ಈ ದೇಶದಲ್ಲಿ ಇನ್ನು ಸುದ್ದಿಗಳಿಗೆ ಗೂಗಲ್, ಫೇಸ್‌ಬುಕ್ ಹಣ ಪಾವತಿಸಬೇಕು

Update: 2021-02-25 17:55 GMT

ಸುದ್ದಿಗಳಿಗೆ ಫೇಸ್‌ಬುಕ್, ಗೂಗಲ್ ಹಣ ಪಾವತಿಸುವ ಮಸೂದೆ ಅಂಗೀಕಾರ

ಸಿಡ್ನಿ (ಆಸ್ಟ್ರೇಲಿಯ), ಫೆ. 25: ಫೇಸ್‌ಬುಕ್ ಮತ್ತು ಗೂಗಲ್ ಕಂಪೆನಿಗಳು ತಮ್ಮ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಸುದ್ದಿಗಳಿಗಾಗಿ ಆಸ್ಟ್ರೇಲಿಯದ ಮಾಧ್ಯಮ ಕಂಪೆನಿಗಳಿಗೆ ಹಣ ಪಾವತಿಸಬೇಕು ಎಂದು ಹೇಳುವ ಮಸೂದೆಯನ್ನು ಆಸ್ಟ್ರೇಲಿಯ ಸಂಸತ್ತು ಗುರುವಾರ ಅಂಗೀಕರಿಸಿದೆ.

ಈ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದು, ಇತರ ದೇಶಗಳಿಗೆ ಪೂರ್ವನಿದರ್ಶನವಾಗುವ ಸಾಧ್ಯತೆಯಿದೆ.

 ದೈತ್ಯ ತಂತ್ರಜ್ಞಾನ ಕಂಪೆನಿಗಳು ತೀವ್ರವಾಗಿ ವಿರೋಧಿಸಿದ ಕೆಲವು ಅಂಶಗಳನ್ನು ಮೆದುಗೊಳಿಸಲು ಆಸ್ಟ್ರೇಲಿಯ ಸರಕಾರ ಒಪ್ಪಿದ ಬಳಿಕ, ಜಗತ್ತಿನ ಈ ಮಾದರಿಯ ಪ್ರಥಮ ಕಾನೂನು ಸುಲಲಿತವಾಗಿ ಅಂಗೀಕಾರಗೊಂಡಿತು. ಕೆಲವು ನಿಯಮಗಳನ್ನು ಮೆದುಗೊಳಿಸಲು ಆಸ್ಟ್ರೇಲಿಯ ಸರಕಾರ ಒಪ್ಪಿರುವುದಕ್ಕೆ ಪ್ರತಿಯಾಗಿ, ಸ್ಥಳೀಯ ಮಾಧ್ಯಮ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ತಂತ್ರಜ್ಞಾನ ಕಂಪೆನಿಗಳು ಮುಂದಾಗಿವೆ.

ಈ ಕಾನೂನು ಸಂಕಷ್ಟದಲ್ಲಿರುವ ಸ್ಥಳೀಯ ಮಾಧ್ಯಮ ಕಂಪೆನಿಗಳಿಗೆ ಶ್ರೀಮಂತ ಕಂಪೆನಿಗಳಾದ ಫೇಸ್‌ಬುಕ್ ಮತ್ತು ಗೂಗಲ್ ಭಾರೀ ಪ್ರಮಾಣದಲ್ಲಿ ಹಣ ನೀಡುವಂತೆ ಮಾಡುತ್ತದೆ.

ಮಾಧ್ಯಮಗಳ ಸರಕುಗಳಿಗೆ ನ್ಯಾಯೋಚಿತ ಸಂಭಾವನೆ

ತಾವು ಸಿದ್ಧಪಡಿಸುವ ಸರಕುಗಳಿಗಾಗಿ ಸುದ್ದಿ ಮಾಧ್ಯಮಗಳಿಗೆ ನ್ಯಾಯೋಚಿತ ಸಂಭಾವನೆ ಸಿಗುವಂತೆ ಈ ಕಾನೂನು ಖಾತರಿಪಡಿಸುತ್ತದೆ ಎಂದು ಆಸ್ಟ್ರೇಲಿಯ ಸರಕಾರ ಹೇಳಿದೆ. ಇದರೊಂದಿಗೆ, ಆಸ್ಟ್ರೇಲಿಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಪತ್ರಿಕೋದ್ಯಮ ಮುನ್ನಡೆಯಲು ಸಹಾಯವಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಸುದ್ದಿಗಳಿಗೆ ಬಿಲಿಯ ಡಾಲರ್: ಫೇಸ್‌ಬುಕ್

ಪತ್ರಿಕೋದ್ಯಮವನ್ನು ಬೆಂಬಲಿಸಲು ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಠ ಒಂದು ಬಿಲಿಯ ಡಾಲರ್ (ಸುಮಾರು 7,255 ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ಫೇಸ್‌ಬುಕ್ ಬುಧವಾರ ಘೋಷಿಸಿದೆ.

ಸುದ್ದಿ ಮಾಧ್ಯಮಗಳನ್ನು ಬೆಂಬಲಿಸಲು ಕಂಪೆನಿ ಸಿದ್ಧವಿದೆ ಎಂದು ಫೇಸ್‌ಬುಕ್‌ನ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ನಿಕ್ ಕ್ಲೆಗ್ ಬುಧವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News