ಜ.26ರ ಹಿಂಸಾಚಾರ ಮತ್ತು ರೈತರ ವಿರುದ್ಧ ಪ್ರಕರಣಗಳ ಕುರಿತು ಉನ್ನತಮಟ್ಟದ ನ್ಯಾಯಾಂಗ ವಿಚಾರಣೆಗೆ ರೈತ ಒಕ್ಕೂಟಗಳ ಆಗ್ರಹ

Update: 2021-02-13 17:10 GMT

ಹೊಸದಿಲ್ಲಿ,ಫೆ.13: ದಿಲ್ಲಿಯಲ್ಲಿ ಜ.26ರಂದು ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ನಡೆದಿದ್ದ ಹಿಂಸಾಚಾರ ಮತ್ತು ರೈತರ ವಿರುದ್ಧ ದಾಖಲಿಸಲಾಗಿರುವ ಸುಳ್ಳು ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ವಿಚಾರಣೆಯನ್ನು ನಡೆಸುವಂತೆ ಪ್ರತಿಭಟನಾನಿರತ ರೈತ ಒಕ್ಕೂಟಗಳು ಶನಿವಾರ ಆಗ್ರಹಿಸಿವೆ.

ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಕಿಸಾನ ಮೋರ್ಚಾದ ನಾಯಕರು,ನೇರವಾಗಿ ಪೊಲೀಸರ ಮುಂದೆ ಹಾಜರಾಗದಂತೆ ಮತ್ತು ಯಾವುದೇ ನೆರವಿಗಾಗಿ ರೈತ ಸಂಘಟನೆಗಳು ರಚಿಸಿರುವ ಕಾನೂನು ಘಟಕವನ್ನು ಸಂಪರ್ಕಿಸುವಂತೆ ಪೊಲೀಸ್ ನೋಟಿಸ್‌ಗಳನ್ನು ಪಡೆಯುತ್ತಿರುವ ರೈತರಿಗೆ ಸೂಚಿಸಿದರು. ಜ.26ರ ಹಿಂಸಾಚಾರದ ಹಿಂದಿನ ಸಂಚನ್ನು ಬಯಲಿಗೆಳೆಯಲು ಅಂದಿನ ಘಟನೆಗಳು ಮತ್ತು ರೈತರ ವಿರುದ್ಧದ ಸುಳ್ಳು ಪ್ರಕರಣಗಳ ಬಗ್ಗೆ ಸರ್ವೋಚ್ಚ ಅಥವಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ತನಿಖೆ ನಡೆಸಬೇಕು ಎಂದು ಮೋರ್ಚಾದ ಕಾನೂನು ಘಟಕದ ಸದಸ್ಯ ಕುಲದೀಪ ಸಿಂಗ್ ಆಗ್ರಹಿಸಿದರು.

ಟ್ರಾಕ್ಟರ್ ಪರೇಡ್‌ನಲ್ಲಿ ಪಾಲ್ಗೊಂಡಿದ್ದ 16 ರೈತರು ಈಗಲೂ ನಾಪತ್ತೆಯಾಗಿದ್ದಾರೆ ಎಂದು ಮೋರ್ಚಾದ ನಾಯಕರು ಹೇಳಿದ್ದಾರೆ.

44 ಎಫ್‌ಐಆರ್‌ಗಳ ಪೈಕಿ 14ಕ್ಕೆ ಸಂಬಂಧಿಸಿದಂತೆ 122 ರೈತರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೋರ್ಚಾ ಎಲ್ಲ ಬಂಧಿತ ರೈತರಿಗೆ ಕಾನೂನು ಮತ್ತು ಆರ್ಥಿಕ ನೆರವನ್ನು ಒದಗಿಸಲಿದೆ ಎಂದು ಇನ್ನೋರ್ವ ನಾಯಕ ರವೀಂದರ್ ಸಿಂಗ್ ತಿಳಿಸಿದರು.

 ರೈತರಿಗೆ ಕಿರುಕುಳ ನೀಡಲು ದರೋಡೆ ಮತ್ತು ಕೊಲೆ ಯತ್ನದಂತಹ ಗಂಭೀರ ಆರೋಪಗಳಡಿ ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಮೋರ್ಚಾದ ನಾಯಕರು ಹೇಳಿದರು. ಪ್ರತಿಯೊಬ್ಬ ಬಂಧಿತ ರೈತನಿಗೂ ಜೈಲಿನ ಕ್ಯಾಂಟೀನ್‌ನಲ್ಲಿ ವೆಚ್ಚಕ್ಕಾಗಿ 2,000 ರೂ.ಗಳನ್ನು ಮೋರ್ಚಾ ಒದಗಿಸಲಿದೆ ಎಂದು ರವೀಂದರ್ ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News