ಹಿಟ್ಲರ್ ನ ನರಮೇಧಕ್ಕೆ ಮನುಸ್ಮೃತಿಯೇ ಪ್ರೇರಣೆ: ತೆಲುಗು ಸಾಹಿತಿ ದುರ್ಗಂ ಸುಬ್ಬರಾವ್

Update: 2021-02-21 13:57 GMT

ಬೆಂಗಳೂರು, ಫೆ.21: ಜರ್ಮನಿಯಲ್ಲಿ ಹಿಟ್ಲರ್ ನಡೆಸಿದ ನರಮೇಧಕ್ಕೆ ಮನುಸ್ಮೃತಿಯೇ ಪ್ರೇರಣೆಯಾಗಿದೆ. ಈಗ ಭಾರತದಲ್ಲಿ ಮನುಸ್ಮೃತಿ ಚಿಂತನೆಯ ಸರಕಾರವೇ ಆಡಳಿತ ನಡೆಸುತ್ತಿದೆ ಎಂದು ತೆಲುಗು ಸಾಹಿತಿ ದುರ್ಗಂ ಸುಬ್ಬರಾವ್ ಹೇಳಿದ್ದಾರೆ.

ರವಿವಾರ ದಲಿತ ಒಕ್ಕೂಟದ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ದಲಿತ ಚಳವಳಿಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜರ್ಮನಿಯ ಹಿಟ್ಲರ್ ಮನುಸ್ಮೃತಿ ಕೃತಿಯನ್ನು ಓದಿ, ತನ್ನನ್ನು ಆರ್ಯನೆಂದು ಘೋಷಿಸಿಕೊಂಡ. ಹಾಗೂ ಜಗತ್ತಿನಲ್ಲಿ ಆರ್ಯರಲ್ಲದವರನ್ನು ನಿರ್ನಾಮ ಮಾಡಲು ಪಣತೊಟ್ಟು ಲಕ್ಷಾಂತರ ಯಹೂದಿಗಳನ್ನು ಹತ್ಯೆ ಮಾಡಿದ್ದಾನೆಂದು ತಿಳಿಸಿದರು.

ಬಿಜೆಪಿ ಹಾಗೂ ಆರೆಸ್ಸೆಸ್‍ನ ನಿಜವಾದ ಕೋಮುವಾದಿ ರೂಪ ಕೋವಿಡ್‍ನ ಸಂದರ್ಭದಲ್ಲಿ ವ್ಯಕ್ತವಾಗಿದೆ. ಬಿಜೆಪಿ ಸರಕಾರ ಕೋವಿಡ್ ಸಂದರ್ಭದಲ್ಲಿ ಏಕಾಏಕಿ ಲಾಕ್‍ಡೌನ್ ಮಾಡಿತು. ಇದರಿಂದ ನಗರಗಳಲ್ಲಿ ವಾಸಿಸುತ್ತಿದ್ದ ಲಕ್ಷಾಂತರ ಜನರು ನಡೆದುಕೊಂಡು ತಮ್ಮ ತಮ್ಮ ಊರುಗಳತ್ತ ತೆರಳಿದರು. ಈ ಸಂದರ್ಭದಲ್ಲಿ ಜನತೆಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಿಲ್ಲ. ಹೀಗಾಗಿ ಜನತೆ ನಡೆದುಕೊಂಡು ಹೋಗುವಾಗ ನೂರಾರು ಮಂದಿ ಪ್ರಾಣಬಿಟ್ಟರು. ಈಗ ಡೀಸೆಲ್, ಪೆಟ್ರೋಲ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನತೆಯನ್ನು ಆತ್ಮಹತ್ಯೆ ಹಾದಿ ಹಿಡಿಯುವಂತೆ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡುವ ಮೂಲಕ ದಲಿತರನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಮುಂದಾಗಿದೆ. ವೃತ್ತಿಯಾಧಾರಿತ ಶಿಕ್ಷಣದ ಮೂಲಕ ಪುನಃ ಜಾತಿಯಾಧಾರಿತ ಕಸುಬುಗಳನ್ನು ಜಾರಿ ಮಾಡಲು ಮುಂದಾಗಿದೆ. ಬಿಜೆಪಿ ಸರಕಾರ ಜಾರಿ ಮಾಡಿರುವ ಜನವಿರೋಧಿ ನೀತಿಗಳ ವಿರುದ್ಧ ಐಕ್ಯ ಹೋರಾಟ ರೂಪಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಶಿಕ್ಷಣ ತಜ್ಞೆ ನಂದಿನಿ ಮಾತನಾಡಿ, ಕೇಂದ್ರ ಸರಕಾರ ನೂತನ ಶಿಕ್ಷಣದ ಮೂಲಕ ಗ್ರಾಮಗಳಲ್ಲಿರುವ ಸರಕಾರಿ ಶಾಲೆಗಳನ್ನು ಬಂದ್ ಮಾಡಿ, ಹೋಬಳಿಯಾಧಾರಿತವಾಗಿ ಕಾಂಪ್ಲೆಕ್ಸ್ ಮಾದರಿಯಲ್ಲಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ. ಅಲ್ಲಿ ಬಂಡವಾಳಶಾಹಿಗಳಿಗೆ ಪೂರಕವಾದ ಶಿಕ್ಷಣವನ್ನಷ್ಟೆ ಕಲಿಸಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆರೆಸ್ಸೆಸ್ ಚಿಂತನೆ ಆಧಾರಿತ ನೂತನ ಶಿಕ್ಷಣ ನೀತಿಯ, ಸಾವಿತ್ರಿ ಬಾಫುಲೆ, ಜ್ಯೋತಿ ಬಾಫುಲೆ, ಡಾ.ಬಿ.ಆರ್.ಅಂಬೇಡ್ಕರ್ ಆಶಯದ ಶಿಕ್ಷಣಕ್ಕೆ ವಿರುದ್ಧವಾಗಿದೆ. ಈ ನೀತಿಯನ್ನು ತಡೆಯದಿದ್ದರೆ ನಮ್ಮ ಮುಂದಿನ ತಲೆಮಾರು ಮೌಲ್ಯಾಧಾರಿತ, ವೈಜ್ಞಾನಿಕ, ಮಾನವೀಕ ಶಿಕ್ಷಣ ಹಾಗೂ ಚಿಂತನೆಯಿಂದ ವಂಚಿತವಾಗಲಿದ್ದಾರೆಂದು ಅವರು ತಿಳಿಸಿದ್ದಾರೆ.

ಪ್ರೊ.ಎಚ್.ಎಂ.ರದ್ರಸ್ವಾಮಿ ಮಾತನಾಡಿ, ತಿನ್ನುವ ಆಹಾರ ನಿಷೇಧಿಸುವ ಜಗತ್ತಿನ ಏಕೈಕ ಸರಕಾರ ಆರೆಸ್ಸೆಸ್ ಹಾಗೂ ಬಿಜೆಪಿ ನೇತೃತ್ವದ ಸರಕಾರವಾಗಿದೆ. ಜನಸಾಮಾನ್ಯರು ಬಳಸುವ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಹಾಕಿ ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ ಎಂದು ದೂರಿದ್ದಾರೆ.

ಕಾರ್ಯಕ್ರಮದಲ್ಲಿ ದಸಂಸ ಸಂಚಾಲಕರಾದ ಮಾವಳ್ಳಿ ಶಂಕರ್, ವಿ.ನಾಗರಾಜ್, ಎನ್.ವೆಂಕಟೇಶ್, ಲಕ್ಷ್ಮಿನಾರಾಯಣ ನಾಗವಾರ, ಪ್ರಕಾಶ್ ಹಾರೋಹಳ್ಳಿ, ಕೆ.ಎಂ.ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಿಜೆಪಿ ವಿಶ್ವಾಸಕ್ಕೆ ಅರ್ಹವಲ್ಲ: ‘ಅಂಬೇಡ್ಕರ್ ರನ್ನು ಬಾಯಲ್ಲಿ ಹೊಗುಳುತ್ತಲೇ ಅವರ ಚಿಂತನೆಯ ವಿರುದ್ಧವಾಗಿ ಕಾರ್ಯಾಚರಣೆ ನಡೆಸುವುದು. ಸಂವಿಧಾನವನ್ನು ಗುಣಗಾನ ಮಾಡುತ್ತಲೇ ಅದರ ಆಶಯಗಳ ವಿರುದ್ದ ನೀತಿಗಳನ್ನು ಜಾರಿ ಮಾಡುತ್ತಿರುವ ಬಿಜೆಪಿ ಹಾಗೂ ಆರೆಸ್ಸೆಸ್ ನಂಬಿಕೆ, ವಿಶ್ವಾಸಕ್ಕೆ ಅರ್ಹತೆಯನ್ನು ಕಳೆದುಕೊಂಡಿರುವ ಪಕ್ಷ ಹಾಗೂ ಸಂಘಟನೆಯಾಗಿದೆ'

-ಪ್ರೊ.ಎಚ್.ಎಂ.ರುದ್ರಸ್ವಾಮಿ, ದಲಿತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News