ಪೆಟ್ರೋಲ್ ದರ ಶತಕದ ನಡುವೆಯೇ ಮೋದಿಗೆ ಅಭಿನಂದನೆ ಸಲ್ಲಿಸಿದ ಮಧ್ಯಪ್ರದೇಶದ ಸಚಿವ !

Update: 2021-02-19 04:00 GMT

ಭೋಪಾಲ್: ಮಧ್ಯಪ್ರದೇಶದಲ್ಲೂ ಪೆಟ್ರೋಲ್ ದರ ಲೀಟರ್‌ಗೆ 100 ರೂ. ದಾಟಿದ ಸಂದರ್ಭದಲ್ಲಿ ಜನ ಹಿಡಿಶಾಪ ಹಾಕುತ್ತಿದ್ದರೆ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ !

ಸೌರ ಮತ್ತು ವಿದ್ಯುತ್ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ತೈಲ ಬೆಲೆ ನಿಗದಿಯ ನಿಯಂತ್ರಣ ವ್ಯವಸ್ಥೆ ಬಲಗೊಳಿಸಿದ್ದಾರೆ ಎನ್ನುವುದು ಅವರ ವಾದ. 

"ನಾನು ಪ್ರಧಾನಿ ಮೋದಿಯವರನ್ನು ಅಭಿನಂದಿಸುತ್ತಿದ್ದೇನೆ.. ಸಾರಿಗೆಗೆ ಸೌರ ವಿದ್ಯುತ್ ಬಳಕೆಯನ್ನು ಉತ್ತೇಜಿಸುವ ಮೂಲಕ ಅವರು ಅಂತರರಾಷ್ಟ್ರೀಯ ತೈಲಬೆಲೆಯ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸುವ ಮೋದಿ ನಿರ್ಧಾರ, ತೈಲ ಬೆಲೆಯ ಮೇಲಿನ ನಮ್ಮ ನಿಯಂತ್ರಣವನ್ನು ಬಲಪಡಿಸಲಿದೆ" ಎಂದು ಹೇಳಿದರು.

ರಾಜ್ಯದಲ್ಲಿ ಗ್ರಾಹಕರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ತೆರಿಗೆ ಕಡಿತಗೊಳಿಸಲಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದರು.

"ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಪೂರೈಕೆ ತೈಲ ಬೆಲೆಯನ್ನು ನಿರ್ಧರಿಸುತ್ತದೆ. ಆದ್ದರಿಂದ ಬೇಡಿಕೆ ಕಡಿಮೆ ಮಾಡಿದಷ್ಟೂ ಬೆಲೆ ಮೇಲೆ ನಿಯಂತ್ರಣ ಸಾಧಿಸಿದಂತಾಗುತ್ತದೆ. ಈ ಕಾರಣದಿಂದ ಮೋದಿಯವರು ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ನಾವು ತೈಲ ಬೆಲೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆ ಹೆಚ್ಚಿಸುವ ನಿಟ್ಟಿನಲ್ಲಿ ಮೋದಿ ಕಳೆದ ವಾರ 10 ಸಾವಿರ ಕೋಟಿ ರೂ. ಸಬ್ಸಿಡಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News