ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ-2022 ಕ್ರೀಡಾಕೂಟ: ಸಿಎಂ ಯಡಿಯೂರಪ್ಪ ಘೋಷಣೆ

Update: 2021-02-21 16:18 GMT

ಬೆಂಗಳೂರು, ಫೆ.21: ಖೇಲೋ ಇಂಡಿಯಾ ಯುನಿವರ್ಸಿಟಿ-2022 ಕ್ರೀಡಾಕೂಟ ಬೆಂಗಳೂರಿನ ಜೈನ್ ವಿವಿಯಲ್ಲಿ ನಡೆಯಲಿದ್ದು, 17 ಕ್ರೀಡೆಗಳಲ್ಲಿ 6 ಸಾವಿರ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. 

ರವಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖೇಲೋ ಇಂಡಿಯಾ ಯೂನಿವರ್ಸಿಟಿ-2022ರ ಕುರಿತು ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಎಸ್‍ವೈ ಅವರು, ಕೇಂದ್ರ ಸರಕಾರದಿಂದ ಖೇಲೋ 2ನೆ ಆವೃತ್ತಿ ಘೋಷಣೆ ಆಗಿದೆ. ರಾಜ್ಯ ಸರಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಈ ಬಗ್ಗೆ ಚರ್ಚಿಸಲು ಕ್ರೀಡಾ ಸಚಿವ ಕಿರಣ್ ರಿಜಿಜು ಬೆಂಗಳೂರಿಗೆ ಬಂದಿದ್ದರು. ಅವರನ್ನು ಬಹಳ ಸಂತೋಷದಿಂದ ಸ್ವಾಗತಿಸುತ್ತೇನೆ. ಜೈನ್ ವಿವಿಯಲ್ಲಿ ಖೇಲೋ ಇಂಡಿಯಾದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳ ಊಟೋಪಚಾರ, ಆತಿಥ್ಯ, ಇತರೆ ಸೌಕರ್ಯಗಳ ಹೊಣೆ ರಾಜ್ಯ ಸರಕಾರ ಮತ್ತು ವಿವಿಗಳು ನೋಡಿಕೊಳ್ಳಲಿವೆ ಎಂದರು. 

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮಾತನಾಡಿ, ಕರ್ನಾಟಕ ಕ್ರೀಡೆಯಲ್ಲಿ ಸಮರ್ಥವಾಗಿ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ಕ್ರೀಡೆಗೆ ಇರುವ ವ್ಯವಸ್ಥೆ ಉಳಿದ ಜಿಲ್ಲೆಗಳಲ್ಲೂ ಆಗಬೇಕಿದೆ. ಕ್ರೀಡೆಯಲ್ಲಿ ಭಾರತ ಸೂಪರ್ ಪವರ್ ಆಗಬೇಕು ಎನ್ನುವುದು ನನ್ನ ಆಸೆಯಾಗಿದೆ. ಅಲ್ಲದೆ, ಮಲಕಂ, ಕಳರಿಯಪಟ್ಟು, ಯೋಗಾಸನ ಕೂಡ ನಾವು ಕ್ರೀಡೆ ಅಡಿಯಲ್ಲಿ ತಂದಿದ್ದೇವೆ ಎಂದರು.

ನಾನು ಈಗಾಗಲೇ ಹೇಳಿದಂತೆ ಕ್ರೀಡಾಕೂಟ ಆಲ್ ಇಂಡಿಯಾ ವಿವಿ, ಬೆಂಗಳೂರು ಜೈನ್ ವಿವಿಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಕನಕಪುರ ರಸ್ತೆಯಲ್ಲಿರುವ ವಿವಿಧ ರಾಜ್ಯಗಳ 25 ವರ್ಷಗಳ ಒಳಗಿನ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಫೀಲ್ಡ್ ಮಾರ್ಷಲ್, ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News