ಭಾರತ ತಲುಪಿದ ಆಫ್ರಿಕಾ, ಬ್ರೆಝಿಲ್ ರೂಪಾಂತರಿತ ವೈರಾಣು

Update: 2021-02-17 10:47 GMT

ಹೊಸದಿಲ್ಲಿ: ಬ್ರಿಟನ್ ತಳಿಗಿಂತ ಹೊರತಾಗಿ ಕೊರೋನಾ ವೈರಸ್ನ ದಕ್ಷಿಣ ಆಫ್ರಿಕಾ ಮತ್ತು ಬ್ರೆಝಿಲ್ ರೂಪಾಂತರಿತ ಪ್ರಬೇಧಗಳು ಭಾರತವನ್ನು ಪ್ರವೇಶಿಸಿವೆ.

ಸಾರ್ಸ್-ಕೋವ್-2ನ ದಕ್ಷಿಣ ಆಫ್ರಿಕಾ ತಳಿಯ ವೈರಸ್ಗಳು ನಾಲ್ಕು ಮಂದಿಯಲ್ಲಿ ಜನವರಿಯಲ್ಲಿ ಪತ್ತೆಯಾಗಿವೆ. ಅಂತೆಯೇ ಬ್ರೆಝಿಲ್ ರೂಪಾಂತರಿತ ವೈರಸ್ ಫೆಬ್ರವರಿ ಮೊದಲ ವಾರ ಒಬ್ಬ ವ್ಯಕ್ತಿಯಲ್ಲಿ ಕಂಡುಬಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ.

ಎಲ್ಲ ಐದು ಮಂದಿಯನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಅಂಗೋಲಾ, ತಾಂಜಾನಿಯಾದಿಂದ ಆಗಮಿಸಿದ ತಲಾ ಒಬ್ಬರು ಹಾಗೂ ದಕ್ಷಿಣ ಆಫ್ರಿಕಾದಿಂದ ಆಗಮಿಸಿದ ಇಬ್ಬರಲ್ಲಿ ದಕ್ಷಿಣ ಆಫ್ರಿಕಾ ಪ್ರಬೇಧ ಪತ್ತೆಯಾಗಿದೆ ಎಂದು ವಿವರ ನೀಡಿದರು.

ಬ್ರೆಝಿಲ್ ಕೊರೋನಾ ವೈರಸ್ ಪ್ರಬೇಧ ಇದುವರಗೆ 15 ದೇಶಗಳಿಗೆ ಹರಡಿದ್ದು, ಇದು ಅತ್ಯಂತ ವೇಗವಾಗಿ ಹರಡಬಲ್ಲದು. ಫೆಬ್ರವರಿ ಮೊದಲ ವಾರ ಬ್ರೆಝಿಲ್ ನಿಂದ ಆಗಮಿಸಿದ ಒಬ್ಬರಲ್ಲಿ ಬ್ರೆಝಿಲ್ ಪ್ರಬೇಧ ಪತ್ತೆಯಾಗಿದೆ. ಈ ವ್ಯಕ್ತಿಯ ಹಾಗೂ ಅವರ ಸಂಪರ್ಕವನ್ನು ಪತ್ತೆ ಮಾಡಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಈ ವೈರಸ್ ಪ್ರಬೇಧವನ್ನು ಪುಣೆಯ ಐಸಿಎಂಆರ್-ಎನ್ಐವಿಯಲ್ಲಿ ಪ್ರತ್ಯೇಕಿಸಲಾಗಿದೆ ಎಂದು ತಿಳಿಸಿದರು.

ಏತನ್ಮಧ್ಯೆ ಭಾರತದಲ್ಲಿ ಸಾರ್ಸ್-ಕೋವ್-2ನ ಬ್ರಿಟನ್ ಪ್ರಬೇಧ ಪತ್ತೆಯಾದವರ ಸಂಖ್ಯೆ 187ನ್ನು ತಲುಪಿದೆ. ಈ ದೇಶಗಳಿಂದ ಪ್ರಯಾಣಿಕರು ಭಾರತಕ್ಕೆ ಆಗಮಿಸದಂತೆ ತಡೆಯುವ ಪ್ರಯತ್ನ ನಡೆದಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News