ಸಮುದಾಯಕ್ಕೆ ಬೇಡಿಕೆ ಈಡೇರಿಸಲು ಹೋರಾಟಕ್ಕೂ ಸಿದ್ದ: ಸಚಿವ ಮುರುಗೇಶ್ ಆರ್.ನಿರಾಣಿ

Update: 2021-02-21 16:10 GMT

ಬೆಂಗಳೂರು, ಫೆ. 21: ಸಮಾಜದ ಬಹುದಿನಗಳ ಬೇಡಿಕೆಯಂತೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನ್ಯಾಯ ಒದಗಿಸಿ ಕೊಡಲಿದ್ದು, ಎಲ್ಲರೂ ಅವರ ಮೇಲೆ ವಿಶ್ವಾಸವಿಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನಾಯಕ ಯಡಿಯೂರಪ್ಪನವರು ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ ಎಂದರು.

ಈಗಾಗಲೇ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಆಯೋಗವು ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ನೀಡಲಿದೆ ಎಂದ ಅವರು, ಸಮುದಾಯದ ಒತ್ತಾಸೆಯಂತೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಹಿಂದುಳಿದ ವರ್ಗವು ಘೋಷಿಸಿದ ನಂತರ ಕಾನೂನು ತೊಡಕಾಗಬಾರದೆಂಬ ಕಾರಣಕ್ಕಾಗಿ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಸಮಾಜವನ್ನು 2ಎಗೆ ಸೇರಿಸಬೇಕೆಂಬುದು ಅವರ ಉದ್ದೇಶವಾಗಿದೆ. ಲಿಂಗಾಯಿತ ಪಂಚಮಸಾಲಿ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ ಎಂಬ ಒಂದೇ ಕಾರಣಕ್ಕೆ 2008ರಲ್ಲಿ ಬಿಎಸ್‍ವೈ ಸಾಮಾನ್ಯ ವರ್ಗದಲ್ಲಿದ್ದ ಸಮಾಜವನ್ನು 3ಬಿಗೆ ಸೇರ್ಪಡೆ ಮಾಡಿದರು.

2ಎಗೆ ಸೇರಿಸಬೇಕೆಂದು ಮೂರು ದಶಕಗಳಿಂದಲೂ ಹೋರಾಟ ನಡೆಯುತ್ತಿದೆ. ಡಾ.ಹನುಮನಾಳರಿಂದ ಆರಂಭವಾದ ಈ ಹೋರಾಟ ಇದೀಗ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ವಾಮೀಜಿ 700 ಕಿ.ಮೀ ಪಾದಯಾತ್ರೆ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿ ಉಂಟು ಮಾಡಿದ್ದಾರೆ ಎಂದು ಹೇಳಿದರು.

ಮುಂದಿನ ಪೀಳಿಗೆಯ ನಮ್ಮ ಮಕ್ಕಳಿಗೆ ಶೈಕ್ಷಣಿಕ ಮತ್ತು ಉದ್ಯೋಗಕ್ಕಾಗಿ ಅನುಕೂಲವಾಗಬೇಕೆಂಬ ಒಂದೇ ಕಾರಣಕ್ಕಾಗಿ ಈ ಹೋರಾಟ ಆರಂಭವಾಗಿದೆಯೇ ಹೊರತು ನಾವೇನು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ ಎಂದ ಅವರು, ಲಿಂಗಾಯತ ಪಂಚಮಸಾಲಿ ಸಮುದಾಯವು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ ಸೇರಿದಂತೆ ಅನೇಕರು ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು.

2ಎಗೆ ಸೇರ್ಪಡೆ ಮಾಡಬೇಕೆಂದು ನಡೆಸುತ್ತಿರುವ ಹೋರಾಟ ಕಾನೂನು ಬದ್ದವಾಗಿದೆ. ಶ್ರೀಗಳು ನಡೆಸುತ್ತಿರುವ ಹೋರಾಟಕ್ಕೆ ಸಚಿವರು, ಶಾಸಕರು ಸೇರಿ ಸಮುದಾಯ ಅವರ ಬೆಂಬಲಕ್ಕೆ ನಿಂತಿದೆ. ಬೇಡಿಕೆ ಈಡೇರಿಸಲು ತಾವು ಎಲ್ಲ ರೀತಿಯ ಹೋರಾಟ ಮಾಡುತ್ತೇವೆ ಎಂದು ಅವರು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News