ದಿಶಾ ರವಿಗೂ ಜ.26ರ ಹಿಂಸಾಚಾರಕ್ಕೂ ನಂಟಿದೆ ಎನ್ನುವುದಕ್ಕೆ ಪುರಾವೆಗಳೇನು?: ಪೊಲೀಸರಿಗೆ ಕೋರ್ಟ್ ಪ್ರಶ್ನೆ

Update: 2021-02-20 18:56 GMT

ಹೊಸದಿಲ್ಲಿ,ಫೆ.20: ಬಂಧನದಲ್ಲಿರುವ ಹವಾಮಾನ ಕಾರ್ಯಕರ್ತೆ ದಿಶಾ ರವಿಗೆ ಜ.26ರ ಹಿಂಸಾಚಾರದೊಂದಿಗೆ ಸಂಬಂಧವಿದೆ ಎನ್ನುವ ಯಾವ ಸಾಕ್ಷಾಧಾರ ನಿಮ್ಮ ಬಳಿಯಿದೆ ಎಂದು ಇಲ್ಲಿಯ ನ್ಯಾಯಾಲಯವೊಂದು ಶನಿವಾರ ದಿಲ್ಲಿ ಪೊಲೀಸರನ್ನು ಪ್ರಶ್ನಿಸಿತು.

ಇದಕ್ಕೂ ಮುನ್ನ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ದಿಶಾ,ಕಳೆದ ಕೆಲವು ದಿನಗಳಲ್ಲಿ ತಾನು ಸೇರಿದಂತೆ ಮೂವರ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸಲು ದಿಲ್ಲಿ ಪೊಲೀಸರು ಉಲ್ಲೇಖಿಸಿರುವ ಟೂಲ್ ಕಿಟ್ ಕೇವಲ ಒಂದು ಸಂಪನ್ಮೂಲ ದಾಖಲೆಯಾಗಿದೆ ಎಂದು ತಿಳಿಸಿದರು. ಇದನ್ನು ವಿರೋಧಿಸಿದ ಪೊಲೀಸರು ಅದು ದೇಶವನ್ನು ಮತ್ತು ಸೇನೆಯ ಹೆಸರು ಕೆಡಿಸಲು ವಿವಿಧ ಜಾಲತಾಣಗಳಿಗೆ ಪ್ರವೇಶದ ಹೆಬ್ಬಾಗಿಲಾಗಿದೆ ಎಂದು ವಾದಿಸಿದರು.

ದಿಶಾ ಖಲಿಸ್ತಾನ ಬೆಂಬಲಿತ ಪೋಯೆಟಿಕ್ ಜಸ್ಟೀಸ್ ಫೌಂಡೇಷನ್ (ಪಿಜೆಎಫ್) ಜೊತೆ ನಿಕಟವಾಗಿ ಗುರುತಿಸಿಕೊಂಡಿರುವ ಟೂಲ್ ಕಿಟ್ ಪ್ರಕರಣದಲ್ಲಿ ಈವರೆಗೆ ಬಂಧಿಸಲ್ಪಟಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಆರೋಪಿಯು ಸಾಕ್ಷಾಧಾರಗಳನ್ನು ನಾಶಗೊಳಿಸಲು ಪ್ರಯತ್ನಿಸಿದರೆ ಜಾಮೀನನ್ನು ನಿರಾಕರಿಸಬಹುದು ಎಂದು ವಾದಿಸಿದ ಪೊಲೀಸರು,ತನಿಖೆಯಲ್ಲಿ ಸಹಕರಿಸಲು ದಿಶಾ ನಿರಂತರವಾಗಿ ನಿರಾಕರಿಸುತ್ತಿದ್ದಾರೆ. ಅವರ ಲ್ಯಾಪ್‌ಟಾಪ್ ಇತ್ಯಾದಿಗಳನ್ನು ವಿಧಿವಿಜ್ಞಾನ ತಜ್ಞರಿಗೆ ಕಳುಹಿಸಲಾಗಿದೆ. ಅವುಗಳಲ್ಲಿದ್ದ ವಿಷಯಗಳನ್ನು ಅಳಿಸಲಾಗಿದೆ ಎನ್ನುವುದನ್ನು ಪ್ರಾಥಮಿಕ ತನಿಖೆಗಳು ತೋರಿಸಿವೆ. ವಿಚಾರಣೆಯಿನ್ನೂ ಪ್ರಾಥಮಿಕ ಹಂತದಲ್ಲಿದೆ ಮತ್ತು ಸಾಕ್ಷಾಧಾರಗಳು ನಾಶವಾಗಿವೆ ಎಂದು ತಿಳಿಸಿದರು.

ಕೆಟ್ಟ ಚರಿತ್ರೆಯನ್ನು ಹೊಂದಿರುವವರನ್ನು ಭೇಟಿಯಾದ ಮಾತ್ರಕ್ಕೆ ವ್ಯಕ್ತಿಯು ತಪ್ಪು ಉದ್ದೇಶಗಳನ್ನು ಹೊಂದಿದ್ದಾನೆ ಎಂದು ಹೇಳಲು ಸಾಧ್ಯವೇ ಎಂದು ನ್ಯಾ.ಧರ್ಮೇಂದ್ರ ರಾಣಾ ಪ್ರಶ್ನಿಸಿದಾಗ,ಪೊಲೀಸರು ‘ಮೋ’ ಧಾಲಿವಾಲ್ ಬಗ್ಗೆ ಎಲ್ಲರಿಗೂ ಗೊತ್ತು. ಅಂತಹ ವ್ಯಕ್ತಿಯನ್ನು ಭೇಟಿಯಾಗಲು ನೀವೂ ಬಯಸುವುದಿಲ್ಲ ಎಂದು ಉತ್ತರಿಸಿದರು.

 ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ರಾಣಾ,ಈ ಧಾಲಿವಾಲ್ ಯಾರು ಎನ್ನುವುದು ತನಗೆ ಗೊತ್ತಿಲ್ಲ ಎಂದರು.

ಧಾಲಿವಾಲ್ ಪಿಜೆಎಫ್‌ನ ಸ್ಥಾಪಕನಾಗಿದ್ದು,ದಿಶಾ ಆತನೊಂದಿಗೆ,ವಿಶೇಷವಾಗಿ ಟೂಲ್‌ಕಿಟ್ ರಚನೆ ಸಂದರ್ಭದಲ್ಲಿ ಸಂಪರ್ಕದಲ್ಲಿದ್ದರು ಎನ್ನುವುದು ಪೊಲೀಸರ ಆರೋಪವಾಗಿದೆ.

ಜ.26ರ ಹಿಂಸಾಚಾರಕ್ಕೂ ದಿಶಾರಿಗೂ ಸಂಬಂಧವಿದೆ ಎನ್ನುವುದಕ್ಕೆ ಯಾವ ಸಾಕ್ಷಾಧಾರ ನಿಮ್ಮ ಬಳಿಯಿದೆ ಎಂಬ ನ್ಯಾಯಾಧೀಶರ ಪ್ರಶ್ನೆಗೆ,ಒಳಸಂಚಿನಲ್ಲಿ ಪ್ರತಿಯೊಬ್ಬರೂ ಒಂದೇ ಪಾತ್ರವನ್ನು ಹೊಂದಿರುವುದಿಲ್ಲ. ಟೂಲ್‌ಕಿಟ್‌ನಿಂದ ಪ್ರಭಾವಿತರಾದ ಯಾರೋ ಹಿಂಸಾಚಾರವನ್ನು ಪ್ರಚೋದಿಸಿರಬಹುದು ಮತ್ತು ಅದರಲ್ಲಿ ತೊಡಗಿಸಿಕೊಂಡಿರಬಹುದು ಎಂದು ಪೊಲೀಸರು ಉತ್ತರಿಸಿದರು.

ಈ ಉತ್ತರದಿಂದ ತೃಪ್ತಿಗೊಳ್ಳದ ನ್ಯಾಯಾಧೀಶರು,ನೇರ ಸಂಬಂಧವನ್ನು ಸಾಬೀತುಗೊಳಿಸುವ ಟೂಲ್‌ಕಿಟ್‌ನ ವಿಷಯವನ್ನು ತೋರಿಸುವಂತೆ ದಿಲ್ಲಿ ಪೊಲೀಸರ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್‌ಗೆ ಸೂಚಿಸಿದರು. ಅದರಲ್ಲಿ ಒದಗಿಸಲಾಗಿರುವ ಬಾಹ್ಯ ಕೊಂಡಿಯು ನರಮೇಧದ ಬಗ್ಗೆ ಹೇಳುತ್ತಿದೆ ಎಂದು ಪ್ರಾಸಿಕ್ಯೂಷನ್ ಉತ್ತರಿಸಿದಾಗ ನ್ಯಾ.ರಾಣಾ ಅವರು,ಯಾವುದೇ ನೇರ ಸಂಬಂಧವಿದೆಯೇ ಅಥವಾ ನಾವು ಹಾಗೆಂದು ಊಹಿಸಬೇಕೇ ಎಂದು ಪ್ರಶ್ನಿಸಿದರು.

ದಿಶಾ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಲಯವು ಏನಿದು ಟೂಲ್‌ಕಿಟ್,ಆರೋಪಿ ಜಾಮಿನು ಅರ್ಜಿ ಸಲ್ಲಿಸುವುದನ್ನು ತಡೆದ ಕಾನೂನಿನ ನಿರ್ಬಂಧ ಯಾವುದು,ಪ್ರಾಸಿಕ್ಯೂಷನ್ ನಿರೂಪಣೆ ಏನು,ದಿಶಾ ವಿರುದ್ಧ ಆರೋಪಗಳೇನು,ಅವರ ವಿರುದ್ಧ ಸಾಕ್ಷಗಳೇನು ಎಂಬ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿತು.

ನ್ಯಾಯಾಲಯವು ದಿಶಾರ ಅರ್ಜಿಯ ಮೇಲೆ ತೀರ್ಪನ್ನು ಫೆ.23ಕ್ಕೆ ಕಾಯ್ದಿರಿಸಿ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News