‘ಕೊರೋನಿಲ್’ ಕುರಿತಾದಂತೆ ಭಾರತೀಯ ವೈದ್ಯಕೀಯ ಸಂಘದ ಪ್ರತಿಕ್ರಿಯೆ ಅನಗತ್ಯ: ಪತಂಜಲಿ

Update: 2021-02-24 16:46 GMT

ಹೊಸದಿಲ್ಲಿ, ಫೆ.24: ಕೊರೋನಿಲ್ ಮಾತ್ರೆಯ ಕುರಿತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ)ನ ಅಭಿಪ್ರಾಯದಿಂದ ತನಗೆ ಆಘಾತವಾಗಿದೆ. ಕೊರೊನಿಲ್ ಮಾತ್ರೆ ಕೊರೋನ ಸೋಂಕಿನ ವಿರುದ್ಧದ ಸಾಕ್ಷ್ಯ ಆಧಾರಿತ ಉತ್ಪನ್ನವಾಗಿದೆ ಮತ್ತು ಇದನ್ನು ಲೈಸೆನ್ಸ್ ನೀಡುವ ಸಕ್ಷಮ ಪ್ರಾಧಿಕಾರ ಪರಿಶೀಲಿಸಿ ಪರೀಕ್ಷಿಸಿದೆ ಎಂದು ಪತಂಜಲಿ ಆಯುರ್ವೇದ ಸಂಸ್ಥೆ ಬುಧವಾರ ಹೇಳಿದೆ.

ಕೊರೋನಿಲ್ ಮಾತ್ರೆ ಕೊರೋನ ಸೋಂಕಿನ ವಿರುದ್ಧ ಪರಿಣಾಮಕಾರಿ ಔಷಧ ಎಂದು ವಿಶ್ವ ಆರೋಗ್ಯಸಂಸ್ಥೆ ಪ್ರಮಾಣೀಕರಿಸಿರುವುದಾಗಿ ಪತಂಜಲಿ ಸಂಸ್ಥೆ ನಿರ್ಲಜ್ಜ ಸುಳ್ಳುಹೇಳಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಸೋಮವಾರ ಖಂಡಿಸಿತ್ತು ಹಾಗೂ ಕೊರೋನಿಲ್ ಮಾತ್ರೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪತಂಜಲಿ ಆಯುರ್ವೇದ ಸಂಸ್ಥೆ ‘ ಐಎಂಎಯ ಹೇಳಿಕೆ ಅನಗತ್ಯವಾಗಿದೆ. ಮಾತ್ರೆಗೆ ಸಂಬಂಧಿಸಿದ ನಮ್ಮ ಎಲ್ಲಾ ಸಂಶೋಧನಾ ವಿವರಗಳನ್ನು ಕೇಂದ್ರ ಸರಕಾರದ ಆಯುಷ್ ಇಲಾಖೆಯೊಂದಿಗೆ ಹಂಚಿಕೊಂಡಿದ್ದೇವೆ. ಇದನ್ನು ಇಲಾಖೆ ಅನುಮೋದಿಸಿದೆ ಮತ್ತು ಕೊರೋನಿಲ್ ಮಾತ್ರೆ ಕೊರೋನ ಸೋಂಕಿನ ನಿರ್ವಹಣೆಗೆ ಔಷಧ ಎಂದು ಸ್ಪಷ್ಟವಾಗಿ ಹೇಳಿದೆ. 2021ರ ಫೆಬ್ರವರಿ 19ರಂದು ಸುದ್ದಿಗೋಷ್ಟಿಯಲ್ಲಿ ಪರಿಚಯಿಸಲಾದ ಔಷಧಿಯನ್ನು ಆಳವಾದ ಜೈವಿಕ ಮತ್ತು ರಾಸಾಯನಿಕ ಅಧ್ಯಯನ ಹಾಗೂ ವೈದ್ಯಕೀಯ ಪ್ರಯೋಗದ ಬಳಿಕವೇ ಪ್ರಮಾಣೀಕರಿಸಲಾಗಿದೆ’ ಎಂದು ಹೇಳಿದೆ.

ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಟ್ವಿಟರ್‌ನಲ್ಲಿ ಬರೆದಿರುವ ಪತ್ರದಲ್ಲಿ ಐಎಂಎ ಎತ್ತಿರುವ ಎಲ್ಲಾ ಪ್ರಶ್ನೆಗಳಿಗೂ ಒಂದೊಂದಾಗಿ ಉತ್ತರಿಸಿದ್ದಾರೆ. ‘ವೈದ್ಯರ ಹಿತಾಸಕ್ತಿ ಮತ್ತು ಸಮುದಾಯದ ಯೋಗಕ್ಷೇಮದ ಬಗ್ಗೆ ಗಮನ ಹರಿಸುವ, ಆಧುನಿಕ ವೈಜ್ಞಾನಿಕ ಔಷಧ ಪದ್ಧತಿ ಅನುಸರಿಸುತ್ತಿರುವ ವೈದ್ಯರ ರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆ, ಪ್ರತಿನಿಧಿ ಎಂದು ಹೇಳಿಕೊಳ್ಳುವ ಐಎಂಎನಲ್ಲಿರುವ ತರಬೇತಿ ಪಡೆದ ವೈದ್ಯರಿಗೆ, ವೈಜ್ಞಾನಿಕ ಸಂಶೋಧನಾ ವರದಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ನಿರಾಸೆಯ ವಿಷಯವಾಗಿದೆ ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಕೊರೋನಿಲ್ ಔಷಧದ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಉಪಸ್ಥಿತರಿದ್ದ ಬಗ್ಗೆ ಪ್ರತಿಕ್ರಿಯಿಸಿರುವ ಪತಂಜಲಿ ಸಂಸ್ಥೆ, ಆರೋಗ್ಯ ಸಚಿವರು ಯಾವುದೇ ಆಯುರ್ವೇದ ಔಷಧವನ್ನು ಸಮರ್ಥಿಸಿಲ್ಲ ಅಥವಾ ಆಧುನಿಕ ಔಷಧವನ್ನು ಟೀಕಿಸಿಲ್ಲ. ಓರ್ವ ಆರೋಗ್ಯಸಚಿವರಾಗಿ, ಈಗಿನ ಕೊರೋನದ ಸಂಕಷ್ಟ ಕಾಲದಲ್ಲಿ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ ಎಂದಿದೆ. ಪತಂಜಲಿ ಸಂಸ್ಥೆಗೆ ಸಿಒಪಿಪಿ(ಸರ್ಟಿಫಿಕೇಟ್ ಆಫ್ ಫಾರ್ಮಸ್ಯುಟಿಕಲ್ ಪ್ರೊಡಕ್ಟ್- ಔಷಧೀಯ ಉತ್ಪನ್ನ ಪ್ರಮಾಣಪತ್ರ) ನೀಡಿರುವುದು ಅನೈತಿಕ ಎಂಬ ವಾದ ಸರಿಯಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಉತ್ಪಾದನಾ ಪದ್ಧತಿ ಮಾನದಂಡದ ಅನುಗುಣವಾಗಿ, ಭಾರತೀಯ ಔಷಧ ಮಹಾನಿಯಂತ್ರಕರ ಕಚೇರಿ ಪ್ರಮಾಣ ಪತ್ರ ನೀಡಿದೆ. ಪತಂಜಲಿಯ ಕೊರೋನಿಲ್‌ಗೆ ಭಾರತ ಸರಕಾರದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಆಯುಷ್ ವಿಭಾಗ ಸಿಒಪಿಪಿ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಯೋಗ ಗುರು ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಫೆಬ್ರವರಿ 19ರಂದು ನೀಡಿದ್ದ ಹೇಳಿಕೆಯಲ್ಲಿ ‘ಸಂಸ್ಥೆಯ ಉತ್ಪನ್ನವಾದ ಕೊರೋನಿಲ್ ಮಾತ್ರೆಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣೀಕರಣ ಯೋಜನೆಯ ಪ್ರಕಾರ ಕೊರೋನ ಸೋಂಕಿನ ಚಿಕಿತ್ಸೆಗೆ ನೆರವಾಗುವ ಔಷಧಿಯೆಂದು ಆಯುಷ್ ಇಲಾಖೆಯ ಪ್ರಮಾಣಪತ್ರ ದೊರಕಿದೆ’ ಎಂದು ಹೇಳಿತ್ತು. ಆದರೆ ಈ ಬಗ್ಗೆ ಐಎಂಎ ಆಕ್ಷೇಪ ಎತ್ತಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ್ದ ಪತಂಜಲಿಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ, ‘ಕೊರೋನಿಲ್‌ಗೆ ವಿಶ್ವ ಆರೋಗ್ಯ ಸಂಸ್ಥೆಯ ಗುಣಮಟ್ಟ ಪ್ರಮಾಣಪತ್ರವನ್ನು ಭಾರತ ಸರಕಾರದ ಡಿಸಿಜಿಐ(ಔಷಧ ನಿಯಂತ್ರಕ ಪ್ರಧಾನ ನಿರ್ದೇಶನಾಲಯ) ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಔಷಧವನ್ನು ಮಾನ್ಯ ಅಥವಾ ಅಮಾನ್ಯ ಮಾಡುವುದಿಲ್ಲ’ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News