‘2ಎ' ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದಿಂದ ಬೃಹತ್ ಸಮಾವೇಶ: ವಿಧಾನಸೌಧಕ್ಕೆ ಮುತ್ತಿಗೆ ಯತ್ನ

Update: 2021-02-21 16:57 GMT

ಬೆಂಗಳೂರು, ಫೆ. 21: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ ‘2ಎ' ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಸಮುದಾಯ ಇಲ್ಲಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿತು. ‘ಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಭರವಸೆ ದೊರೆಯುವವರೆಗೆ ಹಿಂದಿರುಗುವುದಿಲ್ಲ' ಎಂದು ಪಟ್ಟು ಮುಂದುವರಿಸಿರುವ ಸಮುದಾಯದ ಸ್ವಾಮೀಜಿಗಳು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. ‘ಧರಣಿ ಸತ್ಯಾಗ್ರಹವನ್ನು ಕೈಬಿಡಿ, 2ಎ ಪ್ರವರ್ಗದಡಿ ಮೀಸಲಾತಿ ನೀಡುವ ಪ್ರಸ್ತಾವ ರಾಜ್ಯ ಸರಕಾರದ ಪರಿಶೀಲನೆಯಲ್ಲಿದೆ. ಶೀಘ್ರದಲ್ಲೆ ಈ ಕುರಿತು ಸರಕಾರ ತನ್ನ ನಿರ್ಧಾರ ಪ್ರಕಟಿಸಲಿದೆ' ಎಂದು ಸಚಿವರಾದ ಸಿ.ಸಿ. ಪಾಟೀಲ್ ಮತ್ತು ಮುರುಗೇಶ್ ಆರ್.ನಿರಾಣಿ ಮನವಿ ಮಾಡಿದರು.

ಆದರೆ, ಇದಕ್ಕೆ ಒಪ್ಪದ ಸ್ವಾಮೀಜಿ ಮತ್ತು ಸಮುದಾಯದ ಪದಾಧಿಕಾರಿಗಳು ಅರಮನೆ ಮೈದಾನದಿಂದ ಬಂದು ವಿಧಾನಸೌಧಕ್ಕೆ ಮುತ್ತಿಗೆ ಯತ್ನ ನಡೆಸಿದರು. ಆದರೆ, ಮಾರ್ಗಮಧ್ಯೆ ಕಾವೇರಿ ಜಂಕ್ಷನ್ ಬಳಿ ಪೊಲೀಸರು ಹೋರಾಟ ನಿರತರನ್ನು ತಡೆದರು. ಇದರಿಂದ ಆಕ್ರೋಶಿತರಾದ ಕೆಲ ಯುವಕರು ಬ್ಯಾರಿಕೇಟ್ ತಳ್ಳಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ಕೂಡಲೇ ಮಧ್ಯಪ್ರವೇಶಿಸಿದ ಜಯಮೃತ್ಯುಂಜಯ ಸ್ವಾಮಿ ಉದ್ರಿಕ್ತರನ್ನು ಸಮಾಧಾನಪಡಿಸಿ, ಶಾಂತಿಯುತ ಪ್ರತಿಭಟನೆ ಮೂಲಕ ಮೀಸಲಾತಿ ಪಡೆದುಕೊಳ್ಳಲು ಬಂದಿದ್ದೇವೆ. ‘ಮೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿಕ ಮಾ.4ರ ವರೆಗೆ ಬೆಳಗ್ಗೆ 9ಗಂಟೆಯಿಂದ ಸಂಜೆ 6ಗಂಟೆ ವರೆಗೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದು, ಸಿಎಂ ಬಿಎಸ್‍ವೈ ಮೀಸಲಾತಿ ಕುರಿತು ವಿಧಾನಸಭೆ ಅಧಿವೇಶನದಲ್ಲೇ ಸ್ಪಷ್ಟ ಭರವಸೆ ನೀಡುವವರೆಗೂ ಹಿಂದಿರುಗುವ ಪ್ರಶ್ನೆಯೆ ಇಲ್ಲ' ಎಂದು ಎಚ್ಚರಿಕೆ ನೀಡಿದರು.

ಮೊಳಗಿದ ರಣಕಹಳೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ 38 ದಿನಗಳ ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಸಾವಿರಾರು ಮಂದಿ ಲಿಂಗಾಯತ ಪಂಚಮಸಾಲಿಗಳು ಬೆಂಗಳೂರಿನ ಅರಮನೆ ಮೈದಾನಕ್ಕೆ ಹರಿದು ಬಂದಿದ್ದು, ಮೀಸಲಾತಿಗಾಗಿ ರಣಕಹಳೆ ಮೊಳಗಿಸಿ ಬೇಡಿಕೆ ಈಡೇರಿಕೆಗೆ ಹಕ್ಕೊತ್ತಾಯವನ್ನು ಮಂಡಿಸಿದರು.

ಲಿಂಗಾಯತ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನನಾಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವ ಈ ಬೃಹತ್ ಸಮಾವೇಶದ ವೇದಿಕೆ ಲಿಂಗಾಯತ ಪಂಚಮಸಾಲಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಮಂದಿ ಲಿಂಗಾಯತ ಪಂಚಮಸಾಲಿಗಳು 2ಎ ಮೀಸಲಾತಿಯ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು. ಬೇಡಿಕೆ ಈಡೇರುವವರೆಗೂ ಬೆಂಗಳೂರು ಬಿಟ್ಟು ಕದಲುವುದಿಲ್ಲ ಎಂದು ಸಂಕಲ್ಪ ಮಾಡಿದರು.

ಶಕ್ತಿ ಪ್ರದರ್ಶನದ ಮೂಲಕ ಮೀಸಲಾತಿ ಹೋರಾಟಕ್ಕೆ ಬಲತುಂಬಿ ಪಂಚಮಸಾಲಿ ಶ್ರೀಗಳ ಬೆನ್ನಿಗೆ ನಿಂತರು. ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗಾಗಿ ಆಗ್ರಹಿಸಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಜ.14 ರಂದು ಆರಂಭವಾಗಿದ್ದ ಪಂಚಮಸಾಲಿಗಳ ವಿಧಾನಸೌಧದ ಕಡೆಗೆ ಪಾದಯಾತ್ರೆ ಶನಿವಾರ ಬೆಂಗಳೂರಿನಲ್ಲಿ ಸಂಪನ್ನಗೊಂಡಿತ್ತು. ಪಾದಯಾತ್ರೆಯ ಅಂತಿಮ ಹಂತವಾಗಿ ರವಿವಾರ ಅರಮನೆ ಮೈದಾನದಲ್ಲಿ ನಡೆದಿರುವ ಬೃಹತ್ ಸಮಾವೇಶದಲ್ಲಿ ಪಂಚಮಸಾಲಿಗಳ ಬೃಹತ್ ಶಕ್ತಿ ಪ್ರದರ್ಶನವೂ ಅನಾವರಣಗೊಂಡಿತು.

ಸಮಾವೇಶದಲ್ಲಿ ಸಾವಿರಾರು ಜನರು ಪಾಲ್ಗೊಂಡು ತಮ್ಮ ಒಗ್ಗಟ್ಟು ತೋರಿಸಿದರು. ಈ ಸಮಾವೇಶದಲ್ಲಿ ರಾಜ್ಯದ ಹಲವು ಭಾಗಗಳಿಂದ ಬಂದಿರುವ ಲಕ್ಷಾಂತರ ಪಂಚಮಸಾಲಿ ಲಿಂಗಾಯತರು ಪಾಲ್ಗೊಂಡು ಪಂಚಮಸಾಲಿಗಳ 2ಎ ಮೀಸಲಾತಿಗೆ ಬಲ ತುಂಬಿ, ಪಂಚಮಸಾಲಿ ಸ್ವಾಮೀಜಿಗಳ ಬೆನ್ನಿಗೆ ನಿಂತರು.

ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕೇಂಬ ಒಕ್ಕೊರಲಿನ ಬೇಡಿಕೆಯನ್ನು ಕೂಡಲೇ ಈಡೇರಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು.

ಸಮಾವೇಶದಲ್ಲಿ ಸಚಿವರುಗಳಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಾಸಕರುಗಳಾದ ಬಸನಗೌಡ ಪಾಟೀಲ್ ಯತ್ನಾಳ, ಶಂಕರ ಮುನೇನಕೊಪ್ಪ, ಅರವಿಂದ ಬೆಲ್ಲದ್, ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಸಮುದಾಯದ ಹಲವು ಮುಖಂಡರುಗಳು ಪಾಲ್ಗೊಂಡಿದ್ದರು.

‘ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡಿಕೆ ಈಡೇರದಿದ್ದರೆ ಮಾ.4ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುತ್ತದೆ.’

-ಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಪೀಠ

ಮೀಸಲಾತಿಗೆ ನನ್ನ ಬೆಂಬಲವಿದೆ: ‘ಮೀಸಲಾತಿ ನೀಡಬೇಕೆನ್ನುವುದರಲ್ಲಿ ನನ್ನ ಸಂಪೂರ್ಣ ಬೆಂಬಲ ಇದೆ. ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ, ಕಡುಬಡವರಾಗಿರುವ ವೀರಶೈವ, ಲಿಂಗಾಯತ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಲೇಬೇಕು. ಇದಕ್ಕೆ ನಮ್ಮ ಅಭ್ಯಂತರ ಏನು ಇಲ್ಲ.’

-ಮುರುಗೇಶ್ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

ಕಣ್ಣೀರಿಟ್ಟ ವಿನಯ್ ಕುಲಕರ್ಣಿ ಪತ್ನಿ: ‘2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮುದಾಯ ಆಯೋಜಿಸಿದ್ದ ಸಮಾವೇಶದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಕಣ್ಣೀರಿಟ್ಟ ಘಟನೆ ನಡೆಯಿತು.’

ನೋಟಿಸ್‍ಗೆ ನಾನು ಅಂಜುವುದಿಲ್ಲ: ‘ನನಗೆ ನೋಟಿಸ್ ಕೊಟ್ಟ ತಕ್ಷಣ ನನ್ನ ಬಾಯಿ ಬಂದ್ ಆಗುವುದಿಲ್ಲ. ನೋಟಿಸ್ ಕೊಟ್ಟ ತಕ್ಷಣ ಅಂಜುವುದಿಲ್ಲ. ನೋಟಿಸ್ ಕೊಟ್ಟು ಯತ್ನಾಳ್ ನನ್ನು ಹೆದರಿಸುತ್ತೇವೆ ಎಂದರೆ, ಆದಷ್ಟು ಬೇಗ ಕುರ್ಚಿ ಖಾಲಿ ಮಾಡಬೇಕಾಗಲಿದೆ ಎಂಬುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದರು.

ನಾಳೆ ಸಚಿವರ ಸುದ್ದಿಗೋಷ್ಠಿ: ‘ಲಿಂಗಾಯತ ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಸಂಪುಟದ ಹಿರಿಯ ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ವಾರ್ತಾ ಸಚಿವ ಸಿ.ಸಿ.ಪಾಟೀಲ್, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಪಂಚಮಸಾಲಿ ಸಮುದಾಯದ ಬಿಜೆಪಿ ಶಾಸಕರು ನಾಳೆ (ಫೆ.22)ಮಧ್ಯಾಹ್ನ 1 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಸರಕಾರ ಮತ್ತು ಬಿಎಸ್‍ವೈ ಅವರು ಮೀಸಲಾತಿ ಕಲ್ಪಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News