ಕೆಎಸ್‌ಆರ್‌ಟಿಸಿ ‘ನಮ್ಮ ಕಾರ್ಗೋ' ಪಾರ್ಸಲ್ ಸೇವೆಗೆ ಸಿಎಂ ಯಡಿಯೂರಪ್ಪ ಚಾಲನೆ

Update: 2021-02-26 12:16 GMT
‘ನಮ್ಮ ಕಾರ್ಗೋ’ ಲಾಂಛನವನ್ನು ಯಡಿಯೂರಪ್ಪ ಶುಕ್ರವಾರ ಬಿಡುಗಡೆಗೊಳಿಸಿದರು.

ಬೆಂಗಳೂರು, ಫೆ. 26: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ನೂತನ ‘ನಮ್ಮ ಕಾರ್ಗೊ' ಪಾರ್ಸಲ್ ಸೇವೆ ಮತ್ತು ಕಿದ್ವಾಯಿ, ರೋಟರಿ ಆಶ್ರಯದಲ್ಲಿ ನಿರ್ಮಿಸಿರುವ ಮೊಬೈಲ್ ರಕ್ತದಾನದ ಬಸ್‍ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಚಾಲನೆ ನೀಡಿದರು.

ಶುಕ್ರವಾರ ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಮೇಲೆ ಕೆಎಸ್‌ಆರ್‌ಟಿಸಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆ ನೂತನ ಸೇವೆಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡಿದ ಅವರು, ‘ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇದರಿಂದ ಹೊರ ಬರಲು ಪರ್ಯಾಯ ಆದಾಯದ ಮೂಲಗಳನ್ನು ಕಂಡುಕೊಳ್ಳುತ್ತಿರುವುದು ಸಮಯೋಚಿತವಾಗಿದೆ' ಎಂದು ಹೇಳಿದರು.

‘ಬಿಎಂಟಿಸಿ ಹೊರತುಪಡಿಸಿ ಕೆಎಸ್‌ಆರ್‌ಟಿಸಿ ಸೇರಿದಂತೆ ಮೂರು ಸಾರಿಗೆ ಸಂಸ್ಥೆಗಳ ಬಸ್‍ಗಳು ಪ್ರತಿನಿತ್ಯ 51 ಲಕ್ಷ ಕಿ.ಮೀ ಸಂಚರಿಸಿ 38 ಲಕ್ಷ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುತ್ತಿದೆ. ಸಾರಿಗೆಯೇತರ ಆದಾಯ ಕ್ರೋಡೀಕರಿಸುವ ದೃಷ್ಟಿಯಿಂದ ಆರಂಭಿಸಿರುವ ಕಾರ್ಗೋ ಸೇವೆಯಿಂದ ಜನರಿಗೆ ಅನುಕೂಲಕರವಾಗಿದೆ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಜ್ಯದ ಒಟ್ಟು 109 ಪ್ರಮುಖ ಬಸ್ ನಿಲ್ದಾಣಗಳು ಸೇರಿದಂತೆ ನೆರೆಯ ಆಂಧ್ರ, ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು ರಾಜ್ಯಗಳಿಗೆ ನೂತನ ಸೇವೆ ಒದಗಿಸಲಾಗುತ್ತದೆ. ವಾರ್ಷಿಕ 70ರಿಂದ 80 ಕೋಟಿ ರೂ.ಗಳಷ್ಟು ಆದಾಯ ಗಳಿಸುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಇತರೆ ಬಸ್ ನಿಲ್ದಾಣಗಳಿಗೂ ಈ ಸೇವೆ ವಿಸ್ತರಿಸಲಾಗುವುದು' ಎಂದರು.

ರಕ್ತದಾನಕ್ಕೆ ಮೊಬೈಲ್ ಬಸ್: ರಕ್ತದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ, ಕಿದ್ವಾಯಿ ಹಾಗೂ ರೋಟರಿ ಸಂಸ್ಥೆ ಆಶ್ರಯದಲ್ಲಿ ನಿರ್ಮಿಸಿರುವ ರಕ್ತದಾನದ ಬಸ್‍ಗೆ ಇದೇ ವೇಳೆ ಸಿಎಂ ಚಾಲನೆ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಹಳೆಯ ಹವಾನಿಯಂತ್ರಿತ ಬಸ್‍ಗಳನ್ನು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಉಚಿತವಾಗಿ ನೀಡಲಾಗಿದ್ದು, ರೋಟರಿ ಸಂಸ್ಥೆ ಮೊಬೈಲ್ ರಕ್ತದಾನ ಬಸ್ ಮಾರ್ಪಡಿಸಿದ್ದು ಸ್ವಯಂಪ್ರೇರಿತ ರಕ್ತದಾನಿಗಳನ್ನು ಪ್ರೇರೇಪಿಸಲು ಸಂಸ್ಥೆ ಮುಂದಾಗಿದೆ.

ಇದೇ ಸಂದರ್ಭದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಸಾರಿಗೆ ನೌಕರರ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪ ವಿತರಿಸಿದರು. ಜನರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ಅವರು ಇದೇ ವೇಳೆ ಕರೆ ನೀಡಿದರು.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆಹಾರ ಸಚಿವ ಉಮೇಶ್ ಕತ್ತಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್, ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್, ಪರಿಷತ್ ಸದಸ್ಯ ರಮೇಶ್‍ಗೌಡ, ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ.ರಾಮಚಂದ್ರ, ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದಶಿ ಅಂಜುಮ್ ಪರ್ವೇಝ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News