ಕೇರಳ, ಮಹಾರಾಷ್ಟ್ರದಿಂದ ಬರುವವರು ನೆಗೆಟಿವ್ ವರದಿ ಹೊಂದಿರಬೇಕು: ಸಚಿವ ಡಾ.ಸುಧಾಕರ್

Update: 2021-02-20 12:38 GMT

ಬೆಂಗಳೂರು, ಫೆ. 20: ಕೋವಿಡ್ ಲಸಿಕೆಯನ್ನು ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಪಡೆಯಬೇಕು ಎಂದು ಕೋರಲಾಗಿದೆ. ಇದು ಎರಡನೇ ಅಲೆ ಬಾರದಂತೆ ತಡೆಗಟ್ಟಲು ನೆರವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸೂಚನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಉಚಿತವಾಗಿ ಕೋವಿಡ್ ಲಸಿಕೆ ದೊರೆಯುವಂತೆ ಮಾಡಿರುವಾಗ ಸಿಬ್ಬಂದಿ ಸೇರಿದಂತೆ ಯಾರೊಬ್ಬರೂ ಈ ಬಗ್ಗೆ ಉದಾಸೀನ ಮಾಡಬಾರದು. ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಕೋವಿಡ್ ಲಸಿಕೆ ಪಡೆಯಬೇಕು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ವೀಡಿಯೋ ಸಂವಾದ ನಡೆಸಿ ಸೂಚನೆ ನೀಡಲಿದ್ದಾರೆ ಎಂದರು.

ಲಸಿಕೆ ಪಡೆದ ಬಳಿಕ ಸೋಂಕಿನ ತೀವ್ರತೆ ಕಡಿಮೆಯಾಗುತ್ತದೆ. ಅದರಿಂದ ಸಾವು ಉಂಟಾಗುವುದಿಲ್ಲ. ಸಾರ್ವಜನಿಕರು ಇನ್ನೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮದುವೆ ಮೊದಲಾದ ಸಮಾರಂಭ, ಸಭೆಗಳು ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಿಕೊಳ್ಳಬೇಕು ಎಂದರು.

ಎರಡನೇ ಅಲೆ ಬಾರದಂತೆ ತಡೆಗಟ್ಟಬೇಕು ಎಂಬ ಉದ್ದೇಶದಿಂದ ಕಟ್ಟೆಚ್ಚರದ ಕ್ರಮ ಕೈಗೊಳ್ಳಲಾಗಿದೆ. ಬ್ರೆಜಿಲ್ ಮೊದಲಾದ ದೇಶಗಳ ವೈರಾಣು ರಾಜ್ಯದಲ್ಲಿ ಪತ್ತೆಯಾಗಿಲ್ಲ. ಕೊರೋನ ಸೋಂಕು ಈಗ ಕಡಿಮೆಯಾಗಿದೆ. ಗಂಭೀರವಾಗಿ ಸೋಂಕು ಹರಡಿಲ್ಲ. ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದರೆ ಸೋಂಕು ತೀವ್ರವಾಗುವುದಿಲ್ಲ ಎಂದು ಸುಧಾಕರ್ ಇದೇ ವೇಳೆ ಸ್ಪಷ್ಟನೆ ನೀಡಿದರು.

ನೆರೆಯ ರಾಜ್ಯಗಳಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಿರುವುದರಿಂದ ಕರ್ನಾಟಕ ರಾಜ್ಯದಲ್ಲೂ ಸೋಂಕು ಬರಬಹುದು. ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರು ಕೊರೋನ ಸೋಂಕಿನ ನೆಗೆಟಿವ್ ವರದಿ ಹೊಂದಿರಬೇಕು ಎಂದು ಸೂಚಿಸಲಾಗಿದೆ. ಆಯಾ ಜಿಲ್ಲಾಡಳಿತ, ಪೊಲೀಸ್ ಸಿಬ್ಬಂದಿ ನೆರವಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುಧಾಕರ್ ಹೇಳಿದರು.

‘ರಾಜ್ಯದಲ್ಲಿ ಕೊರೋನ ಸೋಂಕಿತರ ಪ್ರಮಾಣ ಕಡಿಮೆ ಇದೆ. ಬಹಳ ದೊಡ್ಡ ಕಠಿಣ ಕ್ರಮಗಳು ಈಗ ಬೇಕಿಲ್ಲ. ಮುಂದಿನ ದಿನಗಳಲ್ಲಿ ಎರಡನೇ ಅಲೆ ಬರುವುದನ್ನು ತಡೆಗಟ್ಟಲು ಸಫಲವಾದರೆ ಲಾಕ್‍ಡೌನ್ ಸೇರಿದಂತೆ ಇನ್ನಿತರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ'

-ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News