್ಯುತ್ ಇಲಾಖೆಯಲ್ಲಿನ ಭ್ರಷ್ಟಾಚಾರ ಮತ್ತು ವಿದ್ಯುತ್ ವಿತರಣೆಯಲ್ಲಿನ ಅಸಮರ್ಥತೆಯಿಂದ ಸಾಕಷ್ಟು ಹಣ ಸೋರಿಕೆಗೆ ಕಾರಣವಾಗಿದೆ. ಅಲ್ಲದೇ ಕಳೆದ ಎರಡು ವರ್ಷಗಳಿಂದ ರಾಜ್ಯ ಬಿಜೆಪಿ ಸರಕಾರ ಅದಾನಿ ಪವರ್ ಗೆ ಪ್ರತಿ ಕಿಲೋವ್ಯಾಟಿಗೆ 6.80 ರೂಪಾಯಿ ಅಂದರೆ ಶೇ.42 ರಷ್ಟು ಹೆಚ್ಚುವರಿ ಹಣ ನೀಡುತ್ತಿದೆ ಎಂದು ಅವರು ಆರೋಪಿಸಿದರು.

2020ರ ಎಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಉಡುಪಿಯ ಅದಾನಿ ಪವರ್ ತನ್ನ ಲಾಭವನ್ನು 100 ಪಟ್ಟು ಹೆಚ್ಚಿಸಿಕೊಂಡಿದೆ. ವಿದ್ಯುತ್ ಸಚಿವಾಲಯವು ಅದಾನಿಯಿಂದ ಹೆಚ್ಚುವರಿಯಾಗಿ 1800 ಮೆಗಾವ್ಯಾಟ್ ಖರೀದಿಸುವ ಯೋಜನೆ ಹಾಕಿದ್ದು. ಇದಕ್ಕೆ ಪ್ರತಿ ವರ್ಷ 364 ಕೋಟಿ ರೂ.ವೆಚ್ಚವಾಗಲಿದೆ. ಈ ಹೊರೆಯನ್ನು ಬಡ ಜನರ ಮೇಲೆ ಹಾಕಲಾಗುತ್ತದೆ ಎಂದು ಅವರು ಕಿಡಿಕಾರಿದರು.

ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಮಾತನಾಡಿ, ಬೆಸ್ಕಾಂಮಿನ 1.39 ರೂ. ಬೆಲೆ ಹೆಚ್ಚಳ ಪ್ರಸ್ತಾಪವನ್ನು ಸರಕಾರ ತಿರಸ್ಕರಿಸಬೇಕು. ಅದಾನಿ ಪವರ್‍ಗೆ ನೀಡುತ್ತಿರುವ ಹೆಚ್ಚುವರಿ ವಿದ್ಯುತ್ ಖರೀದಿ ದರವನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಅಲ್ಲದೆ, ವಿದ್ಯುತ್ ಸೋರಿಕೆ ಹಾಗೂ ವಿತರಣೆಯಲ್ಲಿ ಆಗುತ್ತಿರುವ ನಷ್ಟ ತಗ್ಗಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News