ದರೋಡೆ, ಕೊಲೆಗೆ ಸಂಚು ಆರೋಪ: ರೌಡಿಶೀಟರ್ ಗಳು ಸೇರಿ ಹಲವರನ್ನು ಬಂಧಿಸಿದ ಸಿಸಿಬಿ

Update: 2021-02-24 12:54 GMT

ಬೆಂಗಳೂರು, ಫೆ.24: ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸಿದ್ದ ತಂಡವೊಂದನ್ನು ಸೆರೆ ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬುಧವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಎರಡು ಕಾರುಗಳಲ್ಲಿ  ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಹೆದ್ದಾರಿ ರಸ್ತೆಗಳಲ್ಲಿ ಬರುವ ವಾಹನ ಸವಾರರ ಮೇಲೆ ಹಲ್ಲೆ ಮಾಡಿ ನಗದು-ಚಿನ್ನಾಭರಣಗಳನ್ನು ದೋಚಲು ತಂಡವೊಂದು ಸಂಚು ರೂಪಿಸಿತ್ತು. ಜತೆಗೆ ಕಾಡುಬೀಸನಹಳ್ಳಿ ಸೋಮ ಮತ್ತು ಆತನ ಸಹಚರರನ್ನು ಕೊಲೆ ಮಾಡುವ ಉದ್ದೇಶವೂ ಹೊಂದಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರ ತಂಡ, 11 ಜನರನ್ನು ಬಂಧಿಸಿದ್ದಾರೆ ಎಂದರು.

ರೌಡಿಶೀಟರ್ ಗಳಾದ ಹರೀಶ್, ವೆಂಕಿ ಯಾನೆ ವೆಂಕಟೇಶ್, ಕಿರಣ್ ಗೌಡ, ವಿಶ್ವನಾಥ್ ಭಂಡಾರಿ ಸೇರಿದಂತೆ ಒಟ್ಟು 11 ಜನರನ್ನು ಬಂಧಿಸಲಾಗಿದೆ. ಕಿರಣ್‍ಗೌಡ, ವಿಶ್ವನಾಥ  ಭಂಡಾರಿ ಮಂಗಳೂರು ಮೂಲದ ರೌಡಿಗಳಾಗಿದ್ದು, ಸುಪಾರಿ ಕಿಲ್ಲರ್ ಗಳೆಂದು ತಿಳಿದುಬಂದಿದೆ ಎಂದರು.

ಇನ್ನು, ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ರೌಡಿ ಕಾಡುಬೀಸನಹಳ್ಳಿ ರೋಹಿತ್ ಎಂಬಾತನು ಮಂಗಳೂರಿನಿಂದ ಕಿರಣ್‍ಗೌಡ, ವಿಶ್ವನಾಥ ಭಂಡಾರಿಯನ್ನು ಬೆಂಗಳೂರಿಗೆ ಕರೆತಂದಿದ್ದ. ಬಳಿಕ, ಕರಿಯಮ್ಮನ ಅಗ್ರಹಾರದಲ್ಲಿ ತನ್ನ ಬಳಿಯೇ ಇಟ್ಟುಕೊಂಡು ಕಾಡುಬೀಸನಹಳ್ಳಿ ಸೋಮ ಮತ್ತು ಆತನ ಸಹಚರರ ಕೊಲೆಗೆ ಸಂಚು ರೂಪಿಸಿದ್ದ ಮಾಹಿತಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾರೆ. ಬಂಧಿತ ದುಷ್ಕರ್ಮಿಗಳಿಂದ ಕೃತ್ಯಕ್ಕೆ ಬಳಸಿದ್ದ 18 ಮಾರಕಾಸ್ತ್ರ ಮತ್ತು ಎರಡು ಕಾರುಗಳನ್ನು ಜಪ್ತಿ ಮಾಡಿ, ತನಿಖೆ ಕೈಗೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಅದೇ ರೀತಿ, ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಫ್‍ಸಿಐ ರಸ್ತೆಯ ಶನಿ ಮಹಾತ್ಮ ದೇವಸ್ಥಾನ ಮುಂಭಾಗ ಕತ್ತಲಲ್ಲಿ ನಿಂತು ಪಾದಚಾರಿಗಳಿಗೆ ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ, ಮೊಬೈಲ್, ನಗದು ದೋಚಲು ಮುಂದಾಗಿದ್ದ ಮತ್ತೊಂದು ಗುಂಪನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಅಪ್ರಾಪ್ತ ಬಾಲಕನೂ ಇದ್ದು, ಮಂಜುನಾಥ(25), ಮೋಹನ್(23), ರಾಹುಲ್(19) ಸೇರಿದಂತೆ ನಾಲ್ವರು ಆರೋಪಿಗಳಾಗಿದ್ದಾರೆ. ಇವರಿಂದ ಕೃತ್ಯಕ್ಕೆ ಸಂಬಂಧಿಸಿದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಸಿಸಿಬಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕಳ್ಳಭಟ್ಟಿ: ಕಳ್ಳಭಟ್ಟಿ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿದ್ದ ರೌಡಿ ಮಝರ್ ಸೇರಿದಂತೆ ಹಲವರನ್ನು ದರೋಡೆ, ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.

ಪ್ರಮುಖ ಆರೋಪಿ ಮಝರ್, ಡಿಜೆಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಈತನ  ಮೇಲೆ ಎರಡು ಕೊಲೆ ಮತ್ತು ಎರಡು ಕೊಲೆಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿದೆ. ಈತನೊಂದಿಗೆ ಯೋಗೇಶ, ರಿಝ್ವಾನ್, ರಾಹುಲ್ ಎಂಬವರನ್ನು ಬಂಧಿಸಲಾಗಿದೆ.

ಮಂಗಳವಾರ ತಡರಾತ್ರಿ ಡಿಜೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿಗಾರ್ಡನ್, ಪ್ಯಾರಚೂಟ್ ಮಿಲಿಟರಿ ಮೈದಾನ ಪಕ್ಕದ ರಸ್ತೆಯಲ್ಲಿ ನಿಂತು ಹಳೆ  ದ್ವೇಷದಿಂದ ಇಬ್ಬರನ್ನು ಕೊಲೆಗೈದು, ಅವರಿಂದ ಚಿನ್ನಾಭರಣ ದೋಚಲು ಸಜ್ಜಾಗಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News