ಬೆಂಗಳೂರು: ‘2ಎ' ಮೀಸಲಾತಿಗೆ ಆಗ್ರಹಿಸಿ ಫೆ.21ರಂದು ‘ಪಂಚಮಸಾಲಿ ಮಹಾ ರ್‍ಯಾಲಿ'

Update: 2021-02-20 14:10 GMT

ಬೆಂಗಳೂರು, ಫೆ. 20: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ‘2ಎ' ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಇಲ್ಲಿನ ಅರಮನೆ ಮೈದಾನದಲ್ಲಿ ನಾಳೆ(ಫೆ.21) ಬೆಳಗ್ಗೆ 11ಗಂಟೆಗೆ ಬೃಹತ್ ಸಮಾವೇಶ ಏರ್ಪಡಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 10 ಲಕ್ಷ ಮಂದಿ ಆಗಮಿಸುವ ನಿರೀಕ್ಷೆ ಇದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಸಮಾವೇಶದ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮಾವೇಶಕ್ಕೆ ಆಗಮಿಸುವವರು ತಮ್ಮ ಊರುಗಳಿಂದಲೇ ರೊಟ್ಟಿ ಮತ್ತು ಬಟ್ಟೆಗಳೊಂದಿಗೆ ಆಗಮಿಸಬೇಕು. ರಾಜ್ಯ ಸರಕಾರ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡದಿದ್ದರೆ ಮಾರ್ಚ್ 4ರವರೆಗೆ ವಿಧಾನಸೌಧದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಸಮಾವೇಶಕ್ಕೆ ಆಗಮಿಸುವವರಿಗೆ ಕೂರುವ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದ ಅವರು, ಸಮಾವೇಶಕ್ಕೆ ಮನವಿ ಸ್ವೀಕರಿಸಲು ರಾಜ್ಯ ಸರಕಾರದ ಪರವಾಗಿ ಆಗಮಿಸುವ ಪ್ರತಿನಿಧಿಗಳು ಮೀಸಲಾತಿ ಘೋಷಣೆ ಆದೇಶದ ಪ್ರತಿಯೊಂದಿಗೆ ಬರಬೇಕು ಎಂದು ಸೂಚನೆ ನೀಡಿದರು.

ಆಮರಣಾಂತ ಉಪವಾಸ: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ಘೋಷಿಸದಿದ್ದರೆ ಮಾರ್ಚ್ 5ರಿಂದ ವಿಧಾನಸೌಧದ ಮುಂಭಾಗದಲ್ಲೇ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದ ಶ್ರೀಗಳು, ಜನವರಿ 14ರಿಂದ ಕೂಡಲಸಂಗಮದಿಂದ ಹೊರಟಿದ್ದ ಪಾದಯಾತ್ರೆ ನಿನ್ನೆಯೆಷ್ಟೆ ಬೆಂಗಳೂರಿಗೆ ಆಗಮಿಸಿದೆ ಎಂದರು.

ಮಹಾರ್‍ಯಾಲಿ: ಲಿಂಗಾಯತ ಪಂಚಮಸಾಲಿ ಸಮುದಾಯದ ಮೊಟ್ಟ ಮೊದಲ ಮಹಾರ್‍ಯಾಲಿ ಬೆಂಗಳೂರಿನಲ್ಲಿ ನಾಳೆ ನಡೆಯಲಿದ್ದು, ಸಮುದಾಯದ ಸಚಿವರು, ಶಾಸಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದ ಸ್ವಾಮೀಜಿ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಮಿಸಲಾತಿ ಅಗತ್ಯ ಎಂದು ಹೇಳಿದರು.

ಸಮಾವೇಶಕ್ಕಾಗಿ ಸಂಚಾರ ಮಾರ್ಪಾಡು

ಲಿಂಗಾಯತ ಪಂಚಮಸಾಲಿ ಸಮುದಾಯ ‘2ಎ' ಮೀಸಲಾತಿಗಾಗಿ ಆಗ್ರಹಿಸಿ ನಾಳೆ(ಫೆ.21) ಇಲ್ಲಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿದೆ.

ನಾಳೆ ಬೆಳಗ್ಗೆ 11 ಗಂಟೆಗೆ ಬೃಹತ್ ಸಮಾವೇಶ ಆರಂಭವಾಗಲಿದೆ. ಹೀಗಾಗಿ ನಾಳೆ ಬೆಳಗ್ಗಿನಿಂದಲೇ ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅರಮನೆ ಮೈದಾನ ಹಾಗೂ ಸುತ್ತಮುತ್ತಲಿನ ಮಾರ್ಗಗಳನ್ನ ಬಳಸುವವರು ಪರ್ಯಾಯ ಮಾರ್ಗಗಳನ್ನ ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.

ದೊಡ್ಡ ಸಂಖ್ಯೆಯಲ್ಲಿ ಜನರು ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಮೈಸೂರು ರಸ್ತೆಗಳಿಂದ ಸಮಾವೇಶ ನಡೆಯಲಿರುವ ಅರಮನೆ ಮೈದಾನಕ್ಕೆ ಆಗಮಿಸಲಿದ್ದು, ಎಲ್ಲ ವಾಹನಗಳಿಗೂ ದೂರದರ್ಶನ ಕೇಂದ್ರ ಎದುರಿನಲ್ಲಿರುವ ‘ಸರ್ಕಸ್‍ ಮೈದಾನ'ದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News