ಭಾರತದಿಂದ ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆ ರಫ್ತು: ನಿರ್ಮಲಾ ಸೀತಾರಾಮನ್

Update: 2021-02-21 15:39 GMT

ಬೆಂಗಳೂರು, ಫೆ. 21: ಆತ್ಮನಿರ್ಭರ್ ಭಾರತ್ ಯೋಜನೆಯಡಿ ಭಾರತವು ಈಗ ಎಲ್ಲ ರಂಗಗಳಲ್ಲೂ ಸ್ವಾವಲಂಬಿಯಾಗುವತ್ತ ಧಾವಿಸುತ್ತಿದೆ. ಭಾರತ ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆ ಕಳುಹಿಸಿ ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.

ರವಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರೀಸ್ ಮತ್ತು ಕಾಮರ್ಸ್‍ನ ಪ್ರತಿನಿಧಿಗಳೊಂದಿಗೆ ಆಯೋಜಿಸಲಾಗಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಏನು ಮಾಡಬಹುದು ಎಂಬುದನ್ನು ಇವತ್ತು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ ಎಂದರು.

ಭಾರತದ ಹೆಚ್ಚುತ್ತಿರುವ ಅಗತ್ಯತೆಗಳು, ಬೇಡಿಕೆಗಳನ್ನು ಕೇವಲ ಸರಕಾರದಿಂದ ಮಾತ್ರ ಈಡೇರಿಸಲು ಸಾಧ್ಯವಿಲ್ಲ. ಖಾಸಗಿ ಸಹಭಾಗಿತ್ವದ ಅಗತ್ಯವು ಇದೆ. ಇದಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ಕೋವಿಡ್ ಲಸಿಕೆ ಅಭಿವೃದ್ಧಿ ಪಡಿಸಿ, ನೂರಾರು ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯ ವೃದ್ಧಿಸಿಕೊಂಡಿದ್ದೆ ಸಾಕ್ಷಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಕೇಂದ್ರ ಸರಕಾರದ ಈ ಸಾಲಿನ ಬಜೆಟ್ ಮುಂದಿನ ಹತ್ತು ವರ್ಷಗಳಿಗೆ ಸೂಕ್ತ ಮಾರ್ಗ ರೂಪಿಸಲಿದ್ದು, ಎಲ್ಲ ವಲಯಗಳಿಗೆ ಆದ್ಯತೆ ನೀಡಲಿದೆ. ವಿತ್ತೀಯ ಕೊರತೆಯನ್ನು ಆರೋಗ್ಯಕರ ಮಟ್ಟದಲ್ಲಿ ಕಾಯ್ದುಕೊಳ್ಳುವ ಗುರಿ ಹೊಂದಿದೆ. ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುವಲ್ಲಿ ಹಿಂದೇಟು ಹಾಕಿದರೆ, ಭಾರತವು ಭವಿಷ್ಯದ ದೊಡ್ಡ ಅವಕಾಶಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಪ್ರತಿಪಾದಿಸಿದರು.

ನವೋದ್ಯಮಗಳ ಮಹತ್ವದ ಕುರಿತು ಮಾತನಾಡಿದ ಉದ್ಯಮಿ ಮೋಹನ್ ದಾಸ್ ಪೈ, ನವೋದ್ಯಮಗಳಿಂದ ದೇಶದ ಪರಿವರ್ತನೆ ಸಾಧ್ಯ. ಆದುದರಿಂದ, ನವೋದ್ಯಮಗಳಿಗೆ ಕೇಂದ್ರ ಸರಕಾರ ಹೆಚ್ಚಿನ ಒತ್ತು ನೀಡಬೇಕು. ನವೋದ್ಯಮಗಳು ನಮ್ಮ ದೇಶದಲ್ಲಿ ನೆಲೆಯೂರುವಂತೆ ಕ್ರಮ ವಹಿಸಬೇಕು ಎಂದರು.

ಕೋವಿಡ್ ಸಾಂಕ್ರಾಮಿದ ಸಂದರ್ಭದಲ್ಲಿ ಆನ್‍ಲೈನ್ ಶಿಕ್ಷಣ ಪಡೆಯಲು ಸುಮಾರು ಶೇ.60ರಷ್ಟು ವಿದ್ಯಾರ್ಥಿಗಳಿಗೆ ಸಾಧ್ಯವಾಗಿಲ್ಲ. ಡಿಜಿಟಲ್ ಶಿಕ್ಷಣದಿಂದ ವಂಚಿತರಾಗಿರುವ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ನೀಡಲು ಸರಕಾರ ಕಾರ್ಯಕ್ರಮ ರೂಪಿಸಬೇಕು ಎಂದು ಅವರು ಮನವಿ ಮಾಡಿದರು.

ಸರಕಾರಿ ಶಾಲೆಯ ವಿದ್ಯಾರ್ಥಿಗಳು ಈ ಡಿಜಿಟಲ್ ಕ್ರಾಂತಿಯಲ್ಲಿ ಪಾಲ್ಗೊಳ್ಳದಿರುವಂತೆ ಹೊರಗಿಡಲು ಸಾಧ್ಯವಿಲ್ಲ. ಮೂಲಸೌಲಭ್ಯಗಳ ಕೊರತೆಯಿಂದ ಸರಕಾರಿ ಶಾಲೆಯ ಮಕ್ಕಳು ಆನ್‍ಲೈನ್ ತರಗತಿ, ಡಿಜಿಟಲ್ ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಬಜೆಟ್‍ನಲ್ಲಿ ನಿರ್ದಿಷ್ಟವಾದ ಕಾರ್ಯಕ್ರಮವನ್ನು ರೂಪಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ವಿಪ್ರೊ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಅಝೀಮ್ ಪ್ರೇಮ್ ಜಿ, ಕೋವಿಡ್ ಸಾಂಕ್ರಾಮಿಕ ಹಾಗು ಲಸಿಕಾ ಕಾರ್ಯಕ್ರಮ ಕುರಿತು ಮಾತನಾಡಿದರು. ನಾರಾಯಣ ಹೃದಾಲಯದ ಮುಖ್ಯಸ್ಥ ಡಾ.ದೇವಿಶೆಟ್ಟಿ ಆರೊಗ್ಯ ಸೇವೆ ಉದ್ಯಮ ಕುರಿತು ವಿವರ ನೀಡಿದರು. ಭಾರತ್ ಫ್ರಿಟ್ಝ್ಸ್ ವೆರ್ನರ್ ಲಿಮಿಟೆಡ್ ನ ಸಿಇಒ ರವಿ ರಾಫವನ್ ತಯಾರಿಕಾ ವಲಯದ ಕುರಿತು ಮಾತನಾಡಿದರು. ಬಿಸಿಐಸಿ ಅಧ್ಯಕ್ಷ ಟಿ.ಆರ್.ಪರಶುರಾಮನ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News