ಉತ್ತರಾಖಂಡ ದುರಂತ: ನಾಪತ್ತೆಯಾದ ಮಕ್ಕಳ ಸುಳಿವೇ ಇಲ್ಲ; ಸಂಬಂಧಿಕರಿಂದ ಪ್ರತಿಕೃತಿಗೆ ಅಂತ್ಯಸಂಸ್ಕಾರ

Update: 2021-02-16 04:16 GMT
ಉತ್ತರಾಖಂಡ ಹಿಮಪಾತ ದುರಂತದ ಫೈಲ್ ಫೋಟೊ

ಡೆಹ್ರಾಡೂನ್, ಫೆ.16: ಉತ್ತರಾಖಂಡದ ಭೀಕರ ಹಿಮಪಾತ ಮತ್ತು ದಿಢೀರ್ ಪ್ರವಾಹ ಸಂದರ್ಭದಲ್ಲಿ ನಾಪತ್ತೆಯಾದ ಮಕ್ಕಳು ಮರಳುವ ನಿರೀಕ್ಷೆ ಸಂಪೂರ್ಣ ಬತ್ತಿ ಹೋದರೂ ಬುಡಾರಿದೇವಿ ಎಂಬ ಮಹಿಳೆಗೆ ತಮ್ಮ ಮಕ್ಕಳಾದ ಸಂದೀಪ್ ಮತ್ತು ಜೀವನ್‌ನ ಮೃತದೇಹವನ್ನಾದರೂ ನೋಡಬೇಕು ಎಂಬ ಆಸೆ ಇತ್ತು. ದುರಂತ ಸಂಭವಿಸಿದ ಒಂದು ವಾರ ಕಳೆದರೂ ಮಕ್ಕಳ ಬಗ್ಗೆ ಯಾವ ಸುಳಿವೂ ಸಿಕ್ಕಿಲ್ಲ. ಆದ್ದರಿಂದ ಕೊನೆಗೆ ಸಂಬಂಧಿಕರು ಇಬ್ಬರು ಮಕ್ಕಳ ಪ್ರತಿಕೃತಿಯನ್ನು ರಚಿಸಿ ಹರಿಪುರ ಗ್ರಾಮದಲ್ಲಿ ಯಮುನಾ ನದಿ ತೀರದಲ್ಲಿ ಅಂತ್ಯ ಸಂಸ್ಕಾರ ನಡೆಸಿದರು.

"ವಾರದಿಂದ ನಾವು ಕಾಯುತ್ತಿದ್ದೆವು. ಆದರೆ ಇದೀಗ ಯಾವ ನಿರೀಕ್ಷೆಯೂ ಇಲ್ಲ. ಅಣೆಕಟ್ಟಿನ ಎದುರೇ ಅವರು ಕೆಲಸ ಮಾಡುತ್ತಿದ್ದರು. ಅವರು ಉಳಿದಿರುವ ಸಾಧ್ಯತೆಯೇ ಇಲ್ಲ ಎನ್ನುವುದ ನಮಗೆ ಖಾತರಿಯಾಗಿದೆ. ಅವರ ಮೃತದೇಹವಾದರೂ ಸಿಗಬೇಕು ಎಂಬ ನಿರೀಕ್ಷೆ ನಮ್ಮದಾಗಿತ್ತು. ಆದರೆ ಅದೂ ಸಾಧ್ಯವಾಗಲಿಲ್ಲ; ಸಮಯ ಮೀರಿ ಹೋಗಿದೆ" ಎಂದು ಅಣ್ಣ ಗುಡ್ಡು ಗದ್ಗದಿತರಾಗಿ ನುಡಿದರು.

ಜುನ್ಸರ್ ಸಮುದಾಯದಲ್ಲಿ ಯಾರಾದರೂ ಮೃತಪಟ್ಟು, ಅವರ ದೇಹ ಸಿಗಲಿಲ್ಲ ಎಂದಾದಲ್ಲಿ 14 ದಿನಗಳ ಒಳಗಾಗಿ ಅವರ ಪ್ರತಿಕೃತಿಯನ್ನಾದರೂ ನಿರ್ಮಿಸಿ ಅಂತ್ಯಸಂಸ್ಕಾರ ಮಾಡಬೇಕು. "ಮೃತಪಟ್ಟವರ ಉಡುಪುಗಳನ್ನು ತೊಡಿಸಿ, ಶವ ಸಂಸ್ಕಾರದ ಎಲ್ಲ ವಿಧಿವಿಧಾನಗಳನ್ನು ನೆರೆವೇರಿಸಲಾಗುತ್ತದೆ" ಎಂದು ಪಂಜಿಯಾ ಗ್ರಾಮದ ಪ್ರಧಾನ ಬಲಬೀರ್ ಚೌಹಾನ್ ವಿವರಿಸಿದರು.

ಜುನ್ಸಾರ್‌ನ ಪಂಜಿಯಾ ಪ್ರದೇಶದ ಜೀವನ್ (21) ತಿಂಗಳ ಹಿಂದೆ ತಪೋವನಕ್ಕೆ ತೆರಳಿದ್ದ. ಜಲವಿದ್ಯುತ್ ಯೋಜನೆಯಲ್ಲಿ ಕೆಲಸಕ್ಕೆ ಅವಕಾಶವಿದೆ ಎಂದು ಕೇಳಲ್ಪಟ್ಟ ಹಿನ್ನೆಲೆಯಲ್ಲಿ ತೆರಳಿದ್ದ. ವೇತನವೂ ಕಡಿಮೆಯೇನಲ್ಲ. ಆದ್ದರಿಂದ ಅಣ್ಣ ಸಂದೀಪ್ (24)ನನ್ನು ಕರೆಸಿಕೊಂಡಿದ್ದ. ಜನವರಿ 8ರಂದು ಸಂದೀಪ್ ಕೂಡಾ ತೆರಳಿದ್ದ. ಮೇ 16ರಂದು ಆತನ ವಿವಾಹ ಆಗಬೇಕಿತ್ತು.

"ಫೆಬ್ರವರಿ 6ರಂದು ದೂರವಾಣಿಯಲ್ಲಿ ಮಾತನಾಡಿದ್ದೆ. ಅವರು ಖುಷಿಯಾಗಿದ್ದರು" ಎಂದು ಗುಡ್ಡು ಹೇಳಿದರು. ಪ್ರವಾಹದ ಸುದ್ದಿ ಕೇಳಿದ ತಕ್ಷಣ ತಪೋವನಕ್ಕೆ ಗುಡ್ಡು ತೆರಳಿದ್ದರು. ಆದರೆ ಯಾವುದೂ ಅಂದುಕೊಂಡಂತೆ ಆಗಲಿಲ್ಲ. ರವಿವಾರ ವಾಪಸ್ಸಾದ ಗುಡ್ಡು ಪ್ರತಿಕೃತಿಗಳನ್ನು ನಿರ್ಮಿಸಿ ಅಂತ್ಯಸಂಸ್ಕಾರ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News