ಸರಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಿ

Update: 2021-02-23 05:16 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪ್ರಧಾನಿ ನರೇಂದ್ರ ಮೋದಿಯವರು ತಾವು ಅಧಿಕಾರದಲ್ಲಿರುವಾಗಲೇ ದೇಶದ ಸಾರ್ವಜನಿಕವಾದುದನ್ನೆಲ್ಲ ಖಾಸಗಿ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದು ಕೊಡುವ ತೀರ್ಮಾನಕ್ಕೆ ಬಂದಂತೆ ಕಾಣುತ್ತದೆ. ‘‘ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಖಾಸಗಿ ಕ್ಷೇತ್ರಕ್ಕೆ ಹೆಚ್ಚು ಅವಕಾಶ ನೀಡಲಾಗುವುದು’’ ಎಂದು ಅವರು ಹೇಳಿದ್ದಾರೆ. ಆದರೂ ಎಲ್ಲ ಸಮಸ್ಯೆಗಳಿಗೆ ಖಾಸಗೀಕರಣವೊಂದೇ ಪರಿಹಾರವಲ್ಲ ಎಂಬುದು ಕೊರೋನ ಅಪ್ಪಳಿಸಿದಾಗ ಎಲ್ಲರಿಗೂ ಅರಿವಾಗಿದೆ. ಆಗ ಸರಕಾರಿ ಆಸ್ಪತ್ರೆಗಳೇ ಸೀಮಿತ ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಕಾರ್ಯನಿರ್ವಹಿಸಿದವು. ಆರೋಗ್ಯ, ಶಿಕ್ಷಣದಂತಹ ಕ್ಷೇತ್ರಗಳನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವುದು ವಿನಾಶಕಾರಿ. ಅಂತಲೇ ಕೋವಿಡ್ ನಂತರದ ಆರ್ಥಿಕ ಬಿಕ್ಕಟ್ಟಿನ ಹೊಡೆತಕ್ಕೆ ಸಿಕ್ಕಿರುವ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಅತ್ಯುತ್ಸಾಹ ತೋರಿಸುತ್ತಿದ್ದಾರೆ. ಕರ್ನಾಟಕದಲ್ಲಿ 2020-21ನೇ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲೆಗಳ ದಾಖಲಾತಿ ಪ್ರಮಾಣ ನಿರೀಕ್ಷೆ ಮೀರಿ ಹೆಚ್ಚಾಗಿದೆ. ರಾಜ್ಯದ 43,282 ಸರಕಾರಿ ಪ್ರಾಥಮಿಕ ಶಾಲೆಗಳ ಒಂದನೇ ತರಗತಿಗೆ ಈ ವರ್ಷ ಮಕ್ಕಳ ಸೇರ್ಪಡೆ ಪ್ರಮಾಣ ಕಳೆದ ವರ್ಷಕ್ಕಿಂತ 27,000ದಷ್ಟು ಹೆಚ್ಚಾಗಿದೆ. ಎಂಟನೇ ತರಗತಿಗೂ ಮೂವತ್ತು ಸಾವಿರ ಮಕ್ಕಳು ಹೆಚ್ಚುವರಿಯಾಗಿ ಸೇರಿದ್ದಾರೆ. 1ರಿಂದ 10ನೇ ತರಗತಿಯವರೆಗೆ ಲಕ್ಷಾಂತರ ಮಕ್ಕಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ.ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

 ನವ ಉದಾರೀಕರಣ ನೀತಿಯ ಹೊಡೆತಕ್ಕೆ ಸಿಕ್ಕಿ ತತ್ತರಿಸಿ ಮುಚ್ಚುವ ಆತಂಕವನ್ನು ಎದುರಿಸುತ್ತಿದ್ದ ಸರಕಾರಿ ಶಾಲೆಗಳು ಕೊರೋನ ನಂತರದ ಕಾಲ ಘಟ್ಟದಲ್ಲಿ ಪೋಷಕರ ಆಸಕ್ತಿಯಿಂದಾಗಿ ಪುನಶ್ಚೇತನ ಪಡೆಯುತ್ತಿವೆ. ಕೊರೋನ ಕಾಲದಲ್ಲಿ ಕೈಯಲ್ಲಿರುವ ಕೆಲಸ ಕಳೆದುಕೊಂಡ ಸಾವಿರಾರು ಪೋಷಕರು ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಕಟ್ಟಲು ಪರದಾಡಿ ಅನಿವಾರ್ಯವಾಗಿ ಸರಕಾರಿ ಶಾಲೆಗಳ ಮೊರೆ ಹೋಗಿದ್ದಾರೆ. ಸರಕಾರದ ವಿದ್ಯಾಗಮ ಯೋಜನೆ ಪೋಷಕರಲ್ಲಿ ಹೊಸ ಭರವಸೆ ಮೂಡಿಸಿದೆ. ಪೋಷಕರ ಈ ಅತ್ಯುತ್ಸಾಹಕ್ಕೆ ಸರಕಾರ ಸ್ಪಂದಿಸಬೇಕಾಗಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ನಿರ್ಲಕ್ಷಕ್ಕೆ ಒಳಗಾಗಿರುವ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಅವುಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ.ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತದೆ. ಹೀಗಾಗಿ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ಇನ್ನು ಹಲವು ಕಡೆ ಸ್ಥಳಾವಕಾಶದ ಕೊರತೆಯಿಂದಾಗಿ ಒಂದೇ ಕೊಠಡಿಯಲ್ಲಿ ಏಕಕಾಲದಲ್ಲಿ 3-4 ತರಗತಿಗಳನ್ನು ನಡೆಸಬೇಕಾಗಿದೆ. ಬಹುತೇಕ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಸರಕಾರ ಇವುಗಳನ್ನು ಸರಿಪಡಿಸಬೇಕು. ಈ ವರ್ಷದ ಮುಂಗಡ ಪತ್ರದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಹಣ ಒದಗಿಸುವುದು ಅಗತ್ಯವಾಗಿದೆ.

ನಮ್ಮ ಸಮಾಜದ ಎಲ್ಲರೂ ಸ್ಥಿತಿವಂತರಲ್ಲ. ನಿತ್ಯ ಕಾಯಕ ಮಾಡಿ ದುಡಿದುಂಡು ಜೀವಿಸುವ ಶ್ರಮಜೀವಿಗಳು. ಕೆಳ ಮಧ್ಯಮವರ್ಗದ ಜನರು, ಎಲ್ಲ ಸೌಲಭ್ಯಗಳಿಂದ ವಂಚಿತರಾದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಂತಹವರ ಮಕ್ಕಳಿಗೆ ಸರಕಾರಿ ಶಾಲೆಗಳನ್ನು ಬಿಟ್ಟರೆ ಬೇರೆ ಗತಿ ಇಲ್ಲ. ಅನೇಕ ಹಳ್ಳಿಗಳಲ್ಲಿ ಸರಕಾರಿ ಶಾಲೆಗಳೇ ಇಲ್ಲ.ಅಂತಹ ಹಳ್ಳಿಗಳ ಮಕ್ಕಳು ಸಮೀಪದ ಶಾಲೆಗಳಿಗೆ ನಡೆದುಕೊಂಡು ಹೋಗುತ್ತಾರೆ. ಅಂತಹ ಊರುಗಳಲ್ಲಿ ಸರಕಾರಿ ಶಾಲೆಗಳನ್ನು ಆರಂಭಿಸಬೇಕಾಗಿದೆ. ಕೊರೋನ ನಂತರ ಪೋಷಕರೇ ಸರಕಾರಿ ಶಾಲೆಗಳ ಬಗ್ಗೆ ಆಸಕ್ತಿ ತೋರಿಸಿರುವುದರಿಂದ ಸರಕಾರ ಇದಕ್ಕೆ ಸ್ಪಂದಿಸಿ ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ವಿಶೇಷ ಆದ್ಯತೆ ನೀಡಬೇಕಾಗಿದೆ. ‘ಸರಕಾರಿ ಶಾಲೆಗಳೆಡೆ ನಡೆ’ ಎಂಬ ಅಭಿಯಾನವನ್ನು ಇನ್ನಷ್ಟು ವಿಸ್ತರಿಸಿ ಮನೆ ಮನಗಳ ಬಾಗಿಲು ತಟ್ಟಬೇಕಾಗಿದೆ. ಇನ್ನೊಂದು ಮುಖ್ಯ ಅಂಶವೆಂದರೆ ಸರಕಾರಿ ಶಾಲೆಗಳ ಶಿಕ್ಷಕರನ್ನು ಇತರ ಕೆಲಸಗಳಿಂದ ಮುಕ್ತಗೊಳಿಸಿ ಬೋಧನೆಗೆ ಮಾತ್ರ ಸೀಮಿತಗೊಳಿಸುವುದು ತುರ್ತು ಅಗತ್ಯವಾಗಿದೆ.

 ಎಲ್ಲದಕ್ಕೂ ಖಾಸಗೀಕರಣ ಮದ್ದಲ್ಲ. ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಸರಕಾರದ ಪಾತ್ರ ಪ್ರಮುಖವಾಗಿದೆ. ಕೊರೋನ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡಾ ಹೊಣೆಗೇಡಿತನದಿಂದ ನಡೆದುಕೊಂಡವು. ನೊಂದವರ ನೋವಿಗೆ ಸ್ಪಂದಿಸಲಿಲ್ಲ. ತಮ್ಮ ಲಾಭ, ನಷ್ಟದ ಲೆಕ್ಕಾಚಾರದಲ್ಲಿ ಮುಳುಗಿದವು. ಆದರೆ ಸರಕಾರಿ ಶಾಲೆಗಳು ಮಾತ್ರ ಮಕ್ಕಳ ಹಿತರಕ್ಷಣೆಯ ಬಗ್ಗೆ ಚಿಂತಿಸಿದವು. ಲಾಕ್‌ಡೌನ್ ಪರಿಣಾಮವಾಗಿ ಉದ್ಯೋಗ ವಂಚಿತರಾದ ಪೋಷಕರ ಪಾಲಿಗೆ ಸರಕಾರಿ ಶಾಲೆಗಳು ಆಶಾಕಿರಣವಾಗಿವೆ. ಆದ್ದರಿಂದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರ ಮುಂದಾಗಬೇಕಾಗಿದೆ.

ಇದಷ್ಟೇ ಅಲ್ಲದೆ ಕೊರೋನ ಪರಿಣಾಮವಾಗಿ ಶಾಲೆಗಳು ಮುಚ್ಚಬೇಕಾದುದರಿಂದಾಗಿ ಪ್ರಾಥಮಿಕ ಶಾಲಾ ಮಕ್ಕಳ ವ್ಯಾಸಂಗದ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಅನೇಕ ಮಕ್ಕಳ ಕಲಿಕಾ ಸಾಮರ್ಥ್ಯ ಕುಂಠಿತಗೊಂಡಿದೆ ಎಂದು ಅಝೀಮ್ ಪ್ರೇಮ್‌ಜಿ ವಿಶ್ವವಿದ್ಯಾನಿಲಯ ಮಾಡಿರುವ ಸಮೀಕ್ಷೆಯಿಂದಾಗಿ ತಿಳಿದು ಬಂದಿದೆ. ಈ ಕಲಿಕಾ ಹಾನಿಯನ್ನು ಸರಿದೂಗಿಸುವುದು ಈಗ ಒಂದು ಸವಾಲಾಗಿದೆ. ಐದು ರಾಜ್ಯಗಳ 44 ಜಿಲ್ಲೆಗಳಲ್ಲಿ ಇತ್ತೀಚೆಗೆ ಮಾಡಿರುವ ಸಮೀಕ್ಷೆಯಿಂದಾಗಿ ಈ ಅಂಶ ಬೆಳಕಿಗೆ ಬಂದಿದೆ.

ಕೋವಿಡ್-19ರ ಪರಿಣಾಮವಾಗಿ ಉಂಟಾದ ಈ ಪರಿಸ್ಥಿತಿಯಲ್ಲಿ ಕಲಿಕೆಯಲ್ಲಿ ಹಿಂದೆ ಉಳಿದ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶಾಲೆ, ಕಾಲೇಜುಗಳ ಹೊಣೆ ಹೊತ್ತವರು ಅಂದರೆ ಆಡಳಿತ ವರ್ಗದವರು ಮತ್ತು ಪೋಷಕರು ವಿದ್ಯಾರ್ಥಿಗಳ ನೆರವಿಗೆ ಬರಬೇಕು.

ಇನ್ನೇನು ಎಲ್ಲ ಸರಿಹೋಯಿತು ಎನ್ನುವಾಗಲೇ ಕೊರೋನ ಎರಡನೇ ಅಲೆ ಬರುತ್ತದೆ ಎಂಬ ಭೀತಿ ಉಂಟಾಗಿದೆ. ಈಮಧ್ಯೆ ಶಾಲೆಗಳು ಕೂಡ ಆರಂಭವಾಗಿವೆ. 6ರಿಂದ 8ನೇ ತರಗತಿಗಳು ಸೋಮವಾರದಿಂದ ಶುರುವಾಗಿವೆ. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಶಾಲೆಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಿ.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಸರಕಾರಿ ಶಾಲೆಗಳನ್ನು ಮುಚ್ಚಲು ಸರಕಾರ ಅವಕಾಶ ನೀಡಬಾರದು. ನಮ್ಮ ದೇಶದ ಜನಸಾಮಾನ್ಯರು ಸಂಕಷ್ಟದಲ್ಲಿರುವಾಗ ಸರಕಾರಿ ಶಾಲೆ ಮತ್ತು ಆಸ್ಪತ್ರೆಗಳೇ ನೆರವಿಗೆ ಬರುವ ಸಂಜೀವಿನಿಯಾಗಿವೆ ಎಂಬುದನ್ನು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News