ಈ ದೇಶಕ್ಕಾಗಿ ಮೂರು ಯುದ್ಧಗಳಲ್ಲಿ ಹೋರಾಡಿದ್ದೇನೆ, ಆದರೆ ನನ್ನನ್ನು ಭಯೋತ್ಪಾದಕ ಎನ್ನುತ್ತಿದ್ದಾರೆ: ಗುರುಮುಖ್ ಸಿಂಗ್

Update: 2021-02-22 12:36 GMT
photo: newslaundry.com

ಹೊಸದಿಲ್ಲಿ,ಫೆ.22: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮಾಜಿ ಯೋಧ ಗುರುಮುಖ್ ಸಿಂಗ್ (80) ಅವರು 15 ದಿನಗಳ ಜೈಲುವಾಸದ ಬಳಿ ಕೊನೆಗೂ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಆದರೆ ಬಂಧನದಿಂದ ತನಗಾದ ಅವಮಾನವನ್ನು ಅರಗಿಸಿಕೊಳ್ಳಲು ಅವರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ.

ಪಂಜಾಬಿನ ಫತೇಗಡ ಸಾಹಿಬ್ ಗ್ರಾಮದ ನಿವಾಸಿ ಸಿಂಗ್ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು. ತರಬೇತಿಯ ಬಳಿಕ 1962,ನವಂಬರ್ ನಲ್ಲಿ ಉಭಯ ದೇಶಗಳು ಕದನ ವಿರಾಮವನ್ನು ಘೋಷಿಸುವವರೆಗೆ ಸಿಕ್ಕಿಮ್ ನ ನಾಥು ಲಾ ಪಾಸ್ ನಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು. 1965ರ ಭಾರತ-ಪಾಕಿಸ್ತಾನ ಯುದ್ಧ ಮತ್ತು ಆರು ವರ್ಷಗಳ ಬಳಿಕ ಬಾಂಗ್ಲಾದೇಶ ವಿಮೋಚನಾ ಸಮರದಲ್ಲಿಯೂ ಅವರು ಹೋರಾಡಿದ್ದರು. 22 ವರ್ಷಗಳ ಸುದೀರ್ಘ ಸೇವೆಯ ಬಳಿಕ 1984ರಲ್ಲಿ ಅವರು ಸೇನೆಯಿಂದ ನಿವೃತ್ತಗೊಂಡಿದ್ದರು. ಉತ್ತಮ ಕುಸ್ತಿ ಮತ್ತು ಬಾಕ್ಸಿಂಗ್ ಪಟುವಾಗಿದ್ದ ಸಿಂಗ್ ಒಳ್ಳೆಯ ಕಬಡ್ಡಿ ಆಟಗಾರರೂ ಆಗಿದ್ದರು.

‘ಸೇನೆಯು ನನಗೆ ತುಂಬ ಪ್ರೀತಿ ಮತ್ತು ಗೌರವವನ್ನು ನೀಡಿತ್ತು. ಈ ದೇಶಕ್ಕಾಗಿ ಮೂರು ಯುದ್ಧಗಳಲ್ಲಿ ನಾನು ಹೋರಾಡಿದ್ದೇನೆ. 10 ಪದಕಗಳಿಗೂ ಭಾಜನನಾಗಿದ್ದೇನೆ. ಈಗ ಅವರು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಈ ಅವಮಾನವನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ ’ಎಂದು ಸಿಂಗ್ ತನ್ನನ್ನು ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.

ಜ.25ರಂದು ಸಿಂಗ್ ಗಣತಂತ್ರ ದಿನದಂದು ಆಯೋಜಿಸಲಾಗಿದ್ದ ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲೆಂದು ತನ್ನ ಗ್ರಾಮದ 25 ರೈತರೊಂದಿಗೆ ದಿಲ್ಲಿ ಗಡಿಯನ್ನು ತಲುಪಿದ್ದರು. ಆದರೆ ಪ್ರಯಾಣದಿಂದ ಸುಸ್ತಾಗಿದ್ದ ಅವರು ಬುರಾರಿಯ ನಿರಂಕಾರಿ ಮೈದಾನದಲ್ಲಿಯ ಟೆಂಟ್ನಲ್ಲಿ ಉಳಿದುಕೊಂಡಿದ್ದರು. ಟ್ರಾಕ್ಟರ್ ರ್ಯಾಲಿಗಾಗಲೀ ಕೆಂಪು ಕೋಟೆಗಾಗಲೀ ಅವರು ಹೋಗಿರಲಿಲ್ಲ. ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಫೆ.1ರ ವೇಳೆಗೆ 122 ರೈತರನ್ನು ಪೊಲೀಸರು ಬಂಧಿಸಿದ್ದರು ಮತ್ತು ಸಿಂಗ್ ಅವರಲ್ಲಿ ಸೇರಿದ್ದರು.

ಟ್ರಾಕ್ಟರ್ ರ್ಯಾಲಿಯ ಮೂರು ದಿನಗಳ ಬಳಿಕ ನಿರಂಕಾರಿ ಮೈದಾನದಲ್ಲಿ ನಿಯೋಜಿತರಾಗಿದ್ದ ಪೊಲೀಸರು ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ರೈತರಿಗೆ ಬೆದರಿಕೆಯೊಡ್ಡಿದ್ದರು. ಜ.28ರಂದು ಸಮುದಾಯ ಪಾಕಶಾಲೆಯಲ್ಲಿ ಅಡಿಗೆ ಕೆಲಸಕ್ಕೆ ನೆರವಾದ ಬಳಿಕ ಸಿಂಗ್ ತನ್ನ ಟೆಂಟ್ಗೆ ಮರಳಿದ್ದರು. ರಾತ್ರಿ 11ರ ಸುಮಾರಿಗೆ ರೈತರು ಮಲಗಲು ಸಜ್ಜಾಗುತ್ತಿದ್ದಾಗ ಏಕಾಏಕಿ ವಿದ್ಯುತ್ ನಿಲುಗಡೆಗೊಂಡಿತ್ತು. ಸಿಂಗ್ ಟೆಂಟ್ನಿಂದ ಹೊರಬಂದಾಗ ಅವರ ಮೇಲೆ ಮುಗಿಬಿದ್ದ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ ಎಳೆದೊಯ್ದು ಪೊಲೀಸ್ ವ್ಯಾನ್ನಲ್ಲಿ ತಳ್ಳಿದ್ದರು. ಅವರೊಂದಿಗೆ ಇನ್ನೂ ಕೆಲವು ರೈತರನ್ನು ಬಂಧಿಸಲಾಗಿತ್ತು.

ಪೊಲೀಸರು ಸಿಂಗ್ ವಿರುದ್ಧ ದಾಖಲಿಸಿರುವ ಎಫ್ಐಆರ್ನಲ್ಲಿ ಅವರು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಸಿಂಗ್ ಇದನ್ನು ನಿರಾಕರಿಸಿದ್ದಾರೆ.
 
ಜಾಮೀನು ಕೋರಿ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ತನಿಖೆಯು ಇನ್ನೂ ಪ್ರಗತಿಯಲ್ಲಿದೆ ಎಂಬ ಕಾರಣವನ್ನು ನೀಡಿ ಫೆ.9ರಂದು ನ್ಯಾಯಾಲಯವು ತಿರಸ್ಕರಿಸಿತ್ತು. ಆದಾಗ್ಯೂ ಮೂರು ದಿನಗಳ ಬಳಿಕ ಅವರ ವಯಸ್ಸು ಮತ್ತು ಅವರ ವಿರುದ್ಧ ಹಿಂದೆ ಯಾವುದೇ ಪ್ರಕರಣಗಳು ಇಲ್ಲದಿರುವುದನ್ನು ಪರಿಗಣಿಸಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.

ಸಿಂಗ್ ಈಗ ಸ್ವಗ್ರಾಮಕ್ಕೆ ಮರಳಿದ್ದಾರೆ. ‘ಪೊಲೀಸರು ನನಗೆ ಭಯೋತ್ಪಾದಕನ ಹಣೆಪಟ್ಟಿಯನ್ನು ಕಟ್ಟಿದ್ದರು. ಸೇನೆಯಲ್ಲಿ ನಾನು 22 ವರ್ಷಗಳ ಸೇವೆ ಸಲ್ಲಿಸಿದ್ದೇನೆ. ಸಾಯುವ ಮೊದಲು ಇದನ್ನು ನಾನು ಕೇಳಬೇಕಿತ್ತೇ ’ ಎಂದು ಸಿಂಗ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸುವವರು ಯಾರು?‌

ಕೃಪೆ: Newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News