ಭಾರತದ ಆರೋಗ್ಯ ಕ್ಷೇತ್ರದತ್ತ ವಿಶ್ವವೇ ದೃಷ್ಟಿಹಾಯಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ

Update: 2021-02-23 16:16 GMT

ಹೊಸದಿಲ್ಲಿ, ಫೆ.23: ಜಗತ್ತು ಇಂದು ಭಾರತದ ಆರೋಗ್ಯ ಕ್ಷೇತ್ರದತ್ತ ನೋಡುತ್ತಿದೆ. ಮುಂದಿನ ದಿನಗಳಲ್ಲಿ ಭಾರತದ ವೈದ್ಯಕೀಯ ಶಿಕ್ಷಣ, ಭಾರತದ ವೈದ್ಯರು, ನರ್ಸ್‌ಗಳಿಗೆ ಅತ್ಯಧಿಕ ಬೇಡಿಕೆ ಬರಲಿದೆ. ಇದನ್ನು ನಾವು ನೆನಪಿಟ್ಟುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆರೋಗ್ಯಕ್ಷೇತ್ರಕ್ಕೆ ಬಜೆಟ್‌ನಲ್ಲಿ ಮೀಸಲಿರಿಸಿದ ಅನುದಾನದ ಅನುಷ್ಟಾನದ ಕುರಿತು ನಡೆದ ವೆಬಿನಾರ್‌ನಲ್ಲಿ ಮಾತನಾಡಿದ ಪ್ರಧಾನಿ, ಕೊರೋನ ವೈರಸ್ ಸೋಂಕಿನ ಸಮಸ್ಯೆಯನ್ನು ಕೇಂದ್ರ ಸರಕಾರ ಅತ್ಯಂತ ಸಮರ್ಪಕವಾಗಿ ನಿರ್ವಹಿಸುವಲ್ಲಿ ಖಾಸಗಿ ಆರೋಗ್ಯ ಕ್ಷೇತ್ರದವರ ನೆರವೂ ಶ್ಲಾಘನೀಯವಾಗಿದೆ ಎಂದರು. ಕೊರೋನದ ವಿರುದ್ಧ ಬಳಸುವ ‘ಮೇಡ್‌ಇನ್ ಇಂಡಿಯಾ’ ಲಸಿಕೆಗಳಿಗೆ ಬೇಡಿಕೆ ಹೆಚ್ಚಲಿದ್ದು ಇದಕ್ಕೆ ಭಾರತ ಸನ್ನದ್ಧಗೊಳ್ಳಬೇಕು. ಭವಿಷ್ಯದಲ್ಲಿ ಎದುರಾಗಲಿರುವ ರೋಗಗಳ ಬಗ್ಗೆಯೂ ನಾವು ಸನ್ನದ್ಧರಾಗಿರಬೇಕು ಎಂಬ ಪಾಠವನ್ನು ಕೊರೋನ ಸೋಂಕು ನಮಗೆ ಕಲಿಸಿದೆ. ಆದ್ದರಿಂದ ವೈದ್ಯಕೀಯ ಸಾಧನಗಳಿಂದ ಔಷಧಿವರೆಗೆ, ವೆಂಟಿಲೇಟರ್‌ಗಳಿಂದ ಲಸಿಕೆಯವರೆಗೆ, ವೈದ್ಯರಿಂದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರವರೆಗೆ ವೈದ್ಯಕೀಯ ಕ್ಷೇತ್ರದ ಎಲ್ಲಾ ಅಂಶಗಳನ್ನೂ ಸದೃಢಗೊಳಿಸುವ ಅಗತ್ಯವಿದೆ.

ಈ ಬಾರಿಯ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅಭೂತಪೂರ್ವ ಅನುದಾನ ನೀಡಿರುವುದು ಕೇಂದ್ರ ಸರಕಾರದ ಬದ್ಧತೆಯ ಪ್ರತೀಕವಾಗಿದೆ. ಭಾರತವನ್ನು ಆರೋಗ್ಯಯುತವಾಗಿಸಲು ನಾವು ನಾಲ್ಕು ಪ್ರಮುಖ ವಿಷಯಗಳ ಬಗ್ಗೆ ( ಅನಾರೋಗ್ಯದ ತಡೆಗಟ್ಟುವಿಕೆ ಮತ್ತು ಸ್ವಾಸ್ಥ್ಯಕ್ಕೆ ಪ್ರೋತ್ಸಾಹ, ಸರ್ವರಿಗೂ ಆರೋಗ್ಯಕ್ಷೇತ್ರದ ಸೌಲಭ್ಯದ ಲಭ್ಯತೆ, ಆರೋಗ್ಯ ಮೂಲಸೌಕರ್ಯ ನಿರ್ಮಾಣ, ಕೇಂದ್ರೀಕರಿಸಿದ ರೀತಿಯಲ್ಲಿ ಕಾರ್ಯನಿರ್ವಹಿಸುವಲ್ಲಿ ಆರೋಗ್ಯಕ್ಷೇತ್ರದ ವೃತ್ತಿಪರರ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುವುದು ) ಗಮನ ಹರಿಸುತ್ತಿದ್ದೇವೆ ಎಂದು ಮೋದಿ ಹೇಳಿದರು.

ಈ ಹಿಂದಿನ ಸರಕಾರಕ್ಕಿಂತ ನಮ್ಮ ಆಡಳಿತದ ದೃಷ್ಟಿಕೋನ ವಿಭಿನ್ನವಾಗಿದೆ. ಈ ಹಿಂದೆ ಆರೋಗ್ಯಕ್ಷೇತ್ರ ಅನಿಶ್ಚಿತತೆಯ ಗೂಡಾಗಿತ್ತು. ಆದರೆ ಸ್ವಚ್ಛತೆ, ಕ್ಷೇಮ, ಪೋಷಣೆ, ರೋಗಗಳ ತಡೆಗಟ್ಟುವಿಕೆ ಮತ್ತಿತರ ಸಂಬಂಧಿತ ವಲಯಗಳನ್ನು ಒಳಗೊಂಡಿರುವುದರಿಂದ ನಮ್ಮ ವಿಧಾನವು ಸಮಗ್ರವಾಗಿದೆ. ಕೊರೋನ ಸೋಂಕು ಮತ್ತು ಕ್ಷಯರೋಗದಲ್ಲಿ ಸಾಮ್ಯತೆಯಿದೆ. ಕೊರೋನ ಸೋಂಕಿನ ವಿರುದ್ಧ ಕೈಗೊಂಡಿದ್ದ ಪ್ರತಿಬಂಧಕ ಕ್ರಮಗಳನ್ನು ಕ್ಷಯರೋಗದ ವಿಷಯದಲ್ಲೂ ತೆಗೆದುಕೊಂಡರೆ 2025ರ ವೇಳೆಗೆ ಭಾರತ ಕ್ಷಯರೋಗ ಮುಕ್ತ ದೇಶವಾಗುವುದರಲ್ಲಿ ಸಂಶಯವಿಲ್ಲ ಎಂದು ಮೋದಿ ಹೇಳಿದರು. ಈ ಬಾರಿಯ ಬಜೆಟ್‌ನಲ್ಲಿ ಕೆಲವು ಕ್ಷೇತ್ರಗಳಿಗೆ ನಿರೀಕ್ಷಿತ ಮಟ್ಟದ ಅನುದಾನ ಲಭಿಸದಿರಬಹುದು. ಆದರೆ ಇದೇ ಕೊನೆಯ ಬಜೆಟ್ ಅಲ್ಲ. ಇನ್ನೂ ಅವಕಾಶವಿದೆ. ಆದ್ದರಿಂದ ಈಗ ಲಭಿಸಿದ ಹಣವನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸುವತ್ತ ಚಿಂತಿಸಬೇಕಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News