ಉತ್ತರಾಖಂಡ ದುರಂತ: ಇನ್ನೂ ಎರಡು ಶವಗಳು ಪತ್ತೆ

Update: 2021-02-21 16:45 GMT

 ಚಮೋಲಿ,ಫೆ.21: ತಪೋವನ-ವಿಷ್ಣುಗಡ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಇನ್ನೂ ಎರಡು ಶವಗಳು ಪತ್ತೆಯಾಗುವುದರೊಂದಿಗೆ ಫೆ.7ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿದು ಉಂಟಾಗಿದ್ದ ಭಾರೀ ಹಿಮಪ್ರವಾಹದಿಂದಾಗಿ ಸತ್ತವರ ಸಂಖ್ಯೆ ರವಿವಾರ 67ಕ್ಕೇರಿದೆ. 137 ಜನರು ಈಗಲೂ ನಾಪತ್ತೆಯಾಗಿದ್ದಾರೆ. ಧೌಲಿ ಗಂಗಾ ಮತ್ತು ಅಲಕನಂದಾ ನದಿಗಳಲ್ಲಿ ಭಾರೀ ಮಹಾಪೂರದಿಂದಾಗಿ ಎರಡು ವಿದ್ಯುತ್ ಉತ್ಪಾದನಾ ಸ್ಥಾವರಗಳು ಮತ್ತು ಐದು ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದವು.

 ಶನಿವಾರ ತಪೋವನ ಯೋಜನೆಯ ಅಣೆಕಟ್ಟಿನ ಬಳಿ ಮೂರು ಶವಗಳು ಪತ್ತೆಯಾಗಿದ್ದವು. ಕಳೆದ 15 ದಿನಗಳಿಂದ ಕಾರ್ಯಾಚರಣೆಗಳನ್ನು ನಡೆಸುತ್ತಿರುವ ರಕ್ಷಣಾ ತಂಡಗಳು ವಿವಿಧ ಸ್ಥಳಗಳಿಂದ ಮಾನವ ಶರೀರಗಳ 28 ಭಾಗಗಳನ್ನೂ ಪತ್ತೆ ಹಚ್ಚಿವೆ. 37 ಶವಗಳನ್ನು ಪೊಲೀಸರು ಈವರೆಗೆ ಗುರುತಿಸಿದ್ದಾರೆ. ಶವಗಳ ಗುರುತು ಪತ್ತೆ ಮಾಡಲು ಮೃತರ ಬಂಧುಗಳ ಡಿಎನ್ಎ ಸ್ಯಾಂಪಲ್ಗಳನ್ನು ತಾಳೆಗಾಗಿ ಡೆಹ್ರಾಡೂನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
 ತನ್ಮಧ್ಯೆ ದಿಢೀರ್ ಮಹಾಪೂರದ ಬಳಿಕ ಹೃಷಿಗಂಗಾ ಜಲಾನಯನ ಪ್ರದೇಶದಲ್ಲಿಯ ರೈನಿ ಗ್ರಾಮದ ಮೇಲ್ಭಾಗದಲ್ಲಿ ಹೊಸದಾಗಿ ಸೃಷ್ಟಿಯಾಗಿರುವ ನೀರ್ಗಲ್ಲು ಸರೋವರದ ಆಳವನ್ನು ಅಳೆಯಲು ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಿವೆ. ಅಣೆಕಟ್ಟಿನ ಗೋಡೆಗಳ ಮೇಲೆ ಕೆಸರಿನ ಒತ್ತಡವನ್ನು ಲೆಕ್ಕ ಹಾಕಲು ವಿಜ್ಞಾನಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ತಪೋವನ ಸುರಂಗದಲ್ಲಿ ಸೇರಿಕೊಂಡಿರುವ ಕೆಸರನ್ನು ತೆಗೆಯಲು ರಕ್ಷಣಾ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಇನ್ನಷ್ಟು ಎಕ್ಸ್ಕವೇಟರ್ಗಳನ್ನು ನಿಯೋಜಿಸುವಂತೆ ಮತ್ತು ಸುರಂಗದೊಳಗೆ ನೀರಿನ ಹರಿವನ್ನು ತಡೆಯಲು ಧೌಲಿ ಗಂಗಾ ನದಿಯ ದಿಕ್ಕನ್ನು ತಿರುಗಿಸುವಂತೆ ಚಮೋಲಿ ಜಿಲ್ಲಾಧಿಕಾರಿ ಸ್ವಾತಿ ಎಸ್.ಭದೌರಿಯಾ ಅವರು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮಕ್ಕೆ ನಿರ್ದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News